ಯಲ್ಲಾಪುರ: ತಾಲೂಕಿನ ಹುತ್ಕಂಡ ಮಾರಿಕಾಂಬಾ ದೇವಸ್ಥಾನದ ನೂತನ ಗೋಪುರ ಶಿಖರ ಮತ್ತು ಶ್ರೀದೇವಿ ಮರು ಪ್ರತಿಷ್ಠೆ ಮತ್ತು ಜಾತ್ರಾ ಮಹೋತ್ಸವ ವಿವಿಧ ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಪಂಚಗ್ರಾಮದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಹಣ್ಣು ಕಾಯಿ, ಉಡಿ, ಹರಕೆ ಸಲ್ಲಿಸಿದರು. ದೇವಿಯ ಸನ್ನಿಧಿಯಲ್ಲಿ ದೇವಿ ಪಾರಾಯಣ, ನವಚಂಡಿ ಹವನ ದೇವತಾ ಪ್ರಾರ್ಥನೆ, ನಂದಿ, ಗಣಹವನ, ಮಂಟಪ ಪ್ರವೇಶ, ಬಲಿ, ವಾಸ್ತು, ರಾಕ್ಷೋಘ್ನ ಹವನ, ಪುಣ್ಯಾಹ, ಶ್ರೀದೇವರ ಪ್ರತಿಷ್ಠೆ, ಶಿಖರ ಪ್ರತಿಷ್ಠೆ, ಕಲಾಹವನ, ಚಂಡೀಹವನ, ಮಹಾಪೂಜೆ ಸೇರಿ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ನಡೆದವು.
ಶುಕ್ರವಾರ ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಮುಖರಾದ ಹರಿಪ್ರಕಾಶ ಕೋಣೆಮನೆ, ಶಿಲ್ಪಾ ರವಿ ನಾಯ್ಕ, ಆರ್.ಎಸ್ ಭಟ್ಟ, ಸುಬ್ಬಣ್ಣ ಉದ್ದಾಬೈಲ್, ನೇತ್ರಾವತಿ ಹೆಗಡೆ, ಆರ್.ಎನ್. ಭಟ್ಟ, ದೇವೇಂದ್ರ ಹೆಗಡೆ ಕಬ್ಬಿನಗದ್ದೆ ಭಾಗವಹಿಸಿದ್ದರು. ನಂತರ ಉಪಳೇಶ್ವರ ಶ್ರೀನಿಧಿ ಮಹಿಳಾ ಯಕ್ಷಗಾನ ಕಲಾ ಬಳಗದಿಂದ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನ ಹಾಗೂ ಕುಣಬಿ ಯಕ್ಷಗಾನ ಮಂಡಳಿ ಕಟ್ಟಿಗೆಯವರಿಂದ ಯಕ್ಷಗಾನ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಿತು.