ಹಲವು ರಾಜ್ಯಗಳಲ್ಲಿ ಕಬ್ಬು ಬೆಳೆ ಹಾಳಾಗಿ ರೈತರು ಕಂಗೆಟ್ಟಿದ್ದಾರೆ. ಮತ್ತೆ ಕೆಲವೆಡೆ ಬೆಳೆಗಳಿಗೆ ನ್ಯಾಯಯುತವಾದ ಬೆಲೆ ಸಿಗದೆ ಹಾನಿ ಅನುಭವಿಸಿದ್ದಾರೆ. ಕಳೆದ ವರ್ಷವಷ್ಟೇ ದೇಶದ ಹತ್ತಕ್ಕೂ ಅಧಿಕ ರಾಜ್ಯಗಳಲ್ಲಿ ಕೃಷಿಕರ ಪ್ರತಿಭಟನೆ ತಾರಕಕ್ಕೆ ಏರಿತ್ತು. ‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್’ ಯೋಜನೆ ಸಣ್ಣರೈತರ ಪಾಲಿಗೆ ಅನುಕೂಲವಾಗಿ ಪರಿಣಮಿಸಿದೆ. ಆದರೆ, 2022ರ ಹೊತ್ತಿಗೆ ರೈತರ ಆದಾಯ ದ್ವಿಗುಣಗೊಳಿಸುವ ಗುರಿಸಾಧನೆಗೆ ಸರ್ಕಾರ ಇನ್ನಷ್ಟು ಶ್ರಮ ಹಾಕಬೇಕಿದೆ ಎನ್ನುತ್ತಾರೆ ಕೃಷಿತಜ್ಞರು.
ಸಾಂಪ್ರದಾಯಿಕ ಕೃಷಿ ಜತೆಗೆ ರೈತರು ಮರಗಳನ್ನು ಬೆಳೆಸಲು, ಸೌರಶಕ್ತಿ ಉತ್ಪಾದನೆ ಮಾಡಲು, ಪಶುಸಂಗೋಪನೆ ಕೈಗೊಳ್ಳಲು ಪ್ರೋತ್ಸಾಹ ನೀಡಲಾಗುತ್ತಿದೆ. ಅಲ್ಲದೆ, ಕೇಂದ್ರ ಸರ್ಕಾರದ ಹಲವು ಕೃಷಿ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿ ಆಗುತ್ತಿರುವ ಕಾರಣ ರೈತರ ವಿಶ್ವಾಸವೂ ಹೆಚ್ಚಿದೆ. ಆದರೆ, ಬೆಳೆಗಳಿಗೆ ಸೂಕ್ತ ಬೆಲೆ ಸಿಗದಿರುವುದು, ಶೈತ್ಯಾಗಾರಗಳ ಕೊರತೆ, ಕೃಷಿಯ ಕೆಲ ಉತ್ಪನ್ನಗಳಿಗೂ ಜಿಎಸ್ಟಿ ಹೊರೆ ಸಮಸ್ಯೆಯನ್ನು ಸೃಷ್ಟಿಸಿದೆ. ರೈತರ ಸಮಸ್ಯೆಗಳು ಬೇರೆ-ಬೇರೆ ರಾಜ್ಯಗಳಲ್ಲಿ ಭಿನ್ನ. ಆದಾಗ್ಯೂ, ಕಬ್ಬು ಬೆಳೆಯುವ ರೈತರು ಮಾತ್ರ ಈ ಬಾರಿ ಹಲವು ಸಮಸ್ಯೆ ಎದುರಿಸಿದ್ದಾರೆ.
2022ರ ಹೊತ್ತಿಗೆ ರೈತರ ಆದಾಯ ದ್ವಿಗುಣಗೊಳಿಸುವ ಆಶ್ವಾಸನೆ ನೀಡಿರುವ ಸರ್ಕಾರ ಅದನ್ನು ಈಡೇರಿಸಲು ಕೃಷಿಗೆ ಪೂರಕವಾಗಿರುವ ಹಲವು ಉಪವಲಯಗಳಿಗೆ ಶಕ್ತಿ ತುಂಬುತ್ತಿದೆ. ಕೃಷಿ ಮಾರುಕಟ್ಟೆಗಳ ಅಭಿವೃದ್ಧಿ, ಗ್ರಾಮೀಣ ಭಾಗದಲ್ಲೂ ಕೃಷಿ ಮಾರುಕಟ್ಟೆಗಳ ಸ್ಥಾಪನೆ, ಸಣ್ಣ ನೀರಾವರಿ, ಹನಿ ನೀರಾವರಿಗೆ ಪ್ರೋತ್ಸಾಹ ಸೇರಿ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಕೃಷಿ ಮತ್ತು ಹವಾಮಾನಕ್ಕೆ ಸಂಬಂಧಿಸಿದ ಮಾಹಿತಿ ರೈತನ ಬೆರಳತುದಿಯಲ್ಲಿ ಸಿಗುವಂತೆ ಮಾಡಲಾಗಿದೆ. ಈವರೆಗೆ 585 ಕೃಷಿ ಉತ್ಪನ್ನ ಮಾರುಕಟ್ಟೆಗಳು ಎಲೆಕ್ಟ್ರಾನಿಕ್ ರಾಷ್ಟ್ರೀಯ ಕೃಷಿ ಮಾರುಕಟ್ಟೆ-ಇ-ನ್ಯಾಮ್ನೊಂದಿಗೆ ಜೋಡಿಸಿಕೊಂಡಿವೆ. ಪ್ರತಿ ವರ್ಷ 200 ಕೃಷಿ ಮಾರುಕಟ್ಟೆಗಳನ್ನು ಜೋಡಿಸುವ ಗುರಿ ಸರ್ಕಾರದ್ದಾಗಿದೆ. ದೇಶಾದ್ಯಂತ 2,700 ಕೃಷಿ ಉತ್ಪನ್ನ ಮಾರುಕಟ್ಟೆಗಳು ಮತ್ತು 4 ಸಾವಿರ ಉಪ ಮಾರುಕಟ್ಟೆಗಳಿವೆ. ಅಲ್ಲದೆ, ಸಾವಿರಾರು ಗ್ರಾಮೀಣ ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ಇ-ನ್ಯಾಮ್ಗೆ ಜೋಡಿಸಲಾಗಿದೆ.
ನೈಸರ್ಗಿಕ ಕೃಷಿ ಪ್ರಮಾಣ ಹೆಚ್ಚಳ
ಕೃಷಿ ವೆಚ್ಚ ತಗ್ಗಿಸಲು ಮತ್ತು ಪ್ರಕೃತಿಗೆ ಪೂರಕವಾದ ಬೇಸಾಯ ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಶೂನ್ಯ ಬಂಡವಾಳ ಕೃಷಿಯನ್ನು ಪ್ರೋತ್ಸಾಹಿಸುವುದಾಗಿ ಕಳೆದ ಬಜೆಟ್ನಲ್ಲೇ ಘೋಷಿಸಿತ್ತು. ಅದರಂತೆ, ಉತ್ತರಪ್ರದೇಶ, ಮಹಾರಾಷ್ಟ್ರ, ಛತ್ತೀಸ್ಗಢ, ಮಧ್ಯಪ್ರದೇಶ, ಪಂಜಾಬ್, ಬಿಹಾರ, ಹರಿಯಾಣ, ರಾಜಸ್ಥಾನ, ಜಾರ್ಖಂಡ್, ಕರ್ನಾಟಕದಲ್ಲಿ ನೈಸರ್ಗಿಕ ಕೃಷಿ ಪ್ರಮಾಣ ಹೆಚ್ಚಿದೆ. ಅಲ್ಲದೆ, ಸಾವಯವ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿರುವುದು ರೈತರಲ್ಲಿ ವಿಶ್ವಾಸ ಹೆಚ್ಚಿಸಿದೆ.
ಬರುತ್ತಿಲ್ಲ ನವೋದ್ಯಮಗಳು
ಕೃಷಿಯಲ್ಲಿ ಹೊಸ ಅನ್ವೇಷಣೆ, ತಂತ್ರಜ್ಞಾನದ ಲಾಭ ಬೇರುಮಟ್ಟದಲ್ಲಿ ತಲುಪಿಸುವುದು ಸೇರಿ ಹಲವು ಉದ್ದೇಶಗಳಿಗಾಗಿ ಕೃಷಿರಂಗದಲ್ಲಿ ನವೋದ್ಯಮಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ಬಜೆಟ್ನಲ್ಲೇ ಘೋಷಿಸಿದ್ದರು. ಆದರೆ, ಕೃಷಿರಂಗದಲ್ಲಿ ನವೋದ್ಯಮ ಆರಂಭಿಸಲು ಒಲವು ವ್ಯಕ್ತವಾಗಿಲ್ಲ. ರೈತರಲ್ಲಿ ಮಾಹಿತಿ ಕೊರತೆ, ಬಂಡವಾಳ ಸಮಸ್ಯೆ ಇದಕ್ಕೆ ಕಾರಣವಾಗಿದೆ.
ಏನಿರಲಿದೆ ಬಜೆಟ್ನಲ್ಲಿ?
ಕೃಷಿ ಕ್ಷೇತ್ರದಲ್ಲಿನ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಲಿದ್ದು, ಮೌಲ್ಯವರ್ಧನೆಗಾಗಿ ಖಾಸಗಿ ವಲಯಗಳಿಗೆ ಅಗತ್ಯ ನೆರವು ನೀಡಲಿದೆ. ಬೆಳೆಗಳಿಗೆ ಸೂಕ್ತ ಬೆಲೆ, ಕೃಷಿ ಆಧಾರಿತ ಕೈಗಾರಿಕೆಗಳಲ್ಲಿ ಖಾಸಗಿ ಹೂಡಿಕೆಗೆ ಪ್ರೋತ್ಸಾಹ ಮತ್ತು ಕೌಶಲಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ. ಇನ್ನಷ್ಟು ಸಾಮಾನ್ಯ ಸೌಲಭ್ಯ ಕೇಂದ್ರ (ಸಿಎಫ್ಎಸ್)ಗಳನ್ನು ಸ್ಥಾಪಿಸುವುದರೊಂದಿಗೆ ಕ್ಲಸ್ಟರ್ ಆಧಾರಿತ ಅಭಿವೃದ್ಧಿ ಸುಗಮಗೊಳಿಸಲು ಒತ್ತು.
ನೀರಾವರಿಗೆ ಆದ್ಯತೆ
ಕೃಷಿ ಸಿಂಚಾಯಿ ಯೋಜನೆಯಿಂದ ಸಣ್ಣರೈತರಿಗೆ, ಎರಡು ಎಕರೆಗಿಂತ ಕಡಿಮೆ ಜಮೀನಿನಲ್ಲಿ ಕೃಷಿ ಮಾಡುತ್ತಿರುವವರಿಗೂ ಅನುಕೂಲವಾಗಿದೆ. ಆದರೆ, ಕೆಲ ಬಿಜೆಪಿ-ಆಡಳಿತದ ರಾಜ್ಯಗಳು ಕೂಡ ಪ್ರಸಕ್ತ ಯೋಜನೆ ಜಾರಿಗೆ ಅನಾಸಕ್ತಿ ತೋರಿವೆ. ಮತ್ತು ಇನ್ನು ಕೆಲ ರಾಜ್ಯಗಳಲ್ಲಿ ಹಲವು ದಶಕಗಳಿಂದ ನಡೆಯುತ್ತಿರುವ ನೀರಾವರಿ ಯೋಜನೆಗಳ ಕಾಮಗಾರಿಯೇ ಮುಗಿದಿಲ್ಲ. ಹೀಗಾಗಿ, ಈ ಬಜೆಟ್ನಲ್ಲಿ ನೀರಾವರಿ ಸೌಲಭ್ಯ ವಿಸ್ತರಣೆಗೆ ಸರ್ಕಾರ ಒತ್ತು ನೀಡಬೇಕು ಎಂಬುದು ರೈತರ ಆಗ್ರಹವಾಗಿದೆ.
ಈಗಾಗಲೇ ಕೇಂದ್ರ ವಿತ್ತ, ಕೃಷಿ ಸಚಿವರೊಂದಿಗೆ ಕಿಸಾನ್ ಸಂಘ ಚರ್ಚೆ ನಡೆಸಿದೆ. ಕೃಷಿಗೆ ಪೂರಕವಾದ ಬಜೆಟ್ ಮಂಡನೆಯಾಗಲಿದೆ ಎಂಬ ನಿರೀಕ್ಷೆ ಇದೆ. ನಮ್ಮ ಸಂಘಟನೆ ಮುಂದಿಟ್ಟ ಬೇಡಿಕೆ ಮತ್ತು ಸಲಹೆಗಳಿಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಸಿಗಬೇಕು ಮತ್ತು ಸಾವಯವ ಕೃಷಿಗೆ ಉತ್ತೇಜನ ಸಿಗಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಕಾಫಿ, ತೆಂಗು, ಅಡಕೆ ಬೆಳೆಗಾರರು ಸಂಕಷ್ಟ ಬಗ್ಗೆ ಗಮನ ಸೆಳೆದಿದ್ದೇವೆ. ಪರಿಹಾರಸೂತ್ರ ತಿಳಿಸಲು ಸಿದ್ಧ ಎಂದಿದ್ದೇವೆ. ಸಾಲ ವಸೂಲಾತಿಗಾಗಿ ಬ್ಯಾಂಕುಗಳಿಂದ ನೋಟಿಸ್ ನೀಡುತ್ತಿರುವ ಕ್ರಮವನ್ನು ವಿರೋಧಿಸಿದ್ದು, ನೋಟಿಸ್ ನೀಡದಂತೆ ಬ್ಯಾಂಕುಗಳಿಗೆ ಸೂಚಿಸಬೇಕು ಎಂದು ಆಗ್ರಹಿಸಿದ್ದೇವೆ. ಬೆಳೆವಿಮೆಯ ಹೊಣೆಯನ್ನು ಸರ್ಕಾರಿ ಅಧೀನದಲ್ಲಿರುವ ಕಂಪನಿಗಳಿಗೆ ನೀಡಿದರೆ ರೈತರಿಗೆ ಅನುಕೂಲವಾಗುತ್ತದೆ. ಈ ಎಲ್ಲ ಬೇಡಿಕೆಗಳು ಈಡೇರಿದರೆ 2022ರ ನಂತರ ರೈತರೇ ಸರ್ಕಾರಕ್ಕೆ ಆರ್ಥಿಕವಾಗಿ ಸಹಾಯಕ್ಕೆ ನಿಲ್ಲಬಲ್ಲರು ಎಂಬ ವಿಶ್ವಾಸ ತುಂಬಿದ್ದೇವೆ. ನೀರಾವರಿಗೆ ಒತ್ತು ನೀಡಲಾಗಿದ್ದು, ಹನಿ ನೀರಾವರಿಗೆ ಇನ್ನಷ್ಟು ಬೆಂಬಲ ನೀಡಬೇಕಿದೆ. ಮೂಲಸೌಕರ್ಯ ಇನ್ನಷ್ಟು ವಿಸ್ತರಣೆ ಆಗಬೇಕಿದೆ. ಬೇಡಿಕೆಗಳು ಈಡೇರುವ ನಿರೀಕ್ಷೆ ಇದೆ. ಒಂದು ವೇಳೆ ಸ್ಪಂದಿಸದಿದ್ದಲ್ಲಿ ಹೋರಾಟಕ್ಕೂ ಸಿದ್ಧರಿದ್ದೇವೆ. ಒಟ್ಟಾರೆ, ಗ್ರಾಮಮಟ್ಟದ ರೈತನ ಕೂಗು ದೆಹಲಿಯವರೆಗೆ ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಸಂಘಟನೆ ಕಾರ್ಯನಿರ್ವಹಿಸುತ್ತಿದೆ.
| ಐ.ಎನ್.ಬಸವನಗೌಡ ರಾಷ್ಟ್ರೀಯ ಅಧ್ಯಕ್ಷರು, ಭಾರತೀಯ ಕಿಸಾನ್ ಸಂಘ