ಮುಂಡಗೋಡ: ತಾಲೂಕಿನಲ್ಲಿ ಹದ ಮಳೆಯಾಗಿರುವುದು ರೈತ ಸಮೂಹದಲ್ಲಿ ಹರ್ಷವುಂಟು ಮಾಡಿದ್ದು, ಗದ್ದೆಗಳತ್ತ ಮುಖ ಮಾಡಿದ್ದಾರೆ.

ತಾಲೂಕಿನಾದ್ಯಂತ ಹದಿನೈದು ದಿನಗಳಲ್ಲಿ ಎರಡು ಬಾರಿ ಉತ್ತಮ, ಹದವಾದ ಮಳೆಯಾಗಿದೆ. ಹೀಗಾಗಿ ರೈತರು ಒಣ ಬಿತ್ತನೆಗಾಗಿ ಭೂಮಿ ಸಿದ್ಧಗೊಳಿಸುವ ಕಾರ್ಯವನ್ನು ಚುರುಕುಗೊಳಿಸಿದ್ದಾರೆ.
ತಾಲೂಕಿನಲ್ಲಿ ಚಿಕ್ಕ ಹಿಡುವಳಿದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಳೆದ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದ ಕಾರಣ ಭತ್ತ, ಗೋವಿನಜೋಳದ ಇಳುವರಿ ಬಾರದೆ ರೈತರು ಹಾನಿ ಅನುಭವಿಸಿದ್ದರು. ಈ ಬಾರಿ ಸಮರ್ಪಕವಾದ ಹದ ಮಳೆಯಾದರೆ ಉತ್ತಮವಾದ ಇಳುವರಿ ಪಡೆಯಬಹುದು ಎಂಬ ನಿರೀಕ್ಷೆಯಿಂದ ರೈತರು ಈಗ ಭೂಮಿ ಸ್ವಚ್ಛಗೊಳಿಸಿ ಬಿತ್ತನೆಗೆ ಸಿದ್ಧಗೊಳಿಸುತ್ತಿದ್ದಾರೆ.
ತಾಲೂಕಿನಲ್ಲಿ 14500ಹೆಕ್ಟೇರ್ ಬಿತ್ತನೆ ಪ್ರದೇಶವಿದ್ದು, 6000ಹೆಕ್ಟೇರ್ ಪ್ರದೇಶದಲ್ಲಿ ಭತ್ತ, 4000ಹೆಕ್ಟೇರ್ ಗೋವಿನಜೋಳ, 3000ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯುತ್ತಾರೆ. ಉಳಿದ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತದೆ. ತಾಲೂಕಿನ ಮೈನಳ್ಳಿ, ಗುಂಜಾವತಿ, ಇಂದೂರ, ಹುನಗುಂದ, ಬಾಚಣಕಿ, ಚವಡಳ್ಳಿ, ಸಾಲಗಾಂವ, ಚಿಗಳ್ಳಿ, ಕಾತೂರ, ಪಾಳಾ, ಕೊಡಂಬಿ, ಓರಲಗಿ ಪಂಚಾಯಿತಿ ವ್ಯಾಪ್ತಿಗಳಲ್ಲಿ ಅತಿ ಹೆಚ್ಚು ಪ್ರದೇಶದಲ್ಲಿ ಭತ್ತದ ಬೆಳೆ ಬೆಳೆಯಲಾಗುತ್ತದೆ.
ತಾಲೂಕಿನಲ್ಲಿ ಭತ್ತ ಬೆಳೆಗಾರರು ಮೇ ತಿಂಗಳ ಅಂತ್ಯದಲ್ಲಿ ಒಣ ಬಿತ್ತನೆ ಮಾಡುತ್ತಾರೆ. ಮೃಗಶಿರ ಮಳೆ ಆರಂಭವಾಗುವ ಮೊದಲು ಒಣ ಭೂಮಿಯಲ್ಲಿ ಭತ್ತದ ಬೀಜ ಬಿತ್ತನೆ ಮಾಡುತ್ತಾರೆ. ನಂತರ ಬರುವ ಮಳೆಗೆ ಭತ್ತವು ಹುಟ್ಟುತ್ತದೆ. ಸದ್ಯ ಟ್ರ್ಯಾಕ್ಟರ್ ನೇಗಿಲು ಹೊಡೆದು ಭೂಮಿಯನ್ನು ಬಿತ್ತನೆಗೆ ಸಿದ್ಧಗೊಳಿಸಲಾಗುತ್ತಿದೆ. ಈಗಾಗಲೇ ಬಿತ್ತನೆ ಬೀಜಗಳು ಹಾಗೂ ರಾಸಾಯನಿಕ ಗೊಬ್ಬರವನ್ನು ಕೃಷಿ ಇಲಾಖೆಯವರು ದಾಸ್ತಾನು ಮಾಡುತ್ತಿದ್ದಾರೆ.