ಹನೂರು: ಕೊಳ್ಳೇಗಾಲದಿಂದ ತಾಲೂಕಿನ ಬೈಲೂರು ಮಾರ್ಗಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ ಸೋಮವಾರ ಬೆಳಗ್ಗೆ ಸಿಂಗಾನಲ್ಲೂರು ಗ್ರಾಮದ ಬಳಿ ಕೆಟ್ಟು ನಿಂತ ಪರಿಣಾಮ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಯಿತು.
ಕೊಳ್ಳೇಗಾಲದಿಂದ ಮಧುವನಹಳ್ಳಿ, ಕಾಮಗೆರೆ, ಮಂಗಲ, ಕಣ್ಣೂರು, ಚನ್ನಾಲಿಂಗನಹಳ್ಳಿ, ಲೊಕ್ಕನಹಳ್ಳಿ, ಒಡೆಯರಪಾಳ್ಯ, ಬೈಲೂರು ಸೇರಿದಂತೆ ಇತರ ಗ್ರಾಮದ ಶಾಲೆಗಳಿಗೆ ತೆರಳುವ ಹೆಚ್ಚಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದೇ ಬಸ್‌ನಲ್ಲಿ ತೆರಳುತ್ತಾರೆ. ಹಾಗಾಗಿ ಎಂದಿನಂತೆ ಬೆಳಗ್ಗೆ ಆಯಾ ಗ್ರಾಮದ ಬಸ್ ನಿಲ್ದಾಣದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾದು ನಿಂತಿದ್ದರು. ಆದರೆ ಈ ಬಸ್ ಸಿಂಗಾನಲ್ಲೂರು ಗ್ರಾಮದ ಬಳಿ ಕೆಟ್ಟು ನಿಂತಿತ್ತು. ಪರಿಣಾಮ ಬಸ್‌ಗಾಗಿ ಕಾಯುತ್ತಿದ್ದವರು ತೊಂದರೆ ಅನುಭವಿಸಿದರು. ಇನ್ನು ಈ ಬಗ್ಗೆ ಮಾಹಿತಿ ತಿಳಿಯದೆ ಆಯಾ ಗ್ರಾಮದಲ್ಲಿ ಕಾದು ನಿಂತಿದ್ದವರು ಒಂದು ಗಂಟೆ ಬಳಿಕ ಬೇರೊಂದು ಬಸ್‌ನಲ್ಲಿ ತೆರಳಬೇಕಾಯಿತು. ಈ ಬಗ್ಗೆ ಶಿಕ್ಷಕರಿಂದ ಆಕ್ಷೇಪ ವ್ಯಕ್ತವಾಯಿತು.
ಹೊಸ ಬಸ್ ಬಿಡುವಂತೆ ಒತ್ತಾಯ: ಬೈಲೂರು ಮಾರ್ಗಕ್ಕೆ ತೆರಳುವ ಸಾರಿಗೆ ಬಸ್‌ನಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಾರೆ. ಆದರೆ ಈ ಮಾರ್ಗದಲ್ಲಿ ಹಳೆಯ ಬಸ್‌ಗಳ ಸಂಚಾರವಿರುವುದರಿಂದ ಆಗಾಗ್ಗೆ ಪಂಕ್ಚರ್ ಹಾಗೂ ತಾಂತ್ರಿಕ ದೋಷದಿಂದ ಬಸ್ ಅಲ್ಲಲ್ಲಿ ಕೆಟ್ಟು ನಿಲ್ಲುತ್ತಿದೆ.
ಇದರಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನಿಗದಿತ ಸಮಯಕ್ಕೆ ಶಾಲೆಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಸಮರ್ಪಕ ಬಸ್ ಸೌಕರ್ಯ ಕಲ್ಪಿಸುವಂತೆ ಶಿಕ್ಷಕರು ಸಂಬಂಧಪಟ್ಟ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರಾದರೂ ಕ್ರಮಕೈಗೊಂಡಿಲ್ಲ. ಪರಿಣಾಮ ಜೂ.27 ರಂದು ನಿಗದಿತ ಸಮಯಕ್ಕೆ ಬಸ್ ಆಗಮಿಸದ ಹಿನ್ನೆಲೆ ಬೈಲೂರಿನಲ್ಲಿ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದ್ದರು. ಆದರೂ ಪ್ರಯೋಜನವಾಗಿಲ್ಲ. ಇದೀಗ ಬಸ್ ಕೆಟ್ಟು ನಿಂತಿರುವುದಕ್ಕೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತೀವ್ರ ಆಕ್ಷೇಪವ್ಯಕ್ತಪಡಿಸಿದ್ದು, ಹೊಸ ಬಸ್ ಬಿಡುವಂತೆ ಒತ್ತಾಯಿಸಿದ್ದಾರೆ.