
ಶಿವಮೊಗ್ಗ: ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಮೂಲಕ 15 ದಿನಗಳಲ್ಲಿ ಜಿಲ್ಲೆಯ 28 ಸಾವಿರ ರೈತರನ್ನು ತಲುಪಿರುವುದು ವಿಶೇಷವಾಗಿದೆ ಎಂದು ಕೆಳದಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ.ಜಗದೀಶ ಹೇಳಿದರು.
ಶಿಕಾರಿಪುರ ತಾಲೂಕು ನೆಲವಾಗಿಲು ಗ್ರಾಮದಲ್ಲಿ ಏರ್ಪಡಿಸಿದ್ದ ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಸಮಾರೋಪದಲ್ಲಿ ಮಾತನಾಡಿ, ಐಸಿಎಆರ್, ವಿಶ್ವವಿದ್ಯಾಲಯ ಹಾಗೂ ಕೆವಿಕೆ ವಿಜ್ಞಾನಿಗಳು, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡ ಹಳ್ಳಿಗಳಿಗೆ ಭೇಟಿ ನೀಡಿ ರೈತರಿಗೆ ಮಾಹಿತಿ ನೀಡಿದೆ ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸಿ.ಸುನೀಲ್ ಮಾತನಾಡಿ, ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯದ ಮಹತ್ವದ ಕಾರ್ಯಕ್ರಮ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಶಿವಮೊಗ್ಗ ಜಿಲ್ಲೆಯ 270 ಗ್ರಾಮಗಳಲ್ಲಿ ನಡೆದಿದೆ. ಈ ಅವಧಿಯಲ್ಲಿ 160 ಪದ್ಧತಿ ಪ್ರಾತ್ಯಕ್ಷಿಕೆ, 180 ಕ್ಷೇತ್ರ ಭೇಟಿ, 65 ಸಮಸ್ಯಾತ್ಮಕ ಕ್ಷೇತ್ರಗಳಿಗೆ ಭೇಟಿ ನೀಡಲಾಗಿದೆ ಎಂದರು.
ವಿವಿ ವಿಸ್ತರಣಾ ನಿರ್ದೇಶಕ ಡಾ. ಜಿ.ಕೆ.ಗಿರಿಜೇಶ್ ಮಾತನಾಡಿ, ರೈತರು ಕೃಷಿಯಲ್ಲಿ ನೂತನ ತಾಂತ್ರಿಕತೆಗಳನ್ನು ಅಳವಡಿಸಿಕೊಂಡರೆ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ತಿಳಿಸಿದರು.
ನೆಲವಾಗಿಲು ಗ್ರಾಪಂ ಅಧ್ಯಕ್ಷ ಬಸವರಾಜು, ಸದಸ್ಯ ಬಸವರಾಜು, ಪ್ರಗತಿಪರ ಕೃಷಿಕ ನಿಂಗರಾಜ ಗೌಡ, ಪ್ರಮುಖರಾದ ಉಮೇಶ್ ಬಣಕಾರ್ ಇತರರಿದ್ದರು.