More

  ಭೂ ಗುತ್ತಿಗೆ ಸಕ್ರಮ; ಕೃಷಿಗೆ ಬಂಡವಾಳದ ನಿರೀಕ್ಷೆ

  ಕೃಷಿ ಕ್ಷೇತ್ರಕ್ಕೆ ಬಂಡವಾಳ ಹರಿಸಲು ಹಾಗೂ ಬಳಕೆಯಾಗದ ಪಾಳುಭೂಮಿಯನ್ನು ವ್ಯವಸಾಯಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಗುತ್ತಿಗೆ ನೀಡುವ ಪದ್ಧತಿಯನ್ನು ಕಾನೂನುಬದ್ಧಗೊಳಿಸಲು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಭೂ ಸುಧಾರಣಾ ಕಾಯ್ದೆ ಜಾರಿಗೆ ಬಂದ ನಂತರ ಗುತ್ತಿಗೆ ಪದ್ಧತಿ ನಿಷೇಧ ಮಾಡಲಾಗಿದೆ. ಆದರೂ ಅನಧಿಕೃತವಾಗಿ ನಡೆಯುತ್ತಿರುವ ಗುತ್ತಿಗೆ ಪದ್ಧತಿಯನ್ನು ಸಕ್ರಮ ಮಾಡುವುದು ಸರ್ಕಾರದ ಉದ್ದೇಶವಾಗಿದೆ.

  ಕೇಂದ್ರ ನೀತಿ ಆಯೋಗದ ಸಲಹೆಯಂತೆ ಕೃಷಿ ಭೂಮಿ ಗುತ್ತಿಗೆ ಪದ್ಧತಿಯನ್ನು ಸಕ್ರಮ ಮಾಡಲು ಇಲಾಖೆಗಳು, ತಜ್ಞರ ಜತೆ ನಡೆದ ಚರ್ಚೆಯ ಬಳಿಕ ಇದೀಗ ಕಾನೂನು ಸಿದ್ಧವಾಗಿದೆ. ಹೊಸ ಕಾನೂನಿನ ಮೂಲಕ ಭೂಮಿ ಮಾಲೀಕರು ಹಾಗೂ ಗುತ್ತಿಗೆದಾರರ ನಡುವೆ ಯಾವುದೇ ವಿವಾದ ತಲೆದೋರದಂತೆ ಇಬ್ಬರ ಹಿತವನ್ನೂ ಕಾಯಲಾಗುತ್ತದೆ.

  ಏಕರೂಪ ಕಾನೂನಿಗೆ ಸಲಹೆ: ಇಡೀ ದೇಶದಲ್ಲಿ ಕೃಷಿ ಭೂಮಿ ಗುತ್ತಿಗೆ ನೀಡುವುದಕ್ಕೆ ಏಕರೂಪ ಕಾನೂನು ಇಲ್ಲ. ಭೂ ಸುಧಾರಣೆ ಕಾಯ್ದೆ ತಂದಿರುವ ರಾಜ್ಯ ಸೇರಿ ಕೆಲವೆಡೆ ನಿಷೇಧವಿದ್ದರೆ, ಇನ್ನೂ ಕೆಲವೆಡೆ ಗುತ್ತಿಗೆಗೆ ಅವಕಾಶ ಇದೆ. ಮತ್ತೊಂದಿಷ್ಟು ರಾಜ್ಯಗಳಲ್ಲಿ ಗುತ್ತಿಗೆದಾರನಿಗೇ ಭೂಮಿ ಖರೀದಿಸಲು ಅವಕಾಶವಿದೆ. ಆದ್ದ ರಿಂದಲೇ ನೀತಿ ಆಯೋಗ ಏಕರೂಪ ಕಾನೂನಿಗೆ ಸಲಹೆ ನೀಡಿತ್ತು. ಹಿಂದಿನ ಕಾಂಗ್ರೆಸ್ ಸರ್ಕಾರವೇ ಕೃಷಿ ಭೂಮಿ ಗುತ್ತಿಗೆಗೆ ಅವಕಾಶ ಕಲ್ಪಿಸಲು ಮುಂದಾ ಗಿತ್ತಾದರೂ ರೈತಾಪಿ ವರ್ಗದ ವಿರೋಧದ ಹಿನ್ನೆಲೆಯಲ್ಲಿ ಕೈ ಬಿಡಲಾಗಿತ್ತು. ಇದೀಗ ಕಂದಾಯ ಇಲಾಖೆ ಕಾನೂನು ಸಿದ್ಧಪಡಿಸಿದ್ದು, ಇದನ್ನು ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು ಸಿದ್ಧತೆ ಮಾಡುತ್ತಿದೆ.

  ಅನಧಿಕೃತವಾಗಿ ನಡೆಯುತ್ತಿರುವ ಕೃಷಿ ಭೂಮಿ ಗುತ್ತಿಗೆಯಲ್ಲಿ ಭೂಮಾಲೀಕರು, ಗುತ್ತಿಗೆದಾರರ ನಡುವೆ ಮೌಖಿಕ ಒಪ್ಪಂದವಾಗಿರುತ್ತದೆ. ಇಬ್ಬರೂ ಲಾಭ, ನಷ್ಟಕ್ಕೆ ಸಮಾನ ಪಾಲುದಾರರಾಗಿರುತ್ತಾರೆ. 

  ಇಬ್ಬರ ನಡುವೆ ಕಾನೂನಿನ ಸಮಸ್ಯೆಯಾದರೆ ಪರಿಹಾರ ಮಾಡಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ನೈಸರ್ಗಿಕ ವಿಕೋಪದಿಂದ ಬೆಳೆ ಹಾಳಾಗಿ ಪರಿಹಾರ ಬಂದರೆ ಅದು ಭೂ ಮಾಲೀಕ ಹಾಗೂ ಗುತ್ತಿಗೆದಾರನ ನಡುವೆ ವಿವಾದಕ್ಕೆ ಕಾರಣವಾಗುತ್ತದೆ. ಆದರೆ ಒಪ್ಪಂದಕ್ಕೆ ಕಾನೂನಿನ ಮಾನ್ಯತೆ ಇದ್ದರೆ ಆಗ ಸಮಸ್ಯೆ ಇರುವುದಿಲ್ಲ ಎಂಬುದು ಒಟ್ಟಾರೆ ಉದ್ದೇಶ. ಕೃಷಿ ಉದ್ದೇಶವಿದ್ದು ಭೂಮಿ ಖರೀದಿಗೆ ಬಂಡವಾಳ ಕೆೊರತೆ ಇರುವವರು ಗುತ್ತಿಗೆ ಮೂಲಕ ಕೃಷಿ ಮಾಡಲು ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.

  ಕಾನೂನು ಏನು?

  ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ಸೆಕ್ಷನ್ 5 ರ ಪ್ರಕಾರ ಕೃಷಿ ಭೂಮಿ ಗುತ್ತಿಗೆ ನಿಷೇಧವಿದೆ. ಅದಕ್ಕೆ ತಿದ್ದುಪಡಿ ತರುವ ಮೂಲಕ ಗುತ್ತಿಗೆ ನೀಡುವುದನ್ನು ಸಕ್ರಮ ಗೊಳಿಸಲಾಗುತ್ತದೆ. ಆಗ ಯಾರು ಬೇಕಾದರೂ ಕೃಷಿ ಭೂಮಿ ಗುತ್ತಿಗೆ ಪಡೆಯಲು ಅವಕಾಶ ಸಿಗಲಿದೆ.

  ಮೌಖಿಕ ಗುತ್ತಿಗೆ

  ರಾಜ್ಯದಲ್ಲಿ ನಿಷೇಧವಿದ್ದರೂ ಗೇಣಿ, ಕೋರು, ಪಾಲು, ಫಸಲು ಗುತ್ತಿಗೆ ಮೊದಲಾದ ಹೆಸರಿನಲ್ಲಿ ಅನಧಿಕೃತವಾಗಿ ನಡೆಯುತ್ತಿದೆ.

  ಒಡೆತನ ಬದಲಾಗಲ್ಲ

  ಈ ಯೋಜನೆ ಜಾರಿಗೆ ತರುವುದರಿಂದ ಕೃಷಿಯ ಉತ್ಪಾದಕತೆ ಹೆಚ್ಚುವುದರಿಂದ ಗ್ರಾಮೀಣ ಬದುಕಿನಲ್ಲಿ ಬದಲಾವಣೆ ಸಾಧ್ಯವಾಗುತ್ತದೆ. ಮಾಲೀಕರಿಗೆ ಭೂಮಿಯ ಮೇಲಿನ ಮಾಲೀಕತ್ವ ಹೋಗುತ್ತದೆ ಎಂಬ ಭಯ ಇರುವುದಿಲ್ಲ.

  ಏನೇನು ಇರಲಿದೆ?

  1. ಗುತ್ತಿಗೆ ಒಡಂಬಡಿಕೆ ಹಾಗೂ ಸಮಸ್ಯೆಗಳಾದರೆ ಅದನ್ನು ಬಗೆಹರಿಸುವ ಜವಾಬ್ದಾರಿ ತಹಸೀಲ್ದಾರರದ್ದು
  2. ಒಪ್ಪಂದ ನೋಂದಣಿ ಆಗಬೇಕು
  3. ಗುತ್ತಿಗೆದಾರ ಫಸಲು ಆಧಾರದಲ್ಲಿ ಸಾಲ ಸಹ ಪಡೆಯಬಹುದು
  4. ಕೃಷಿಯ ಉತ್ಪಾದಕತೆ ಹೆಚ್ಚಳ
  5. ಪ್ರಕೃತಿ ವಿಕೋಪಕ್ಕೆ ಒಳಗಾದಾಗ ಪರಿಹಾರ ಹಾಗೂ ವಿಮೆ ಭೂಮಿ ಮಾಲೀಕರ ಜತೆಗೆ ಗುತ್ತಿಗೆದಾರರಿಗೂ ಲಭ್ಯವಾಗುತ್ತದೆ
  6. ಗುತ್ತಿಗೆದಾರನಿಗೆ ನಷ್ಟವಾದರೆ ಅದನ್ನು ಗುತ್ತಿಗೆ ಅವಧಿ ವಿಸ್ತರಣೆ ಮೂಲಕ ಸರಿದೂಗಿಸುವುದ.
  7. ಕೃಷಿ ಹೊರತು ಬೇರೆ ಉದ್ದೇಶಕ್ಕೆ ಬಳಕೆಗೆ ಅವಕಾಶ ಇಲ್ಲ

  ನೀತಿ ಆಯೋಗದ ಸಲಹೆಯಂತೆ ಗುತ್ತಿಗೆ ಕೃಷಿಗೆ ಅವಕಾಶ ನೀಡುವುದಕ್ಕಾಗಿ ಕಾನೂನು ತರಲು ಸಿದ್ಧತೆ ನಡೆದಿದೆ. ಇದರಿಂದ ಕೃಷಿಯ ಉತ್ಪಾದಕತೆ ಹೆಚ್ಚಿ ಬಂಡವಾಳ ಬರುತ್ತದೆ.

  | ಆರ್. ಅಶೋಕ್ ಕಂದಾಯ ಸಚಿವ

  ಕಾಪೋರೇಟ್ ಕೃಷಿಗೆ ಅವಕಾಶ ಕಲ್ಪಿಸುವ ಈ ಕಾನೂನಿನಿಂದ ಅನನು ಕೂಲ ಹೆಚ್ಚು. ಇದರ ವಿರುದ್ಧ ಹೋರಾಡುತ್ತೇವೆ.

  | ಜೆ.ಸಿ. ಬಯ್ಯಾರೆಡ್ಡಿ ಅಧ್ಯಕ್ಷ, ಪ್ರಾಂತ ರೈತ ಸಂಘ

  ಬಂಡವಾಳ ಸೆಳೆತ

  ಕೃಷಿಯನ್ನು ಒಂದು ಉದ್ಯಮವಾಗಿ ಪರಿಗಣಿಸಿ ಬಂಡವಾಳ ಹೂಡುವವರು ಮುಂದೆ ಬರುವುದು ವಿರಳ. ಆದರೆ ಗುತ್ತಿಗೆಗೆ ಕಾನೂನಿನ ಮಾನ್ಯತೆ ಸಿಕ್ಕರೆ ಬಂಡವಾಳ ಹೂಡುವವರು ಬಂದು ಕೃಷಿ ಭೂಮಿ ಪಾಳು ಬೀಳುವುದಿಲ್ಲ. ಕೃಷಿ ಕ್ಷೇತ್ರದಲ್ಲಿಯೂ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂಬುದು ಒಂದು ನಿರೀಕ್ಷೆ.

  ಸರ್ಕಾರ ಜವಾಬ್ದಾರನಲ್ಲ

  ಗುತ್ತಿಗೆ ಅವಧಿ ಹಾಗೂ ಹಣದ ಬಗ್ಗೆ ಸರ್ಕಾರ ಯಾವುದೇ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಅದನ್ನು ಭೂ ಮಾಲೀಕ ಹಾಗೂ ಗುತ್ತಿಗೆದಾರರೇ ಮಾತುಕತೆ ಮೂಲಕ ನಿರ್ಧಾರ ಮಾಡಿಕೊಳ್ಳಬೇಕು. ಈ ವಿಚಾರದಲ್ಲಿ ಸರ್ಕಾರದ ಮಧ್ಯಪ್ರವೇಶವಿಲ್ಲ.

  ಕಂಪನಿ ಕೃಷಿ ಭೀತಿ

  ಭೂಮಿ ಗುತ್ತಿಗೆ ನೀಡುವುದರಿಂದ ಮುಂದೆ ಕಂಪನಿಗಳು ಭೂ ಖರೀದಿ ಮಾಡಿ ರೈತರನ್ನು ಬೀದಿಗೆ ತಳ್ಳುತ್ತವೆ ಎಂಬ ಆಕ್ರೋಶ, ಆತಂಕವೂ ಅಲ್ಲಲ್ಲಿ ಕೇಳಿ ಬರುತ್ತಿದೆ. ಇದರಿಂದ ರೈತರಿಗಿಂತ ದೊಡ್ಡ ದೊಡ್ಡ ಕಂಪನಿಗಳಿಗೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯವೂ ಇದೆ.

  ಎಲ್ಲಿ ಏನಿದೆ?

  ಕರ್ನಾಟಕ, ಬಿಹಾರ, ತೆಲಂಗಾಣ, ಮಧ್ಯಪ್ರದೇಶ, ಉತ್ತರ ಪ್ರದೇಶದಲ್ಲಿ ಕೃಷಿ ಭೂಮಿ ಗುತ್ತಿಗೆ ನೀಡಿಕೆಗೆ ಸಂಪೂರ್ಣ ನಿಷೇಧವಿದೆ. ಆಂಧ್ರಪ್ರದೇಶ, ರಾಜಸ್ಥಾನ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಯಾವುದೇ ನಿಯಂತ್ರಣವಿಲ್ಲ. ಪಂಜಾಬ್, ಹರಿಯಾಣ, ಗುಜರಾತ್, ಮಹಾರಾಷ್ಟ್ರ, ಅಸ್ಸಾಂಗಳಲ್ಲಿ ಗುತ್ತಿಗೆ ನಿಷೇಧವಿಲ್ಲ, ಗುತ್ತಿಗೆದಾರನೇ ಆ ಭೂಮಿ ಖರೀದಿಸುವುದಕ್ಕೂ ಅವಕಾಶ ಇದೆ.

   

  | ರುದ್ರಣ್ಣ ಹರ್ತಿಕೋಟೆ ಬೆಂಗಳೂರು

   

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts