ಅರಕಲಗೂಡು: ತಾಲೂಕಿನ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ಶನಿವಾರ ರಾತ್ರಿ ವಿದ್ವಾನ್ ಅಮಿತ್ ನಾಡಿಗ್ ತಂಡದ ಸದಸ್ಯರು ಪ್ರಸ್ತುತಪಡಿಸಿದ ಕೊಳಲು ವಾದನ ಕಛೇರಿ ಜನರನ್ನು ಮಂತ್ರಮುಗ್ಧರನ್ನಾಗಿಸಿತು.
ಗ್ರಾಮದ ರಾಮ ಮಂದಿರದ ವರ್ಣರಂಜಿತ ಮಂಟಪದಲ್ಲಿ ದೀಪಾವಳಿ ಹಬ್ಬದ ಸಂಜೆ ಆಯೋಜಿಸಿದ್ದ ಕೊಳಲು ವಾದನದ ನೀನಾದ ಸಂಗೀತಾಸ್ತಕರ ಮನಸ್ಸಿಗೆ ಮುದ ನೀಡಿತು. ಆರಂಭದಲ್ಲಿ ವಿದ್ವಾನ್ ಅಮಿತ್ ನಾಡಿಗ್ ಅವರು ಪುರಂದರ ದಾಸರ ಕೃತಿಯೊಂದಿಗೆ ಸೌರಾಷ್ಟ್ರ, ಪೂರ್ವಿಕ ಕಲ್ಯಾಣಿ, ರಂಜಿನಿ ರಾಗದಲ್ಲಿ ಶ್ರೀ ತ್ಯಾಗರಾಜರ ಕೃತಿಗಳನ್ನು ಒಂದೂಕಾಲು ತಾಸು ನಿರಂತರವಾಗಿ ನುಡಿಸಿ ಜನಮನ ಸೂರೆಗೊಂಡರು.
ಕೊಳಲು ವಾದನಕ್ಕೆ ತಕ್ಕಂತೆ ನಾದಮಯವಾಗಿ ಹೊರಹೊಮ್ಮಿದ ವಿದ್ವಾನ್ ಬಿ.ಸಿ. ಮಂಜುನಾಥ್ ಅವರ ಮೃದಂಗದ ಮೋಡಿಗೆ ಬೆರಗಾದ ಜನರು ತಲೆದೂಗಿದರು. ವಿದ್ವಾನ್ ಸೋಮಶೇಖರ್ ಅವರು ಕೊನ್ನಕ್ಕೋಲ್ ನುಡಿಸಿ ಸಂಗೀತಾಸಕ್ತರನ್ನು ನಾದಲೋಕದಲ್ಲಿ ತೇಲಿಸಿದರು. ಪುಟ್ಟ ಬಾಲಕ ಸ್ಕಂದ ಘಟ ನುಡಿಸಿ ಕೊಳಲು ವಾದನಕ್ಕೆ ಸಾಥ್ ನೀಡಿದ್ದು ಜನರ ಮೆಚ್ಚುಗೆಗೆ ಪಾತ್ರವಾಯಿತು.