ಮಹಾಲಿಂಗಪುರ: ಪಟ್ಟಣದಲ್ಲಿ ಮಹಾಲಿಂಗೇಶ್ವರ ಕಾರ್ತಿಕೋತ್ಸವ ವೈಭವದಿಂದ ನೆರವೇರಿತು.
ಮಹಾಲಿಂಗೇಶ್ವರ ಮಠದ ಪೀಠಾಧಿಪತಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಗುರುವಾರ ರಾತ್ರಿ ದೀಪ ಬೆಳಗಿಸಿ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಅಜ್ಞಾನ ತೊರೆದು ಮನದಲ್ಲಿ ಸುಜ್ಞಾನ ಬಿತ್ತಿದ ಮಹಾಲಿಂಗೇಶ್ವರರು ಸಮಾಜಕ್ಕೆ ಪೂರಕವಾದ ವಾತಾವರಣ ನಿರ್ಮಿಸಿ ಪಟ್ಟಣವನ್ನು ಭಾವೈಕ್ಯದ ಬೀಡಾಗಿಸಿದ್ದಾರೆ ಎಂದರು.
ನಂತರ ರೇವಡಿಗಿಡದ ಮಹಾಲಿಂಗೇಶ್ವರ, ಬುದ್ನಿ ಪಿಡಿಯ ಮಹಾಲಿಂಗೇಶ್ವರ ದೇವಸ್ಥಾನಗಳಿಗೂ ಶ್ರೀಗಳು ತೆರಳಿ ಪೂಜೆ ಸಲ್ಲಿಸಿ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿದರು. ಮಹಾಲಿಂಗೇಶ್ವರ ದೇವಸ್ಥಾನದಿಂದ ಚನ್ನಗೀರೇಶ್ವರ ದೇವಸ್ಥಾನದವರೆಗೆ ಪಲ್ಲಕ್ಕಿ ಮತ್ತು ನಂದಿಕೋಲ ಉತ್ಸವ ಜರುಗಿತು.
ಪಟ್ಟಣದ ಚನ್ನಗಿರೇಶ್ವರ ದೇವಸ್ಥಾನ ಹಾಗೂ ಮಹಾಲಿಂಗೇಶ್ವರರ ಅಷ್ಟಲಿಂಗ ಮುದ್ರೆಗಳ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅನ್ನ ಸಂತರ್ಪಣೆ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು. ದೀಪಾವಳಿ ಪ್ರತಿಪದ ದಿನ ಪರಸ್ಥಳಕ್ಕೆ ಹೋದ ಸ್ಥಳೀಯರು ಇಂದು ಕಡ್ಡಾಯವಾಗಿ ಮರಳಿ ಪಟ್ಟಣಕ್ಕೆ ಬಂದು ಕಾರ್ತಿಕೋತ್ಸವದಲ್ಲಿ ಭಾಗವಸುವದು ಇಲ್ಲಿಯ ಸಂಪ್ರದಾಯವಾಗಿದೆ. ಕಲಾವಿದರಿಂದ ಕರಡಿ ಮಜಲು ಸೇವೆ ಗಮನ ಸೆಳೆಯಿತು.