ವಿದ್ಯುತ್ ತಂತಿ ತುಳಿದು ರೈತ ಸಾವು

ಪಾಂಡವಪುರ; ತಾಲೂಕಿನ ಕೆ.ಹೊಸೂರು ಗ್ರಾಮದ ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಗ್ರಾಮದ ದೇವರಾಜು (40) ಮೃತಪಟ್ಟವರು. ಜಮೀನಿನಲ್ಲಿ ಬೆಳೆದಿದ್ದ ಹೀರೆಕಾಯಿ ಬೆಳೆಗೆ ನೀರು ಹಾಯಿಸಲು ಸೋಮವಾರ ಮುಂಜಾನೆ ತೆರಳಿದ್ದಾಗ ದುರಂತ ನಡೆದಿದೆ.

ವಿಷಯ ತಿಳಿದ ತಕ್ಷಣ ಸ್ಥಳದಲ್ಲಿ ಜಮಾಯಿಸಿದ ಗ್ರಾಮಸ್ಥರು ಪೊಲೀಸ್ ಹಾಗೂ ಸೆಸ್ಕ್ ಇಂಜಿನಿಯರ್‌ಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಮೃತದೇಹವನ್ನು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲು ಮುಂದಾದಾಗ ಗ್ರಾಮಸ್ಥರು ಸೆಸ್ಕ್ ಅಧಿಕಾರಿಗಳು ಬರುವವರೆಗೆ ಶವ ಸಾಗಿಸಬಾರದು ಎಂದು ಅಡ್ಡಿಪಡಿಸಿದರು.

ಕೆಲಕಾಲದ ನಂತರ ಸೆಸ್ಕ್ ಎಇಇ ಪುಟ್ಟಸ್ವಾಮಿ ಹಾಗೂ ಸಿಬ್ಬಂದಿ ಬಂದಾಗ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು. ನಂತರ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಯಿತು. ಸೆಸ್ಕ್ ಕಚೇರಿಯಲ್ಲಿ ಇಇ ಸೋಮರಾಜ್, ಎಇಇ ಪುಟ್ಟಸ್ವಾಮಿ ನೇತೃತ್ವದಲ್ಲಿ ಕೆ.ಹೊಸೂರು ಗ್ರಾಮದ ಮುಖಂಡರ ಸಭೆ ನಡೆಸಿ ಮೃತನ ಕುಟುಂಬಕ್ಕೆ 5ಲಕ್ಷ ರೂ ಪರಿಹಾರ ನೀಡಲು ತೀರ್ಮಾನವಾಯಿತಲ್ಲದೆ, ಅಂತ್ಯಸಂಸ್ಕಾರ ನೆರವೇರಿಸಲು 10 ಸಾವಿರ ರೂ. ನೀಡಲಾಯಿತು.

ದೇವರಾಜುಗೆ ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ. ಪಾಂಡವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *