ಹಳೇಬೀಡು: ನಮ್ಮ ತಂದೆಯವರ ಅಭಿವೃದ್ಧಿ ಪ್ರೇರಿತ ಕನಸುಗಳನ್ನು ನನಸು ಮಾಡುವುದೇ ನನ್ನ ರಾಜಕೀಯ ಜೀವನದ ಮುಖ್ಯಗುರಿಯಾಗಿದ್ದು, ಸದಾ ರೈತರ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಹಳೇಬೀಡು ಸಮೀಪದ ಪುಷ್ಪಗಿರಿ ಬಯಲು ರಂಗಮಂದಿರದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಪುಷ್ಪಗಿರಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನನ್ನ ರಾಜಕೀಯ ಜೀವನವನ್ನು ಪಕ್ಷದ ವರಿಷ್ಠರು ಮತ್ತು ನಮ್ಮ ತಂದೆ ನಿರ್ಧರಿಸುತ್ತಾರೆ. ಅಲ್ಲಿಯವರೆಗೂ ಅವರ ಅಭಿವೃದ್ಧಿ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತು ದುಡಿಯುತ್ತೇನೆ. ಕರ್ನಾಟಕದಲ್ಲಿ ಜನಕ್ಷಾಮ ತಲೆದೋರದಂತೆ ರೂಪಿಸುತ್ತಿರುವ ಅನೇಕ ಯೋಜನೆಗಳನ್ನು ಸಾಕಾರಗೊಳಿಸಲು ಶ್ರಮಿಸುತ್ತೇನೆ ಎಂದರು.
ಜಗತ್ತಿನಲ್ಲಿ ಶ್ರೇಷ್ಠರೆನಿಸಿಕೊಂಡ ಸಂತರೆಂದರೆ ಸಿದ್ಧಗಂಗಾ ಶ್ರೀಗಳು ಮಾತ್ರ. ನಡೆದಾಡುವ ದೇವರು ಎಂದು ನಾವು ಇನ್ನಾರನ್ನೂ ಕರೆಯಲು ಸಾಧ್ಯವಿಲ್ಲ. ಅವರ ದಿವ್ಯ ಮಾರ್ಗದರ್ಶ ನದಂತೆ ಎಲ್ಲರೂ ಮುನ್ನೆಡೆಯುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಹಳೇಬೀಡು ಭಾಗಕ್ಕೆ ಶಾಶ್ವತ ನೀರಾವರಿ ಕಲ್ಪಿಸುವ ರಣಘಟ್ಟ ಯೋಜನೆಯ ಬಗ್ಗೆ ಕ್ಷೇತ್ರದ ಶಾಸಕ ಕೆ.ಎಸ್.ಲಿಂಗೇಶ್ ಅವರ ಬಳಿ ವಿವರವಾಗಿ ಚರ್ಚಿಸಿದ್ದೇನೆ. ಯೋಜನೆಗೆ ಬೇಕಾಗುವ ಸಂಪನ್ಮೂಲ ಒದಗಿಸುವ ಸಂಬಂಧ ಕರೆಯ ಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ನಾನೂ ಇದ್ದೆ. ಹಾಗಾಗಿ ನನಗೆ ಸಮಸ್ಯೆ ಮತ್ತು ಕಾಮಗಾರಿಯ ಬಗ್ಗೆ ಸಂಪೂರ್ಣ ಅರಿವಿದೆ. ಮುಖ್ಯ ಮಂತ್ರಿ ಅವರೊಂದಿಗೆ ಮಾತನಾಡಿ ಶೀಘ್ರದಲ್ಲೇ ಕ್ಯಾಬಿನೆಟ್ ಒಪ್ಪಿಗೆ ಪಡೆಯುತ್ತೇವೆ ಎಂದರು.
ಶಾಸಕ ಪ್ರೀತಂ.ಜೆ.ಗೌಡ ಮತ್ತು ಬಿ.ಸಿ. ಪಾಟೀಲ್ ಮಾತನಾಡಿದರು. ಪುಷ್ಪಗಿರಿ ಉತ್ಸವಕ್ಕೆ ಹೆಚ್ಚಿನ ಕೊಡುಗೆ ನೀಡಿದ ಉದ್ಯಮಿ ಗ್ರಾನೈಟ್ ರಾಜಶೇಖರ್ ದಂಪತಿಯನ್ನು ಮಠದ ವತಿಯಿಂದ ಸನ್ಮಾನಿಸಲಾಯಿತು. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಗೌರವ ಸಮರ್ಪಿಸಲಾಯಿತು.
ಪುಷ್ಪಗಿರಿಶ್ರೀ, ಶಾಸಕ ಕೆ.ಎಸ್.ಲಿಂಗೇಶ್, ಮುಖಂಡರಾದ ಕೊರಟಗೆರೆ ಪ್ರಕಾಶ್, ಹುಲ್ಲಹಳ್ಳಿ ಸುರೇಶ್, ಜಿವಿಟಿ ಬಸವರಾಜು ಹಾಜರಿದ್ದರು.