ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು


ವಿಜಯವಾಣಿ ಸುದ್ದಿಜಾಲ ಕುಶಾಲನಗರ
ಕುಶಾಲನಗರ ಸಮೀಪದ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಮೊದಲ ಹಂತದ ಗ್ರಾಮಸಭೆಯು ಗ್ರಾಪಂ ಅಧ್ಯಕ್ಷೆ ಭವ್ಯಾ ಅಧ್ಯಕ್ಷತೆಯಲ್ಲಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗುರುವಾರ ಜರುಗಿತು.
ಮೊದಲಿಗೆ ಕಳೆದ ಸಭೆಯಲ್ಲಿ ಗೈರಾದ ವಿವಿಧ ಇಲಾಖೆಗಳ ಅಧಿಕಾರಿಗಳು ಮುಂದಿನ ಸಭೆಗೆ ಹಾಜರಾಗುವಂತೆ ನೋಡಲ್ ಅಧಿಕಾರಿಯ ಮುಖಾಂತರ ಗ್ರಾಮಸ್ಥರು ಒತ್ತಾಯಿಸಿದ್ದರು. ಆದರೆ ಕೆಲವು ಇಲಾಖೆಗಳ ಅಧಿಕಾರಿಗಳು ಈ ಸಭೆಗೂ ಬಾರದೆ ಇರುವ ಬಗ್ಗೆ ನೋಡಲ್ ಅಧಿಕಾರಿಯನ್ನು ಗ್ರಾಮಸ್ಥರಾದ ರಾಜೇಶ್, ಗಣೇಶ್, ಕೃಷ್ಣ, ಕುಮಾರ್ ತರಾಟೆಗೆ ತೆಗೆದುಕೊಂಡರು.
ಈ ಬಗ್ಗೆ ಪ್ರತಿಕ್ರಿಯಿಸಿದ ನೋಡಲ್ ಅಧಿಕಾರಿ ಹೇಮಂತ್ ಕುಮಾರ್, ನಾನು ಸಭೆಯ ನಡಾವಳಿಯನ್ನು ತಾಲೂಕು ಕಾರ್ಯ ನಿರ್ವಹಣಾಧಿಕಾರಿಗೆ ಒಪ್ಪಿಸಿದ್ದೇನೆ. ಅದರಂತೆ ಅವರು ಕಾರ್ಯಪ್ರವೃತ್ತರಾಗಬೇಕಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಕುಶಾಲನಗರ ಯುಜಿಡಿಯ ಕಾಮಗಾರಿ ಹಾಗೂ ಅಲ್ಲಲ್ಲಿ ರಸ್ತೆಗಳಲ್ಲಿ ಗುಂಡಿ ತೆಗೆದಿರುವ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಇಲಾಖೆ ಅಧಿಕಾರಿಗಳು, ಈಗಾಗಲೇ ಯುಜಿಡಿ ಕಾಮಗಾರಿಗೆ ಸಂಬಂಧಪಟ್ಟಂತೆ ಕಡತಗಳು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇದೆ. ಜಿಲ್ಲಾಧಿಕಾರಿಗಳು ಖುದ್ದು ಭೇಟಿ ನೀಡಿ, ಸ್ಥಳ ಪರಿಶೀಲಿಸಿದ ಬಳಿಕ ಪರಿಹಾರವನ್ನು ಕಂಡುಕೊಳ್ಳಲಾಗುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.
ಗೊಂದಿಬಸವನಹಳ್ಳಿ ವ್ಯಾಪ್ತಿಗಳಲ್ಲಿ ಕಾಡಾನೆ ಹಾವಳಿ ಮತ್ತು ಅರಣ್ಯಕ್ಕೆ ಹೊಂದಿಕೊಂಡಂತಿರುವ 300ಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ಮತ್ತು ಇನ್ನಿತರ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ಗ್ರಾಮಸ್ಥರು ಮನವಿ ಮಾಡಿದರು. ಸಭೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯೆ ಪುಷ್ಪಾ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ತಾರಾನಾಥ್, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

Leave a Reply

Your email address will not be published. Required fields are marked *