ಬರ ನಿಭಾಯಿಸುವಲ್ಲಿ ಸರ್ಕಾರ ವಿಫಲ

ವಿಜಯವಾಣಿ ಸುದ್ದಿಜಾಲ ಜೇವರ್ಗಿ
ರಾಜ್ಯದಲ್ಲಿ ತಲೆದೋರಿರುವ ಬರಗಾಲವನ್ನು ಸಮರ್ಥವಾಗಿ ನಿಭಾಯಿಸಿ ಪರಿಹಾರ ಕಾರ್ಯ ಕೈಗೆತ್ತಿಕೊಂಡು ರೈತರ ಹಾಗೂ ಜನರ ನೆರವಿಗೆ ಬರುವಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಸಂಪೂರ್ಣ ವಿಫಲಗೊಂಡಿದೆ. ಸಚಿವರು ಯಾರ ಕಷ್ಟಗಳಿಗೂ ಸ್ಪಂದಿಸುತ್ತಿಲ್ಲ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.

ತಮ್ಮ ನೇತೃತ್ವದ ಬಿಜೆಪಿ ಬರ ಅಧ್ಯಯನ ತಂಡದೊಂದಿಗೆ ಸೋಮವಾರ ನಗರದಲ್ಲಿ ಬರ ಪರಿಹಾರ ಕುರಿತು ಜಿಲ್ಲಾಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ಬಳಿಕ ಜೇವರ್ಗಿ ತಾಲೂಕಿನಲ್ಲಿ ಮಳೆ ಇಲ್ಲದೆ ಒಣಗಿರುವ ಬೆಳೆಗಳನ್ನು ವೀಕ್ಷಿಸಿ ರೈತರೊಂದಿಗೆ ಚರ್ಚಿಸಿ ಬರದ ಗಂಭೀರತೆ ಅರಿತ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಸರ್ಕಾರ ಬರವನ್ನು ನಿರ್ಲಕ್ಷಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ರೈತರ ನೋವಿಗೆ ಸ್ಪಂದಿಸುತ್ತಿಲ್ಲ. ಸಭೆಗಳನ್ನು ನಡೆಸಿ ಪರಿಹಾರ ಕೆಲಸಗಳನ್ನು ಚುರುಕುಗೊಳಿಸುತ್ತಿಲ್ಲ. ರಾಜ್ಯದಲ್ಲಿ 100ಕ್ಕೂ ಹೆಚ್ಚು ಬರಪೀಡಿತ ತಾಲೂಕು ಘೋಷಿಸಿದ್ದು, ರಾಜ್ಯದಲ್ಲಿ 1743 ಕೋಟಿ ರೂ. ಬೆಳೆ ಹಾನಿಯಾಗಿದೆ. ಪ್ರತಿ ಕ್ಷೇತ್ರಕ್ಕೆ ಬರ ಪರಿಹಾರ ಕಾಮಗಾರಿಗಳಿಗಾಗಿ 50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ವಾಸ್ತವದಲ್ಲಿ ಕೇವಲ 25 ಲಕ್ಷ ರೂ. ಬಿಡುಗಡೆಯಾಗಿದೆ. ಅದರಲ್ಲೂ ಕೆಲಸಗಳನ್ನು ಆರಂಭಿಸಿಲ್ಲ ಎಂದು ಕಿಡಿಕಾರಿದರು.

ರೈತರ ಹೊಲಗಳಿಗೆ ಕಾಲಿಟ್ಟರೆ ನೋವಾಗುತ್ತದೆ. ನಿರೀಕ್ಷಿತ ಮಳೆ ಬರದೆ ಸಾಮಾನ್ಯ ಉತ್ಪಾದನೆಯ ಶೇ.10 ಬೆಳೆ ಬೆಳೆದಿಲ್ಲ. ರೈತರ ಸಾಲ ಮನ್ನಾ ಮಾಡಿದ್ದೀವಿ ಅಂತ ಪುಟಗಟ್ಟಲೇ ಸರ್ಕಾರ ಜಾಹೀರಾತು ಕೊಡುತ್ತಿದೆ ಹೊರತು, ನಯಾಪೈಸೆ ಮನ್ನಾ ಆಗಿಲ್ಲ. ರೈತರು ಸಾಲದ ಶೂಲದಿಂದ ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆಯೇ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕು ಎಂದರು.

ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್, ನಗರ ಜಿಲ್ಲಾಧ್ಯಕ್ಷರಾದ ಎಂಎಲ್ಸಿ ಬಿ.ಜಿ.ಪಾಟೀಲ್, ಮಾಧ್ಯಮ ಪ್ರಮುಖ ಸಂಗಣ್ಣ ಇಜೇರಿ ಇತರರಿದ್ದರು.

ರಾಜ್ಯದ ಮೈತ್ರಿ ಸರ್ಕಾರ ಹಂಪಿ ಉತ್ಸವ ಮಾಡಲು ಬರದ ನೆಪ ಹೇಳುತ್ತಿದೆ. ಟಿಪ್ಪು ಜಯಂತಿಯನ್ನು ಪ್ರತಿ ತಾಲೂಕು ಮಟ್ಟದಲ್ಲಿ ಆಚರಿಸಲು ಹಣವಿತ್ತು. ಈಗ ಹಂಪಿ ಉತ್ಸವಕ್ಕೆ ಹಣವಿಲ್ಲ, ಬರಗಾಲವಿದೆ ಎನ್ನುತ್ತಿರುವುದು ಸರಿಯಲ್ಲ. ಮೊದಲಿನಂತೆ ಉತ್ಸವ ಮಾಡಲು ಮುಂದಾಗಲಿ.
| ಕೆ.ಎಸ್.ಈಶ್ವರಪ್ಪ ಮಾಜಿ ಡಿಸಿಎಂ ಹಾಗೂ ಶಾಸಕ