Wednesday, 14th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಸರ್ಕಾರದಿಂದ ನಿಷೇಧಗೊಂಡ ಪ್ರಥಮ ಕನ್ನಡ ಚಿತ್ರ!

Friday, 01.06.2018, 3:02 AM       No Comments

<<ಅಂತಕ್ಕೆ 37; ಅಂಬಿಗೆ 66>>

| ಗಣೇಶ್ ಕಾಸರಗೋಡು

ಆ ಕಾಲದಲ್ಲಿ ಸೆನ್ಸಾರ್ ಅಧಿಕಾರಿಗಳ ನಿದ್ದೆಗೆಡಿಸಿದ ವಿವಾದಿತ ‘ಅಂತ’ ಚಿತ್ರದಲ್ಲಿ ಅಂಬರೀಷ್ ಬದಲು ಡಾ. ರಾಜಕುಮಾರ್ ಅಥವಾ ವಿಷ್ಣುವರ್ಧನ್ ಅಭಿನಯಿಸಬೇಕಾಗಿತ್ತ? ಇಂಥದ್ದೊಂದು ಕೈಕಾಲಿಲ್ಲದ ಗಾಸಿಪ್ ಪತ್ರಿಕಾವಲಯದಲ್ಲಿ ಹರಿದಾಡುತ್ತಿತ್ತು! ಆದರೆ, ಆ ಚಿತ್ರದ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು ಇದನ್ನು ಬಲವಾಗಿ ನಿರಾಕರಿಸುತ್ತಾರೆ. ಅವರು ಹೇಳುವುದೇನೆಂದರೆ; ‘ಶುದ್ಧ ಸುಳ್ಳು. ಈ ಕಥೆ ಆ ಇಬ್ಬರೂ ಕಲಾವಿದರ ಇಮೇಜ್​ಗೆ ಹೇಳಿಮಾಡಿಸಿದ್ದಲ್ಲ. ಕೌಟುಂಬಿಕ ಕಥಾ ಹಂದರದ ಚಿತ್ರಗಳ ನಾಯಕರೆಂದೇ ಆ ಕಾಲದಲ್ಲಿ ಬ್ರಾಂಡ್ ಆಗಿದ್ದ ಅವರನ್ನು ನಾನು ಸಂರ್ಪಸಲೂ ಹೋಗಲಿಲ್ಲ. ಹರಡಿರುವ ಗಾಸಿಪ್​ಗೆ ನಾನು ಕಾರಣನಲ್ಲ. ಆ ಕಾಲದಲ್ಲಿ ಕೈಗೆ ಸಿಕ್ಕ ಈ ಕಥೆಗೆ ಸೂಕ್ತವಾದ ನಟನೊಬ್ಬ ಬೇಕಾಗಿದ್ದ. ನೂರಾರು ಮಂದಿಯ ಆಡಿಷನ್ ಮಾಡಿಸಿದೆ. ಕೊನೆಗೆ ಅಂಬರೀಷ್​ನನ್ನು ಆಯ್ಕೆ ಮಾಡಿಕೊಂಡೆ. ದುರಂತವೇನು ಗೊತ್ತ? ಅಂಬರೀಷ್ ಆಯ್ಕೆಯನ್ನು ಘೊಷಿಸುತ್ತಿರುವಂತೆಯೇ ಉದ್ಯಮದ ಮಂದಿ ಹೊಟ್ಟೆ ಬಿರಿಯುವಂತೆ ನಕ್ಕರು! ತೋಪು ಆಯ್ಕೆ ಎಂದು ಕಾಲೆಳೆದರು. ಬಾಬುಗೆ ಹುಚ್ಚು ಹಿಡಿದಿದೆ ಎಂದೂ ಲೇವಡಿಯಾಡಿದರು. ಆದರೆ, ‘ಅಂತ’ ತೆರೆಕಂಡ ನಂತರ ಅಂಬರೀಷ್ ಮತ್ತು ನನ್ನ ಕೆಪಾಸಿಟಿ ಏನೂಂತ ಜಗಜ್ಜಾಹೀರಾಯಿತು! ಒಂದು ವೇಳೆ ಈ ಜನಗಳ ಅಪಹಾಸ್ಯಕ್ಕೆ ಕಿವಿಗೊಟ್ಟು ಬೇರೆ ಯಾರನ್ನಾದರೂ ಆಯ್ಕೆ ಮಾಡಿಕೊಳ್ಳುತ್ತಿದ್ದರೆ ಅಂಬರೀಷ್ ವೃತ್ತಿಬದುಕು ಏನಾಗುತ್ತಿತ್ತೋ ಆ ಚಾಮುಂಡೇಶ್ವರಿಗೇ ಗೊತ್ತು…’ -ಎಸ್.ವಿ. ರಾಜೇಂದ್ರಸಿಂಗ್ ಬಾಬು ಇಷ್ಟು ಹೇಳಿ ಆಕಾಶ ತೋರಿಸಿ ಕೈ ಮುಗಿದರು! ಇಂಥ ‘ಅಂತ’ ಚಿತ್ರಕ್ಕೀಗ ಭರ್ತಿ 37ರ ಹರೆಯ! ಈ ಚಿತ್ರದಲ್ಲಿ ನಟಿಸಿದ ಅಂಬರೀಷ್​ಗೆ 66ರ ಹರೆಯ!

ಇನ್ನು ‘ಅಂತ’ ಚಿತ್ರದ ಕಥೆಯ ವಿಚಾರಕ್ಕೆ ಬರುವುದಿದ್ದರೆ, ಒಂದೊಳ್ಳೆ ಕಥೆಗಾಗಿ ಹುಡುಕಾಟ ನಡೆಸುತ್ತಿದ್ದ ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರಿಗೆ ‘ಅಂತ’ ಕಥೆಯನ್ನು ಸೂಚಿಸಿದವರು ಹಿರಿಯ ಪತ್ರಕರ್ತ ಎಂ.ಬಿ. ಸಿಂಗ್! ಆಗ ಈ ಕಥೆ ಎಂ.ಬಿ. ಸಿಂಗ್ ಸಂಪಾದಕತ್ವದ ‘ಸುಧಾ’ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿತ್ತು. ಹೈದರಾಬಾದ್ ವಾಸಿಯಾಗಿದ್ದ ಕನ್ನಡಿಗ ಎಚ್.ಕೆ. ಅನಂತರಾವ್ ಅವರ ಈ ಧಾರಾವಾಹಿ ಆ ಕಾಲದಲ್ಲಿ ಓದುಗರನ್ನು ಹುಚ್ಚೆಬ್ಬಿಸಿತ್ತು! ರಾಜೇಂದ್ರಸಿಂಗ್ ಬಾಬು ಮತ್ತು ಎಂ.ಬಿ.ಸಿಂಗ್ ವಯಸ್ಸಿನ ಹಂಗಿಲ್ಲದ ಗೆಳೆಯರು! ಒಮ್ಮೆ ಯಾವುದೋ ಸಂದರ್ಭದಲ್ಲಿ ಎಂ.ಬಿ. ಸಿಂಗ್ ಈ ಕಥೆಯನ್ನು ಬಾಬು ಅವರಿಗೆ ಸೂಚಿಸಿದರು. ಓದಿ ರೋಮಾಂಚನಗೊಂಡರು ಬಾಬು. ನಂತರದ ದಿನಗಳಲ್ಲಿ ಅನಂತರಾವ್ ಅವರನ್ನು ಸಂರ್ಪಸಿ ಕೃತಿ ಸ್ವಾಮ್ಯದ ಹಕ್ಕನ್ನು ಕೊಡಿಸಿದರು ಎಂ.ಬಿ.ಸಿಂಗ್. ಆದರೆ ಬಾಬು ಅವರಿಗೆ ನಿರಾಸೆ ಕಾದಿತ್ತು. ಈ ಸುದ್ದಿಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದಂತೆಯೇ ವರಾತ ಶುರುವಾಗಿ ಬಿಟ್ಟಿತು : ‘ಇದನ್ನು ಸಿನಿಮಾ ಮಾಡಿದರೆ ನಿರ್ವಪಕ ಎಕ್ಕುಟ್ಟಿ ಹೋಗುತ್ತಾನೆ’ ಎಂಬಂಥ ಕಟು ಮಾತುಗಳು ಗಾಂಧಿನಗರದಲ್ಲಿ ಹರಿದಾಡಿದವು. ಆದರೆ, ಅಷ್ಟರಲ್ಲಾಗಲೇ ‘ಪರಿಮಳ ಆರ್ಟ್ಸ್’ನ ಎಚ್.ಎನ್. ಮಾರುತಿ ಮತ್ತು ವೇಣುಗೋಪಾಲ್ ‘ಅಂತ’ ಚಿತ್ರಕ್ಕೆ ಬಂಡವಾಳ ಹೂಡುವುದಾಗಿ ಘೊಷಿಸಿದ್ದರು. ಮೂವರಿಗೂ ಒಳಗೊಳಗೇ ತಳಮಳವಿದ್ದರೂ ಮುಂದಿಟ್ಟ ಹೆಜ್ಜೆಯನ್ನು ಹಿಂದಿಡಲಿಲ್ಲ. ಚಿತ್ರೀಕರಣ ಶುರುವಾಗಿಯೇ ಬಿಟ್ಟಿತು.

ಮೈಸೂರಿನ ಪ್ರತಿಷ್ಠಿತ ಪ್ರೀಮಿಯರ್ ಸ್ಟುಡಿಯೋದಲ್ಲಿ ಹಾಕಲಾದ 15 ಸೆಟ್​ಗಳಲ್ಲಿ ಅವ್ಯಾಹತವಾಗಿ ಚಿತ್ರೀಕರಣ ನಡೆಯಿತು. ಅಂಬರೀಷ್​ಗೆ

ಜೋಡಿಯಾಗಿ ಲಕ್ಷ್ಮೀ ಆಯ್ಕೆಯಾಗಿದ್ದರು. ಉಳಿದಂತೆ ಖಳನಾಯಕರ ದೊಡ್ಡ ಪಡೆಯೇ ಇತ್ತು. ಶಕ್ತಿಪ್ರಸಾದ್, ಪ್ರಭಾಕರ್, ವಜ್ರಮುನಿ, ಸುಂದರ ಕೃಷ್ಣ ಅರಸ್ ಜತೆಗೆ ಜಯಮಾಲಾ, ಮುಸುರಿ ಕೃಷ್ಣ ಮೂರ್ತಿ ಮೊದಲಾದವರಿದ್ದರು. ಚಿತ್ರಕಥೆಯನ್ನು ಸ್ವತಃ ರಾಜೇಂದ್ರಸಿಂಗ್ ಬರೆದರೆ, ಮಾರ್ವಿುಕ ಸಂಭಾಷಣೆಯನ್ನು ಎಚ್.ವಿ. ಸುಬ್ಬಾರಾವ್ ಬರೆದಿದ್ದರು. ಪಿ.ಎಸ್. ಪ್ರಕಾಶ್ ಅವರ ಛಾಯಾಗ್ರಹಣ ‘ಅಂತ’ ಚಿತ್ರವನ್ನು ಬೇರೊಂದು ಎತ್ತರಕ್ಕೇರಿಸಿತು! ಚಿ.ಉದಯಶಂಕರ್, ಗೀತಪ್ರಿಯ, ಆರ್.ಎನ್. ಜಯಗೋಪಾಲ್ ಎಂಬ ತ್ರಿಮೂರ್ತಿಗಳ ಗೀತೆಗಳಿಗೆ ಸಂಗೀತ ಸಂಯೋಜಿಸಿದವರು ಜಿ.ಕೆ.ವೆಂಕಟೇಶ್.

ಇವೆಲ್ಲ ಸೆನ್ಸಾರ್ ಮಂಡಳಿಗೆ ರೀಲನ್ನು ಒಪ್ಪಿಸುವ ಪೂರ್ವದ ನಡಾವಳಿಗಳು. ಆದರೆ, ಪೂರ್ಣಗೊಂಡ ಚಿತ್ರವನ್ನು ಮದ್ರಾಸ್​ನ ಸೆನ್ಸಾರ್ ಮಂಡಳಿಗೆ ಒಪ್ಪಿಸಿದ ಮೇಲೆ ನಿಜವಾದ ‘ಸಿನಿಮಾ’ ಶುರುವಾಯಿತು! ಹಾಗೆ ನೋಡಿದರೆ ಮದ್ರಾಸ್ ಸೆನ್ಸಾರ್ ಮಂಡಳಿಯಿಂದ ಅಷ್ಟೊಂದು ಪ್ರತಿರೋಧ ಬರಲಿಲ್ಲ. ಒಂದಷ್ಟು ಸನ್ನಿವೇಶಗಳಿಗೆ ಕತ್ತರಿಯಾಡಿಸಿ ಪ್ರದರ್ಶನಕ್ಕೆ ಅನುಮತಿ ನೀಡಿತು. ಬಹುನಿರೀಕ್ಷಿತ ಚಿತ್ರ ‘ಅಂತ’ ತೆರೆಕಂಡಿತು. 25 ದಿನಗಳ ಕಾಲ ಅತ್ಯಂತ ಯಶಸ್ವಿ ಪ್ರದರ್ಶನವೂ ಕಂಡಿತು. ಆದರೆ 25 ದಿನಗಳ ನಂತರ ಹಿತಶತ್ರುಗಳಿಂದ ಪ್ರತಿರೋಧ ಶುರುವಾಯಿತು. ತೀರಾ ಎನ್ನಬಹುದಾದ ಹಿಂಸಾ ದೃಶ್ಯಗಳು ಚಿತ್ರದ ಅಸಹನೀಯ ಅಂಶಗಳೆಂದೂ, ಕುಟುಂಬಸಮೇತ ವೀಕ್ಷಿಸುವುದು ಕಷ್ಟವೆಂದೂ, ಸಾಮಾಜಿಕವಾಗಿ ಈ ಚಿತ್ರ ತಪ್ಪು ಸಂದೇಶವನ್ನು ರವಾನೆ ಮಾಡುತ್ತದೆಯೆಂದೂ ತಕರಾರು ತೆಗೆದು ಅದೇ ಹಿತಶತ್ರು ಮಹಾಶಯರು ದೂರಿದರು! ಈ ದೂರಿನನ್ವಯ ಮದ್ರಾಸ್​ನಿಂದ ಬಂದ ಸೆನ್ಸಾರ್ ಮಂಡಳಿ ಸದಸ್ಯರು ಥಿಯೇಟರ್​ನಲ್ಲಿ ಈ ಚಿತ್ರವನ್ನು ವೀಕ್ಷಿಸಿದಾಗ ರಹಸ್ಯವೊಂದನ್ನು ಸ್ಪೋಟಿಸಿದವರಂತೆ, ‘ನಾವು ಮದ್ರಾಸಿನಲ್ಲಿ ನೋಡಿದ ಚಿತ್ರವೇ ಬೇರೆ, ಇಲ್ಲಿ ತೆರೆ ಕಂಡಿರುವ ಚಿತ್ರವೇ ಬೇರೆ’ ಎಂದು ಹೇಳಿ ಬೆಂಗಳೂರಿನ ಜಿಲ್ಲಾಧಿಕಾರಿಯವರಿಗೆ ಚಿತ್ರವನ್ನು ನಿಷೇಧಿಸುವಂತೆ ಕೋರಿದರು! ಹೀಗಾಗಿ ಬೆಂಗಳೂರಿನಾದ್ಯಂತ ‘ಅಂತ’ ಚಿತ್ರದ ಪ್ರದರ್ಶನವನ್ನು ತಡೆಹಿಡಿಯಲಾಯಿತು. ಅದೇ ಹೊತ್ತಿಗೆ ಬೆಂಗಳೂರಿನ ಹೊರತಾದ ಜಿಲ್ಲಾಕೇಂದ್ರಗಳಲ್ಲಿ ಈ ಚಿತ್ರ ಯಶಸ್ವೀ ಪ್ರದರ್ಶನ ಕಾಣುತ್ತಿತ್ತು! ಕಾಳಸಂತೆಯಲ್ಲಿ 200-300 ರೂ.ಗಳಿಗೆ ಟಿಕೆಟ್ ಬಿಕರಿಯಾಗುತ್ತಿದ್ದುದು ಆ ಕಾಲದ ದಾಖಲೆ!

ಪ್ರಮುಖ ಕೇಂದ್ರವಾದ ಬೆಂಗಳೂರಿನಲ್ಲಿ ‘ಅಂತ’ ಚಿತ್ರದ ಪ್ರದರ್ಶನಕ್ಕೆ ತಡೆ ತಂದುದರಿಂದ ಕುಪಿತರಾದ ನಿರ್ವಪಕರಾದ ವೇಣುಗೋಪಾಲ್ ಮತ್ತು ರಾಜೇಂದ್ರಸಿಂಗ್ ಬಾಬು ದೆಹಲಿಗೆ ತೆರಳಿ ಆಗಿನ ಪ್ರಧಾನಿ ಇಂದಿರಾಗಾಂಧಿಯವರನ್ನೇ ನೇರವಾಗಿ ಭೇಟಿಯಾಗಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡರು. ಇಂದಿರಾ ಅವರು ಆಗಿನ ವಾರ್ತಾಮಂತ್ರಿಯಾಗಿದ್ದ ಶ್ರೀಮಾನ್ ಸಾಟೆಯವರಿಗೆ ಸಮಸ್ಯೆಯನ್ನು ವರ್ಗಾಯಿಸಿ ನ್ಯಾಯ ನೀಡುವಂತೆ ಆದೇಶಿಸಿದರು. ಅಷ್ಟರಲ್ಲಿ ನ್ಯಾಯಾಲಯವೇ ನಿರ್ವಪಕರ ಪರವಾಗಿ ತೀರ್ಪು ನೀಡಿತು. ಆದರೂ ಅಡ್ಡಿ ಆತಂಕಗಳು ಕಮ್ಮಿಯಾಗಲಿಲ್ಲ. ಮತ್ತೆ ಮತ್ತೆ ಕೋರ್ಟ್-ಕಚೇರಿಗಳಿಗೆ ಅಲೆದಾಡಿದ ನಿರ್ವಪಕ, ನಿರ್ದೇಶಕರು ಕೊನೆಗೂ ಎಲ್ಲ ಸಿಕ್ಕುಗಳನ್ನು ಬಿಡಿಸಿಕೊಂಡು ‘ಅಂತ’ ಚಿತ್ರವನ್ನು ಕರ್ನಾಟಕದಾದ್ಯಂತ ಮರುಬಿಡುಗಡೆ ಮಾಡಿದರು. ಮುಂದಿನ ದಿನಗಳಲ್ಲಿ ಈ ಚಿತ್ರ ದಾಖಲೆ ಬರೆದು ಇಂದಿಗೂ ಜನಪ್ರಿಯ ಚಿತ್ರವಾಗಿ ಉಳಿದಿದೆ. ಪ್ರೇಕ್ಷಕರು ನೋಡಿ ಚಪ್ಪಾಳೆ ತಟ್ಟಿದರು. ‘ಅಂತ’ ಚಿತ್ರದ ಜನಪ್ರಿಯತೆ ಜ್ವರದಂತೆ ಏರಿತು. ಜನಪ್ರಿಯತೆಯ ಜತೆ ಪ್ರಶಸ್ತಿಗಳನ್ನೂ ಗಿಟ್ಟಿಸಿಕೊಂಡಿತು. ಈ ಚಿತ್ರದ ಅಭಿನಯಕ್ಕಾಗಿ 1982ನೇ ಸಾಲಿನ ವಿಶೇಷ ಪ್ರಶಸ್ತಿಯನ್ನು ಅಂಬರೀಷ್ ಪಡೆದುಕೊಂಡರು. ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಪಿ.ಎಸ್. ಪ್ರಕಾಶ್, ಅತ್ಯುತ್ತಮ ಚಿತ್ರಕಥೆಗಾಗಿ ಎಸ್.ವಿ. ರಾಜೇಂದ್ರಸಿಂಗ್ ಬಾಬು ಪ್ರಶಸ್ತಿ ಪಡೆದುಕೊಂಡರು. 37 ವರ್ಷಗಳ ಬಳಿಕವೂ ’ಕುತ್ತೇ ಕನ್ವರ್​ಲಾಲ್ ಬೋಲೋ…’ ಎಂಬ ಸಂಭಾಷಣೆಯ ಸಾಲು ಮತ್ತು ‘ನಾನು ಯಾರು ಯಾವ ಊರು..’ ಎಂಬ ಹಾಡಿನ ಸಾಲು ಜನ ಮಾನಸದಲ್ಲಿ ಸ್ಥಿರವಾಗಿ ನೆಲೆನಿಂತಿದೆ! ಈಗ ಅಂಬರೀಷ್ ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದರೆ, ಅವರ ಮಗ ಅಭಿಷೇಕ್ ‘ಅಮರ್’ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು ಅಮರ ಗಾಯಕ ಕಾಳಿಂಗರಾವ್ ಅವರ ಬಯೋಪಿಕ್ ಸ್ಕ್ರಿಪ್ಟ್ ರಚನೆಯಲ್ಲಿ ಬಿಜಿಯಾಗಿದ್ದಾರೆ.

Leave a Reply

Your email address will not be published. Required fields are marked *

Back To Top