ದೇಶದ ಭವಿಷ್ಯ ಯುವಜನರ ಕೈಯಲ್ಲಿ

ಚಾಮರಾಜನಗರ: ಅಮೆರಿಕದ ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿವಿವೇಕಾನಂದರು ಬಳಸಿದ ‘ಸಹೋದರ, ಸಹೋದರಿಯರೇ’ ಎಂಬ ಶಬ್ದಗಳು ಸ್ವಾರ್ಥ, ಮೋಸ, ವಂಚನೆ ರಹಿತ ಶಬ್ದಗಳಾಗಿವೆ ಎಂದು ಉಪನ್ಯಾಸಕ ಸುರೇಶ್ ಎನ್.ಋಗ್ವೇದಿ ಅಭಿಪ್ರಾಯಪಟ್ಟರು.


ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ’ ನ್ಯೂಸ್ ಚಾನಲ್ ಸಹಯೋಗದಲ್ಲಿ ಯುವ ದಿನಾಚರಣೆ ಅಂಗವಾಗಿ ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ‘ಯುವ ಸಾಧಕರ ಜತೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


1893ರ ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ನಮ್ಮ ದೇಶದ ಸಂಸ್ಕೃತಿ ಹಾಗೂ ಹಿಂದು ಧರ್ಮದ ಬಗ್ಗೆ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣ ಇಡೀ ಜಗತ್ತೇ ಭಾರತದತ್ತ ನೋಡುವಂತೆ ಮಾಡಿತು. ಅಂತೆಯೆ, ಅವರು ಬಳಸಿದ ಸಹೋದರ, ಸಹೋದರಿಯರೇ ಎಂಬ ಶಬ್ದಗಳು ಅಂತರಂಗದ ಶಬ್ದಗಳಾಗಿದ್ದು, ಅವು ಕರುಳಿನ ಕುಡಿ, ಗರ್ಭದಿಂದ ಬರುವಂಥವು ಎಂದರು.


ಸ್ವಾಮಿವಿವೇಕಾನಂದರು ಆತ್ಮವಿಶ್ವಾಸದ ಗಣಿ. ಪ್ರತಿ ರಾಷ್ಟ್ರಕ್ಕೂ ತನ್ನದೇ ಆದ ಅಸ್ಮಿತೆ ಇರುತ್ತದೆ. ಅಧ್ಯಾತ್ಮ ನಮ್ಮ ದೇಶದ ದೊಡ್ಡ ಶಕ್ತಿಯಾಗಿದ್ದು, ಇದು ಜಗತ್ತಿಗೆ ಭಾರತ ನೀಡಿರುವ ಕೊಡುಗೆಯೂ ಆಗಿದೆ ಎಂದರು.


ವ್ಯಕ್ತಿತ್ವ, ಚಾರಿತ್ರೃ, ಶೀಲವನ್ನು ಅತ್ಯಂತ ಶಿಸ್ತಿನಿಂದ ಇಟ್ಟುಕೊಳ್ಳುವಂತೆ ವಿವೇಕಾನಂದರು ಹೇಳಿದ್ದರು. ಪ್ರಸ್ತುತ ಬ್ರಹ್ಮಚರ್ಯೆ ಪಾಲನೆ ಇಲ್ಲದಂತಾಗಿದೆ. ಧ್ಯಾನ, ಪೂಜೆ, ದೇವರನ್ನು ಬಿಟ್ಟಿದ್ದೇವೆ. ಭಾವನೆಗೆ ಸಂಬಂಧಪಟ್ಟ ಯಾವುದೇ ಚಿಂತನೆಯೇ ದೇವರಾಗಿದೆ. ಬ್ರಹ್ಮಚರ್ಯೆ ಮಾಡದಿದ್ದರೆ ಗುರಿ ಮುಟ್ಟಲು ಕಷ್ಟವಾಗುತ್ತದೆ ಎಂದು ಹೇಳಿದರು.


ಪ್ರಸ್ತುತ ದೇಶದಲ್ಲಿ 15-35 ವಯಸ್ಸಿನ 51 ಕೋಟಿ ಯುವಜನಾಂಗವಿದೆ. ಇವರೆಲ್ಲ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದರೆ ದೇಶವನ್ನು ಸದೃಢವಾಗಿ ಮಾಡಬಹುದು. ವಿದ್ಯಾರ್ಥಿಗಳು ಸದಾಕಾಲ ಒಳ್ಳೆಯ ಚಿಂತನೆಗಳನ್ನು ಇಟ್ಟುಕೊಳ್ಳಬೇಕು. ಜತೆಗೆ, ದೇಹದ ಒಳಗೆ ಆದರ್ಶಗಳನ್ನು ಕಟ್ಟಿಕೊಳ್ಳಬೇಕು ಎಂದರು.


ಯುವಜನತೆ ಒಳ್ಳೆಯ ಚಿಂತನೆ ಮಾಡಿ:ಸ್ವಾಮಿ ವಿವೇಕಾನಂದರು 39 ವರ್ಷ ಮಾತ್ರ ಬದುಕಿದ್ದರು. ಆದರೆ ಅವರ ಸಾಧನೆ ದೊಡ್ಡದು ಎಂದು ರಂಗಕರ್ಮಿ ಸಿ.ಎಂ.ನರಸಿಂಹಮೂರ್ತಿ ಹೇಳಿದರು.


ವಿವೇಕಾನಂದರಿಗೆ ಭಾರತದ ಮೇಲೆ ಇದ್ದ ಪ್ರೀತಿ ಅಪಾರವಾದದ್ದು. ದೇಶದ ಸಂಸ್ಕೃತಿ, ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದರು. ಯುವಜನತೆ ದೇಶದ ಸಂಪತ್ತು. ಆದರೆ ಪ್ರಸ್ತುತ ಮೊಬೈಲ್‌ನಿಂದ ಹಾಳಾಗುತ್ತಿದ್ದಾರೆ. ಮಾಧ್ಯಮಗಳು ಮೂಢನಂಬಿಕೆ ಬಿತ್ತುತ್ತಿರುವುದು ವಿಪರ್ಯಾಸ ಎಂದರು.


ವಿದ್ಯಾರ್ಥಿಗಳು ಒಳ್ಳೆಯ ಪುಸ್ತಕಗಳನ್ನು ಓದುವುದರ ಜತೆಗೆ, ಒಳ್ಳೆಯ ಚಿಂತನೆಗಳನ್ನು ಮಾಡಬೇಕು. ಆದರ್ಶ ಜೀವನ ನಡೆಸುವ ಮೂಲಕ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಗಮನಹರಿಸಬೇಕು. ಸಮಾಜದಲ್ಲಿರುವ ಅನಿಷ್ಟ ಪದ್ಧತಿಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಮೌಢ್ಯ ಆಚರಣೆಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.


ವಿದ್ಯಾರ್ಥಿಗಳು ಸ್ವಾಮಿವಿವೇಕಾನಂದ, ಮಹಾತ್ಮಗಾಂಧಿ, ಡಾ.ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಜಾತೀಯತೆ ದೇಶವನ್ನು ಹಾಳು ಮಾಡುತ್ತಿದ್ದು, ಇದರ ವಿರುದ್ಧ ಹೋರಾಟ ಮಾಡುವ ಅಗತ್ಯವಿದೆ ಎಂದು ತಿಳಿಸಿದರು.

ಸ್ಫೂರ್ತಿದಾಯಕ ಕಾರ್ಯಕ್ರಮ: ಸಂವಾದ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿದ್ದು, ಜ್ಞಾನ ಹೆಚ್ಚಾಗಲು ಸಹಕಾರಿಯಾಗಿದೆ. ಸಾಧಕರನ್ನು ಅವರಿರುವ ಕಡೆಯೇ ಭೇಟಿ ಮಾಡಿ ಮಾತನಾಡಿಸುವ ಬದಲು ಅವರೇ ನಮ್ಮ ಕಾಲೇಜಿಗೆ ಬಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ್ದು ಅನುಕೂಲಕರವಾಗಿತ್ತು ಎಂದು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಮತಿ ಹೇಳಿದರು.


ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ಆಯೋಜನೆಗೊಂಡಾಗ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗುತ್ತದೆ. ಈ ನಿಟ್ಟಿನಲ್ಲಿ ‘ವಿಜಯವಾಣಿ’ ದಿನಪತ್ರಿಕೆ ಮತ್ತು ‘ದಿಗ್ವಿಜಯ’ ನ್ಯೂಸ್ ಚಾನಲ್ ಉತ್ತಮ ಕೆಲಸ ಮಾಡಿವೆ. ವಿದ್ಯಾರ್ಥಿಗಳ ಕಲಿಕೆಗೆ ವೇದಿಕೆ ಕಲ್ಪಿಸಿ ಅನುಕೂಲ ಮಾಡಿಕೊಟ್ಟಿವೆ ಎಂದರು.

Leave a Reply

Your email address will not be published. Required fields are marked *