ವಿಜಯಪುರ: ಪುರುಷ ಸೂಫಿಗಳೇ ಹೆಚ್ಚಾಗಿದ್ದ 8ನೇ ಶತಮಾನದಲ್ಲಿ ರಾಬಿಯಾ ಅಲ್ ಅದವಿಯ ಎಂಬಾಕೆ ಜಗತ್ತಿನ ಮೊದಲ ಸೂಫಿ ಮಹಿಳೆಯಾಗಿ ಹೊರಹೊಮ್ಮಿದಳು ಎಂದು ಬಸವನಬಾಗೇವಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಬಸೀರಾಬಾನು ನಿಡಗುಂದಿ ಹೇಳಿದರು.
ನಗರದ ಡಾ. ಫ.ಗು. ಹಳಕಟ್ಟಿ ಸಂಶೋಧನ ಕೇಂದ್ರದ ಚಿಂತನ ಸಾಂಸತಿಕ ಬಳಗ ಅನುಭಾವಿಗಳು ಮರುಭೆಟ್ಟಿ (3) ಹಿನ್ನೆಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡ ರಾಬಿಯಾ ಅಲ್& ಅದವಿಯ ಎಂಬ ಅನುಭಾವದ ಕುರಿತು ಅವರು ಮಾತನಾಡಿದ ಅವರು, ದೇವನೊಂದಿಗೆ ಲೀನವಾಗುವುದೇ ಸೂಫಿಯ ಮೂಲತತ್ವ. ಸೋಫಿಯಾ (ಜ್ಞಾನ) ಪದದ ರೂಪಾಂತರವೇ ಸೂಫಿ ಎಂದರು.
ಇರಾಕ್ ದೇಶದ ಬಸರಾ ಪ್ರದೇಶದಲ್ಲಿ ನಾಲ್ಕನೇ ಮಗಳಾಗಿ ಬಡತನದಲ್ಲಿ ಜನಿಸಿದ ರಾಬಿಯಾ ಬಾಲ್ಯದಲ್ಲೇ ತಂದೆ& ತಾಯಿಯನ್ನು ಕಳೆದುಕೊಂಡು ದಿನಾಲು ರಾತ್ರಿ ವೇಳೆಯಲ್ಲಿ ಪ್ರಾರ್ಥನೆ ಮಾಡುವ ಜತೆಗೆ ಯಾರ ಹಂಗಿಗೂ ಒಳಗಾಗದೇ ಮರಭೂಮಿಯಲ್ಲೇ ಗುಡಿಸಲೊಂದನ್ನು ನಿರ್ಮಿಸಿಕೊಂಡು ಭಗವಂತನಿಗಾಗಿ ಪರಿತಪಿಸುತ್ತ, ಧ್ಯಾನಿಸುತ್ತ ಅನುಭವದ ನೆಲೆಯಲ್ಲಿ ಅನುಭಾವದ ತುತ್ತತುದಿಗೆ ಏರಿದ ಮೊದಲ ಸೂಫಿ ಮಹಿಳೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಮಾಜಿ ಪ್ರಧಾನಿ ಮನಮೋಹನ ಸಿಂಗ್, ಸಾಹಿತಿಗಳಾದ ಡಾ. ಎಂ.ಎನ್. ವಾಲಿ, ಸಾಹಿತಿ ನಾ. ಡಿಸೋಜಾ ಹಾಗೂ ಪ್ರೊ. ಸುಶೀಲಾ ಪಟ್ಟಣಶೆಟ್ಟಿ ಅಗಲಿಕೆ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಡಾ. ವಿ.ಎಸ್. ಬಾಗಾಯತ, ಸಿ.ಎಂ. ಬಂಡಗರ, ನೂತನ ಬ್ಯಾಕೋಡ ಸಂವಾದ ಮಾಡಿದರು. ಸಂಶೋಧನ ಕೇಂದ್ರದ ಕಾರ್ಯದರ್ಶಿ ಡಾ. ಎಂ.ಎಸ್. ಮದಭಾವಿ ಪರಿಚಯಿಸಿದರು. ಡಾ. ವಿ.ಡಿ. ಐಹೊಳ್ಳಿ ನಿರೂಪಿಸಿದರು. ಡಾ. ಸುಭಾಸ ಕನ್ನೂರ ವಂದಿಸಿದರು. ಡಾ. ಎಸ್.ಎಂ. ಮೇತ್ರಿ ಮತ್ತಿತರರಿದ್ದರು.