ನಗರ-ಪಟ್ಟಣಗಳ ಕಿರಿಕಿರಿಯ ಟ್ರಾಫಿಕ್, ವಾಯುಮಾಲಿನ್ಯ, ಒತ್ತಡದ ವೇಳಾಪಟ್ಟಿಗೆ ಅನಿವಾರ್ಯವಾಗಿ ಒಗ್ಗಿಕೊಂಡವರಿಗೆ ವಾರಾಂತ್ಯದ ಚಾರಣವು ‘ಬಿಡುಗಡೆಯ ಭಾವನೆ’ ತರುತ್ತದೆ. ನಕ್ಷತ್ರಗಳ ಬೆಳಕಿನಲ್ಲಿ ರಾತ್ರಿ ಕ್ಯಾಂಪ್ ಮಾಡುವ ಮನಸ್ಸಿದ್ದವರಿಗಂತೂ ಎತ್ತಿನ ಭುಜ ಶಿಖರದ ಚಾರಣ ಅತ್ಯಂತ ಸೂಕ್ತ.
ನಮ್ಮ ತಂಡ ಹುಬ್ಬಳ್ಳಿಯಿಂದ ಸರಕಾರಿ ಬಸ್ನಲ್ಲಿ ಪ್ರಯಾಣ ಪ್ರಾರಂಭಿಸಿ ಬೆಳಗಿನ ಜಾವ ಧರ್ಮಸ್ಥಳ ಸಮೀಪದ ಕೊಕ್ಕಡ ತಲುಪಿತು. ಅಲ್ಲೇ ಪಕ್ಕದಲ್ಲಿದ್ದ ಸಣ್ಣ ಹೋಟೆಲ್ನವ ಶಿಶಿಲಕ್ಕೆ ಹೋಗಲು ಜೀಪ್ ಗೊತ್ತುಪಡಿಸಿಕೊಟ್ಟ. ಶಿಶಿಲದ ಬೇಸ್ ಕ್ಯಾಂಪ್ಗೆ 30 ನಿಮಿಷದಲ್ಲಿ ತಲುಪಿದೆವು.
ಅಲ್ಲಿ ಗೋಪು ಗೋಖಲೆ ಎಂಬವರು ತಮ್ಮ ಮನೆಯನ್ನೇ ಉತ್ಸಾಹಿ ಚಾರಣಿಗರಿಗೆ ಬೇಸ್ಕ್ಯಾಂಪ್ ಮಾಡಿಕೊಂಡಿದ್ದಾರೆ. ಚಾರಣಿಗರು ವಿರಮಿಸಿ, ಆಹಾರ ಸೇವಿಸಬಹುದು. ಇಲ್ಲಿಂದಲೇ ಗೈಡ್ಗಳನ್ನೂ ವ್ಯವಸ್ಥೆ ಮಾಡಲಾಗುತ್ತದೆ. ಗೋಪು ಅವರ ಮನೆಯಲ್ಲಿ ಕಾಟೇಜ್ ಮತ್ತು ಬಿಸಿಯಾದ ಕಾಫಿ ನಮಗಾಗಿ ಕಾಯುತ್ತಿತ್ತು. ಇಡ್ಲಿ, ಚಟ್ನಿ, ಸಾಂಬಾರ್ ಸೇವಿಸಿ ಬ್ಯಾಗ್ ಹೊತ್ತುಕೊಂಡು ಚೆನ್ನಪ್ಪ ಎಂಬ ಗೈಡ್ ಜತೆ ಕಾಡಿನ ಅಂಚಿನವರೆಗಿನ ಪ್ರಯಾಣವನ್ನು ಮತ್ತದೇ ಜೀಪ್ ಮೂಲಕ ಕೈಗೊಂಡೆವು. ವೇಗವಾಗಿ ಹರಿಯುತ್ತಿದ್ದ ಸಣ್ಣ ತೊರೆ ದಾಟಿದ ತಕ್ಷಣ ಗೈಡ್ ಸಲಹೆಯಂತೆ ಕೈಕಾಲಿಗೆ ಜಿಗಣೆಗಳು ಹತ್ತಿಕೊಳ್ಳದಂತೆ ತಂಬಾಕು ಪುಡಿಯನ್ನು ನೀರಲ್ಲಿ ಕಲಸಿ ಪೇಸ್ಟ್ ಮಾಡಿ ಎಲ್ಲರೂ ಹಚ್ಚಿಕೊಂಡು ಬೆಟ್ಟದೆಡೆಗೆ ನಡೆಯಲಾರಂಭಿಸಿದೆವು.
ಕಾಡಿನ ಹಾದಿಗೇರುತ್ತಿದ್ದಂತೆ ಪಕ್ಕದಲ್ಲೇ ಇದ್ದ ಆನೆಗಳ ಹಿಂಡನ್ನು ಗಮನಿಸಿ ಗೈಡ್ ನಮಗೆ ಮೌನವಾಗಿರಲು ತಿಳಿಸಿದ. ಇಲ್ಲಿನ ದಾರಿ ಕಡಿದಾಗಿದ್ದು, ಕೆಲವೆಡೆ ಮೊಣಕಾಲ ಮೂಲಕ ಭಾರವಾದ ಬ್ಯಾಗ್ ಹೊತ್ತು ತೆವಳಿಕೊಂಡೇ ಹೋಗಬೇಕಾದ ಅನಿವಾರ್ಯತೆ. ಗೈಡ್ ದಾರಿಯ ಇಕ್ಕೆಲಗಳನ್ನು ಸರಿಪಡಿಸುತ್ತಾ ಸಾಗುತ್ತಿದ್ದ. ನಾವು ಆತನನ್ನು ಅನುಸರಿಸುತ್ತಿದ್ದೆವು.
ಬೆಟ್ಟದೆಡೆಗಿನ ಆರೋಹಣದ ಪ್ರಾರಂಭದಿಂದಲೇ ದಟ್ಟಾರಣ್ಯವು ಶಿಖರದ ತುದಿಯವರೆಗೂ ಇದೆ. ಚಾರಣ ಸಂದರ್ಭ ಮಚ್ಚೆಯುಳ್ಳ ಜಿಂಕೆ, ಕಂದು ತಾಳೆ ಸಿವೆಟ್, ಗೌರ್, ಹಾರುವ ಅಳಿಲುಗಳನ್ನು ನೋಡಿದೆವು. ಚಾರಣದುದ್ದಕ್ಕೂ ಬ್ಲಾ್ಯಕ್ ಡ್ರಾಂಗೊ, ಕೋಗಿಲೆ, ಇಂಡಿಯನ್ ಗ್ರೀನ್ ಬೀ ಭಕ್ಷಕ, ಮೈನಾ ಪಕ್ಷಿಗಳ ಕಲರವ ಕಿವಿಗೆ ಇಂಪನ್ನೀಯುತ್ತದೆ. ಹಸಿರಿನ ರಾಶಿಯ ನಡುವೆ ಸಾಗುವಾಗ ಅಲ್ಲಲ್ಲಿ ಸಣ್ಣಪುಟ್ಟ ತೊರೆ, ಜಲಪಾತಗಳನ್ನು ನೋಡಬಹುದು. ಪಕ್ಕದ ಶಿಖರ ಅಮೆದಿಕಲ್ಲುಗೆ ಸಾಗುವ ದಾರಿಯ ಮೂರನೇ ಒಂದು ಭಾಗ ಸಾಗಿದ ನಂತರ ಬಲ ತಿರುವು ತೆಗೆದುಕೊಳ್ಳಬೇಕು. ಇಲ್ಲಿನ ಹಾದಿಯು ಬಹುತೇಕ ಲಂಬವಾಗಿದ್ದು ಚಾರಣ ಕಠಿಣ. ಆದ್ದರಿಂದ ಬೆಟ್ಟಕ್ಕೆದುರಾಗಿ ನಡೆಯುವ ಬದಲು ಬೆಟ್ಟದ ಹಿಂಭಾಗದಿಂದ ನಡೆಯಬೇಕು. ನಾಲ್ಕೂವರೆ ಗಂಟೆ ಚಾರಣದ ನಂತರ ಎತ್ತಿನ ಭುಜದ ಶೃಂಗವನ್ನು ತಲುಪಿ ಶಿಶಿಲದಿಂದ ಪ್ಯಾಕ್ ಮಾಡಿ ತಂದಿದ್ದ ಚಪಾತಿ, ಪರೋಟಾ ತಿಂದು ಸ್ವಲ್ಪ ವಿರಮಿಸಿದೆವು. ಇಲ್ಲಿನ ದಾರಿಯಲ್ಲಿ ಜಿಗಣೆ ಹಾವಳಿಯಿದೆ. ಟೆಂಟ್ ಹಾಕುವ ಸ್ಥಳ ಅರಣ್ಯದಲ್ಲಿ ಇದ್ದೇವೇನೋ ಎನಿಸುವಷ್ಟು ಎತ್ತರದ ದಟ್ಟವಾದ ದರ್ಬೆ ಹುಲ್ಲು ನಮ್ಮನ್ನು ಸಂಪೂರ್ಣ ಮರೆಮಾಚಿತ್ತು. ಡೇರೆ ನಿರ್ವಿುಸಿಕೊಂಡು, ಹತ್ತಿರದ ತೊರೆಯಿಂದ ನೀರನ್ನು ಬಾಟಲಿಗಳಿಗೆ ತುಂಬಿಸಿಕೊಂಡೆವು.
ಕಡಿದಾದ ದಾರಿಯಲ್ಲಿ ಹತ್ತಿ ಶೃಂಗಕ್ಕೆ ತಲುಪಿ ಅಲ್ಲಿಂದ ಸುತ್ತಲಿನ ಸೌಂದರ್ಯ ಕಣ್ತುಂಬಿಕೊಂಡು ಕೆಳಗಿಳಿದೆವು. ತುದಿಯಲ್ಲಿ ನಿಲ್ಲಲು ಸ್ಥಳಾವಕಾಶ ಕಡಿಮೆಯಿದ್ದು, ಅಲ್ಲೇ ಹೆಚ್ಚು ಹೊತ್ತು ಕಳೆಯುವುದು ಅತ್ಯಂತ ವೇಗವಾಗಿ ಬೀಸುವ ಗಾಳಿಯ ಕಾರಣದಿಂದ ಅಪಾಯಕಾರಿ. ಇಲ್ಲಿಂದ ದೇವರಮನೆ ಪರ್ವತ ಶ್ರೇಣಿ, ಚಾರ್ವಡಿ ಮತ್ತು ಶಿಹಿಲಾ ಹೋಲ್ ಕಣಿವೆಯನ್ನು ವೀಕ್ಷಿಸಿ, ಫೋಟೋಗಳನ್ನು ತೆಗೆದು ಡೇರೆಗೆ ಮರಳಿದೆವು.
ಆಕಾಶದಲ್ಲಿ ನಕ್ಷತ್ರಗಳು ಮಿನುಗುತ್ತಿದ್ದಂತೆ ಕೆಂಪು ಸೂರ್ಯ ಬೆಟ್ಟದ ಅಂತ್ಯದಲ್ಲಿ ಮುಳುಗುತ್ತಿದ್ದ. ರಾತ್ರಿಯ ಬೆಳದಿಂಗಳಲ್ಲಿ ನಕ್ಷತ್ರಗಳನ್ನು ನೋಡುತ್ತಾ, ಹಾಡುತ್ತಾ ಕ್ಯಾಂಪ್ ಫೈರ್ ಹಾಕಿಕೊಂಡು ಊಟ ಮಾಡಿದೆವು. ರಾತ್ರಿ ಎಲ್ಲರೂ ನಿದ್ರೆಗೆ ಜಾರುವುದು ಅಪಾಯವೆಂದರಿತು (ಕಾಡು ಪ್ರಾಣಿಗಳಿಂದಾಗಿ) ಬೆಳಗ್ಗಿನವರೆಗೆ ತಲಾ ಇಬ್ಬರ ಎರಡು ತಂಡಗಳು ಮಲಗಿರುವವರನ್ನು ಕಾಯುವುದೆಂದು ನಿರ್ಧರಿಸಿದೆವು. ಬೆಳಗ್ಗೆ ಐದು ಗಂಟೆಗೇ ಪಕ್ಷಿಗಳ ಕಲರವ ಪ್ರಾರಂಭವಾಯಿತು. ಪ್ರಾತರ್ವಿಧಿ ಮುಗಿಸಿ, ಕ್ಯಾಂಪ್ಫೈರ್ ಬೆಂಕಿಯಲ್ಲಿ ಚಹಾ ಮಾಡಿ ಕುಡಿದೆವು. ಡೇರೆಗಳನ್ನು ಬಿಚ್ಚಿ ಮಡಚಿ ಹೊಸ ಅನುಭವದ ಸಂತಸದೊಂದಿಗೆ ಬೆಟ್ಟದಿಂದ ಕೆಳಗಿಳಿಯಲಾರಂಭಿಸಿದೆವು. ನದಿ ದಾಟಿ ಮರಳುತ್ತಿದ್ದಂತೆ ವಿದ್ಯುತ್ ಕಂಬಗಳು, ಪ್ಲಾಸ್ಟಿಕ್ ಮತ್ತು ಕಾಗದದ ತ್ಯಾಜ್ಯಗಳು, ವಾಹನಗಳ ಶಬ್ದ ನಮ್ಮನ್ನು ಮರಳಿ ಊರಿಗೆ ಸ್ವಾಗತಿಸಿದವು. ಮತ್ತೆ ನಾವೆಲ್ಲರೂ ಗೋಖಲೆ ಅವರ ಮನೆಗೆ ತಲುಪಿ ಅನ್ನ ಸಾರು ಊಟ ಮಾಡಿದೆವು. ಗೈಡ್ಗೆ ಗೌರವಧನ ಪಾವತಿಸಿ ಧನ್ಯವಾದ ತಿಳಿಸಿ ಶಿಶಿಲದಿಂದ ಧರ್ಮಸ್ಥಳಕ್ಕೆ ಬಸ್ ಮೂಲಕ ತೆರಳಿದೆವು.
ಈ ವಸ್ತುಗಳೆಲ್ಲ ಜತೆಗಿರಲಿ
ಟಾರ್ಚ್ ಲೈಟ್, ಊಟದ ಪ್ಲೇಟ್, ತಲಾ 2 ಲೀಟರ್ ನೀರಿನ ಬಾಟಲಿ, ಒಂದೆರಡು ಜತೆ ಬಟ್ಟೆಗಳು (ಶಾರ್ಟ್ಸ್ ಉತ್ತಮ), ತಂಗಲು ಡೇರೆಗಳು, ಸ್ಲೀಪಿಂಗ್ ಬ್ಯಾಗ್, ಮ್ಯಾಟ್ಸ್, ಕ್ಯಾಪ್, ಬೆಡ್ ಶೀಟ್ಗಳು, ಹ್ಯಾಂಡ್ ಗ್ಲೌಸ್, ಕತ್ತಿ, ಚಾಕು, ಬೆಂಕಿ ಪೊಟ್ಟಣ, ಜಾಕೆಟ್, ಕ್ಯಾಂಡಲ್, ತುರ್ತು ಚಿಕಿತ್ಸಾ ಕಿಟ್, ಪವರ್ ಬ್ಯಾಂಕ್, 2-3 ಹೊತ್ತಿನ ಊಟ. ಚಾಕಲೇಟ್, ಗ್ಲೂಕೋಸ್ ಪ್ಯಾಕೆಟ್ಗಳೂ ಇರಬೇಕು.
ತಲುಪುವುದು ಹೇಗೆ?
ಎತ್ತಿನ ಭುಜವು ಧರ್ಮಸ್ಥಳದಿಂದ 30 ಕಿ.ಮೀ ದೂರದಲ್ಲಿದೆ. ಚಾರಣ ಪ್ರಾರಂಭಿಸುವ ಮೊದಲು ಬೆಂಗಳೂರು-ಧರ್ಮಸ್ಥಳ ರಸ್ತೆಯ ಕೊಕ್ಕಡ ಎಂಬಲ್ಲಿ ಇಳಿಯಬೇಕು. ಇಲ್ಲಿಂದ ಶಿಶಿಲವನ್ನು ಜೀಪ್, ಅಟೋರಿಕ್ಷಾ ಅಥವಾ ಬಸ್ ಮೂಲಕ ತಲುಪಬಹುದು. ಶಿಶಿಲವು ಚಾರಣದ ಪ್ರಾರಂಭಿಕ ಹಂತ.
ಹೋಗುವ ಅವಧಿ
ನವೆಂಬರ್ನಿಂದ ಫೆಬ್ರವರಿವರೆಗಿನ ಅವಧಿಯಲ್ಲಿ ಇಲ್ಲಿನ ಪರಿಸರವೆಲ್ಲಾ ಹಚ್ಚಹಸಿರಾಗಿರುತ್ತದೆ. ಫೆಬ್ರವರಿಯಿಂದ ಮೇವರೆಗೆ ಪರಿಸರ ಒಣಗಿರುತ್ತದೆ. ಅಲ್ಲಿಂದ ಅಕ್ಟೋಬರ್ ಅಂತ್ಯದವರೆಗೂ ಮಳೆ. ತೊರೆಗಳು ತುಂಬಿ ಹರಿಯುವುದರಿಂದ ಚಾರಣ ನಿಷಿದ್ಧ.
| ಸಂತೋಷ್ ರಾವ್ ಪೆಮುಡ