ಮೂರನೆ ದಿನವೂ ಪತ್ತೆಯಾಗದ ಹುಲಿ


ವಿಜಯವಾಣಿ ಸುದ್ದಿಜಾಲ ಗುಂಡ್ಲುಪೇಟೆ
ತಾಲೂಕಿನ ಕಾಡಂಚಿನ ಹಂಗಳ ಹಾಗೂ ಕಲಿಗೌಡನಹಳ್ಳಿ ಸಮೀಪ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಹುಲಿಯ ಸೆರೆಗೆ ಅರಣ್ಯ ಇಲಾಖೆ ಮೂರನೇ ದಿನವೂ ಕಾರ್ಯಾಚರಣೆ ಮುಂದುವರಿಸಿದೆ.
ಮೂರು ದಿನದ ಹಿಂದೆ ವಾಚರ್ ರಾಮು ಎಂಬುವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದ ಹುಲಿ ಮರು ದಿನ ಕಲಿಗೌಡನಹಳ್ಳಿ ಸಮೀಪ ಕಾಣಿಸಿಕೊಂಡಿತ್ತು. ಇದರ ಸೆರೆಗೆ ಅರಣ್ಯ ಇಲಾಖೆಯು ಎರಡು ಆನೆಗಳ ಸಹಾಯದಿಂದ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದರೂ ಹುಲಿಯ ಇರುವಿಕೆ ಕಾಣದೆ ಕಾರ್ಯಾಚರಣೆ ಕೈಬಿಡಲು ನಿರ್ಧರಿಸಿದ್ದರು. ಆದರೆ ಗ್ರಾಮದ ಮಾದೇಗೌಡ ಎಂಬುವರ ಟೊಮ್ಯಾಟೊ ತೋಟದಲ್ಲಿ ಹುಲಿ ಮಲಗಿದ್ದನ್ನು ಕಣ್ಣಾರೆ ಕಂಡ ಗ್ರಾಮಸ್ಥರು ಹುಲಿ ಸೆರೆಹಿಡಿಯುವಂತೆ ಪಟ್ಟುಹಿಡಿದಿದ್ದಾರೆ.
ಈ ಹಿನ್ನೆಲೆಯಲ್ಲಿ ಜಯಪ್ರಕಾಶ್ ಹಾಗೂ ಕೃಷ್ಣ ಹೆಸರಿನ ಎರಡು ಸಾಕಾನೆಗಳ ನೆರವಿನಿಂದ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹುಲಿ ಮೊದಲಿಗೆ ಕಾಣಿಸಿಕೊಂಡ ಹಂಗಳ ದೊಡ್ಡಕೆರೆ ಸಮೀಪದ ಕಂದದ ಹಳ್ಳದ ಸಮೀಪ ಬೋನು ಹಾಗೂ ಕ್ಯಾಮರಾಗಳನ್ನು ಅಳವಡಿಸಲಾಗಿದ್ದರೂ ಹುಲಿ ಅತ್ತ ಸುಳಿದಿಲ್ಲ. ಇದರಿಂದ ಆನೆಗಳ ನೆರವಿನಿಂದ ಕೂಂಬಿಂಗ್ ನಡೆಸಲಾಗುತ್ತಿದೆ ಎಂದು ಗೋಪಾಲಸ್ವಾಮಿಬೆಟ್ಟ ವಲಯದ ಆರ್‌ಎಫ್‌ಒ ಪುಟ್ಟಸ್ವಾಮಿ ತಿಳಿಸಿದರು.
ಕಾರ್ಯಾಚರಣೆಯಲ್ಲಿ ಬಂಡೀಪುರ ಉಪವಿಭಾಗದ ಎಸಿಎಫ್ ರವಿಕುಮಾರ್, ಪಶುವೈದ್ಯ ಡಾ.ನಾಗರಾಜು, ಡಾ.ಮುಜೀಬ್ ಹಾಗೂ ಎಸ್‌ಟಿಪಿಎಫ್ ಸಿಬ್ಬಂದಿ ಭಾಗವಹಿಸಿದ್ದರು.