ನಡುರಸ್ತೆಗೆ ಬಂದ ಹೂವಿನ ಕುಂಡ…!

ಮೈಸೂರು; ಕುಕ್ಕರಹಳ್ಳಿಯ ಸರ್ಕಾರಿ ಶಾಲೆ ಎದುರಿನ ರಸ್ತೆಯಲ್ಲಿ ಗುರುವಾರ ಹೂವಿನ ಕುಂಡವೊಂದು ಧುತ್ತನೆ ಕಾಣಿಸಿಕೊಂಡಿದೆ. ಆದರೆ, ಇದು ನೈಜ ಹೂವಿನ ಕುಂಡವಲ್ಲ. ಕಲಾವಿದನ ಕೈಚಳಕದಲ್ಲಿ ಸೃಷ್ಟಿಯಾಗಿರುವ ಕಲೆಯ ಪ್ರತಿರೂಪವಷ್ಟೇ!

ಈ ರಸ್ತೆಯಲ್ಲಿ ಐದಾರು ಅಡಿಗಳಷ್ಟು ತಗ್ಗು ಬಿದ್ದಿದೆ. ಆ ಮೂಲಕ ಅಪಾಯವನ್ನು ಆಹ್ವಾನಿಸುತ್ತಿದೆ. ವಾಹನ ಸವಾರರು ಈ ಗುಂಡಿಗೆ ಬಿದ್ದರೆ ಅಪಘಾತವಾಗುವುದು ಕಟ್ಟಿಟ್ಟ ಬುತ್ತಿ. ವಾಹನ ದಟ್ಟಣೆ ಇರುವ ಈ ರಸ್ತೆಯಲ್ಲಿ ಇಂತಹ ಅಧ್ವಾನವಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸರಿಪಡಿಸಲು ಮುಂದಾಗಿಲ್ಲ.

ಈ ಹಿನ್ನೆಲೆಯಲ್ಲಿ ರಸ್ತೆ ಅವ್ಯವಸ್ಥೆ ಕುರಿತು ಕಲೆಯ ಮೂಲಕ ಸಂಬಂಧಪಟ್ಟವರಿಗೆ ಚಾಟಿ ಬೀಸಿರುವ ಸ್ಥಳೀಯರೇ ಆದ ಕಲಾವಿದ ಬಾದಲ್ ನಂಜುಂಡಸ್ವಾಮಿ, ಗುಂಡಿಯಲ್ಲಿ ಗಿಡ ನೆಟ್ಟು, ಅದರ ಸುತ್ತ ಕುಂಡವನ್ನು ಚಿತ್ರಿಸಿದ್ದಾರೆ. ಇದು ರಸ್ತೆಯಲ್ಲಿ ಹೂವಿನ ಕುಂಡ ಇಟ್ಟಂತೆ ಭಾಸವಾಗುತ್ತಿದ್ದು, ಹಾದಿಹೋಕರ ಗಮನ ಸೆಳೆಯುತ್ತಿದೆ. ಈ ಮೂಲಕ ಅಪಾಯ ತಡೆಗೆ ಜಾಗೃತಿ ಮೂಡಿಸುತ್ತಿದೆ.