More

    ವಸುಧೈವ ಕುಟುಂಬಕಂ ಆದರ್ಶದ ಕಾಲ ಸನ್ನಿಹಿತ

    ವಸುಧೈವ ಕುಟುಂಬಕಂ ಆದರ್ಶದ ಕಾಲ ಸನ್ನಿಹಿತಅಯಂ ನಿಜಃ ಪರೋ ವೇತಿ ಗಣನಾ ಲಘುಚೇತಸಾಂ ?

    ಉದಾರಚರಿತಾನಾಂ ತು ವಸುಧೈವ ಕುಟುಂಬಕಂ ?

    (ಮಹಾ ಉಪನಿಷತ್ತು, 6ನೇ ಅಧ್ಯಾಯ, 71-72 ಶ್ಲೋಕಗಳು)

    ಕೇವಲ ಸಂಕುಚಿತ ಮನೋಭಾವನೆ ಹೊಂದಿರುವವರು ಮಾತ್ರ, ಇವರು ನನ್ನವರು, ಅವರು ಬೇರೆಯವರು ಎಂಬ ಭೇದಭಾವನೆ ಇರಿಸಿಕೊಂಡಿರುತ್ತಾರೆ. ಆದರೆ, ವಿಶಾಲ ಹೃದಯಿಗಳು ಇಡೀ ಜಗತ್ತನ್ನು ಒಂದು ಕುಟುಂಬವೆಂದು ಭಾವಿಸುತ್ತಾರೆ.

    ನಾವು ಬೆಂಗಳೂರಿನ ವಿಮಾನ ನಿಲ್ದಾಣದ ರಸ್ತೆಯಲ್ಲಿ ನಗರದ ಕಡೆಗೆ ಹೋಗುವಾಗ ಭಾರತದ ಅಧ್ಯಕ್ಷತೆಯಲ್ಲಿ ಈ ವರ್ಷ ಆಯೋಜಿತವಾಗಿರುವ ಜಿ20 ಶೃಂಗಸಭೆಯ ಭಿತ್ತಿಪತ್ರಗಳನ್ನು ಹಾದಿಯುದ್ದಕ್ಕೂ ಕಾಣಬಹುದು. ಇತಿಹಾಸದಲ್ಲಿ ಮೊದಲನೆಯ ಬಾರಿ ಈ ಶೃಂಗಸಭೆಯು ಭಾರತೀಯ ನಾಯಕತ್ವದಲ್ಲಿ ಭಾರತದಲ್ಲಿ ನಡೆಯುತ್ತಿದೆ. ತನ್ನ ವಿಚಾರಧಾರೆಯನ್ನು ಜಗತ್ತಿನ ಮುಂಚೂಣಿ ದೇಶಗಳಿಗೆ ಬಿತ್ತರಿಸುವ ಅವಕಾಶವು ಇದೀಗ ನಮ್ಮ ದೇಶಕ್ಕೆ ಲಭಿಸಿದ್ದು, ಜಗತ್ತಿನ ಅತ್ಯಂತ ಪ್ರಾಚೀನ ನಾಗರೀಕತೆಯನ್ನು ಹೊಂದಿರುವ ಭಾರತವು ತನ್ನ ಸರ್ವಶ್ರೇಷ್ಠ ಸಂದೇಶವಾದ ವಸುಧೈವ ಕುಟುಂಬಕಂ ಒಂದು ಭೂಮಿ, ಒಂದು ಕುಟುಂಬ, ಒಂದೇ ಭವಿಷ್ಯವೆಂಬ ಧ್ಯೇಯವನ್ನು ಸರ್ವರಿಗೂ ಸಾರುತ್ತಿದೆ.

    ಯುದ್ಧ, ಘರ್ಷಣೆ, ವಿಭಜನಾತ್ಮಕ ಭೌಗೋಳಿಕ ರಾಜಕೀಯ ಹಾಗೂ ಧಾರ್ವಿುಕ ಅಶಾಂತಿಗಳಿಂದ ಜಝುರಿತವಾದ ಇಂದಿನ ಜಗತ್ತಿಗೆ ಒಂದು ಭೂಮಿ, ಒಂದು ಕುಟುಂಬ, ಒಂದೇ ಭವಿಷ್ಯ ಎಂಬುದು ಅತಿ ಚೈತನ್ಯದಾಯಕವಾದ ದಿಟ್ಟ ಸಂದೇಶವಾಗಿದೆ. ಅಥರ್ವವೇದದಲ್ಲಿಯೂ ‘ಯತ್ರ ವಿಶ್ವಂ ಭವತಿ ಏಕ ನೀಡಂ’ ವಿಶ್ವವೆಲ್ಲವೂ ಒಂದೇ ಗೂಡಿನಂತೆ ಎಂಬ ಉದಾರ ಘೊಷಣೆಯಿದೆ. ಹೀಗೆ ಪ್ರಾಚೀನ ಕಾಲದಿಂದಲೂ ವಿಶ್ವಮಾನವತೆಯನ್ನು ಸಾರಿದ ಸನಾತನ ಧರ್ಮದ ತವರುಮನೆಯಾದ ಭಾರತವಲ್ಲದೆ, ಮತ್ತಾರು ಇಂತಹ ಸಂದೇಶವನ್ನು ಇಂದು ಜಗತ್ತಿಗೆ ನೀಡಲು ಸಾಧ್ಯ?

    ಇದುವೇ ಭಾರತದ ಜೀವಾಳವಾಗಿದೆ. ಆಶ್ರಯ ಕೋರಿ ಬಂದ ಯಾವುದೇ ಜನಾಂಗವನ್ನು ಎಂದಿಗೂ ಭಾರತಮಾತೆಯು ನಿರಾಕರಿಸಿಲ್ಲ. ಬದಲಿಗೆ, ಆಕೆಯು ಎಲ್ಲರಿಗೂ ಮಮತೆಯ ಆಶ್ರಯದಾತೆಯಾಗಿ, ಜಗತ್ತಿನ ಇತಿಹಾಸದಲ್ಲಿ ಮಾತೃಸ್ವರೂಪಿಣಿಯಾಗಿ ಮೆರೆದಿದ್ದಾಳೆ. ಭಾರತಮಾತೆಯು ಬಂದವರೆಲ್ಲರನ್ನೂ ತನ್ನ ಮಡಿಲಿನಲ್ಲಿ ಸೇರಿಸಿಕೊಂಡು ಕೇವಲ ಸಹಿಸಿಕೊಂಡ ದೇಶವಲ್ಲ; ಎಲ್ಲರನ್ನೂ ತನ್ನವರೆಂದೇ ಅಂಗೀಕರಿಸಿ ಅವರನ್ನು ಭಾರತೀಯ ಕುಟುಂಬದ ಸದಸ್ಯರೆಂದೇ ಪರಿಗಣಿಸಿದ ಮಮತಾಮಯಿ. ಇಂದು ಭಾರತವು ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ›ವಾಗಿದ್ದು, ತನ್ನ ಜನಾಂಗೀಯ, ಧಾರ್ವಿುಕ, ಸಾಂಪ್ರದಾಯಿಕ ಹಾಗೂ ಭಾಷಾ ವೈವಿಧ್ಯತೆಯಿಂದಾಗಿ ಸರ್ವರಿಗೂ ಆಶ್ರಯ ಸ್ಥಾನವಾಗಿದೆ.

    ನಮ್ಮ ದೇಶದ ಇಂತಹ ಶ್ರೇಷ್ಠತೆಯನ್ನೇ ಕವಿ ಇಕ್ಬಾಲನು ಸುಪ್ರಸಿದ್ಧವಾದ ಸಾರೆ ಜಹಾನ್ ಸೆ ಅಚ್ಛಾ ಗೀತೆಯಲ್ಲಿ ಸಾರಿದ್ದಾನಲ್ಲವೇ? ಪರ್ಷಿಯಾ, ರೋಮ್ ಮತ್ತು ಈಜಿಪ್ತಿನ ಪ್ರಾಚೀನ ಸಂಸ್ಕೃತಿಗಳೆಲ್ಲವೂ ಹೇಳಹೆಸರಿಲ್ಲದೆ ನಶಿಸಿಹೋಗಿದ್ದರೂ, ಅದಕ್ಕಿಂತಲೂ ಪ್ರಾಚೀನವಾದ ನಮ್ಮ ಸಂಸೃ್ಕಯು ಶತಮಾನಗಳ ಕಾಲ ಬರ್ಬರ ದಾಳಿಗಳಿಗೆ, ಪಾಶ್ಚಾತ್ಯರ ಆಕ್ರಮಣಕ್ಕೆ ತುತ್ತಾದರೂ ಇಂದಿಗೂ ಬಗ್ಗದೆ, ಕುಗ್ಗದೆ ತಲೆಯಿತ್ತಿ ನಿಂತಿದೆ. ಹತ್ತು ಸಾವಿರ ವರ್ಷಗಳ ಹಿಂದೆ ನಮ್ಮ ಪೂರ್ವಜರು ಹೇಗೆ ವೇದಮಂತ್ರಗಳನ್ನು ಉಚ್ಚರಿಸುತ್ತಿದ್ದರೋ, ಅದೇ ರೀತಿಯಲ್ಲಿಯೇ ನಾವು ಇಂದಿಗೂ ಉಚ್ಚರಿಸುತ್ತಿದ್ದೇವೆ. ಅಂದಿನಿಂದ ಇಂದಿನವರೆಗೆ ನಮ್ಮ ಭಗವದಾರಾಧನಾ ಕ್ರಮ-ವಿಧಾನಗಳಲ್ಲಿಯೂ ಯಾವುದೇ ವ್ಯತ್ಯಾಸವಾಗಿಲ್ಲ. ಅಲ್ಲದೆ, ಹೊರಗಿನಿಂದ ಆಗಮಿಸಿದ ಸಂಸೃ್ಕಗಳನ್ನೂ ಏಕತೆ-ಸಮಾನತೆಗಳ ಭಾವದಿಂದ ಸ್ವೀಕರಿಸಿ ಅವುಗಳನ್ನೂ ಪೋಷಿಸಿದ್ದೇವೆ. ನಮ್ಮ ಪ್ರಾಚೀನ ಋಷಿಗಳು ಘೊಷಿಸಿದ, ಏಕಂ ಸತ್ ವಿಪ್ರಾಃ ಬಹುಧಾ ವದಂತಿ (ಋಗ್ವೇದ 1.164.46) ಸತ್ಯವು ಒಂದೇ ಆದರೂ ಅದನ್ನು ತಿಳಿದವರು ಬಹು ರೀತಿಗಳಲ್ಲಿ ಹೇಳುತ್ತಾರೆ ಎಂಬ ವಿಶಾಲ ವಿಚಾರಧಾರೆಯ ಆಧಾರದಲ್ಲಿ ಭಾರತವು ಎಲ್ಲ ಧರ್ಮಗಳ ತಾಣವಾಗಿದೆ. ಇಂತಹ ಹೃದಯವೈಶಾಲ್ಯತೆಯ ಧ್ಯೇಯವನ್ನು ಜಗತ್ತಿಗೆ ಪ್ರಪ್ರಥಮವಾಗಿ ನೀಡಿದ ದೇಶವು ಭಾರತವೇ ಆಗಿದೆ!

    ಇನ್ನೂ ಹೇಳಬೇಕೆಂದರೆ, ದೇಶದ ಹೊರಗೆ ಉಗಮವಾದ ಅಬ್ರಹಾಮಿಕ ಧರ್ಮಗಳಿಗೆ ಸೇರಿದ ವಿವಿಧ ಪಂಥಗಳ ಅನುಯಾಯಿಗಳು ಕೂಡಿ ಸಹಬಾಳ್ವೆ ನಡೆಸುತ್ತಿರುವ ಏಕೈಕ ದೇಶವೆಂದರೆ ಭಾರತವೇ ಆಗಿದೆ! ಹೀಗೆ ಭಾರತವು ಇಂದು ಇಂತಹ ವಿಶ್ವಕುಟುಂಬದ ತಾಣವಾಗಿದೆ.

    ಕುಟುಂಬವು ಸಮಾಜದ ಬಹು ಪ್ರಧಾನ ಘಟಕವಾಗಿದೆ. ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಪರಸ್ಪರ ಪ್ರೀತಿ-ಸಹಕಾರಗಳೊಂದಿಗೆ ಬಾಳುತ್ತಾ ಮುನ್ನಡೆಯುವುದು ಯಾವುದೇ ಕುಟುಂಬದ ಬಹು ಮುಖ್ಯ ಮೌಲ್ಯ. ಯಾರನ್ನೂ ನಿರಾಕರಿಸದೆ, ಎಲ್ಲರನ್ನೂ ಸೇರಿಸಿಕೊಂಡು ಒಟ್ಟಿಗೆ ಬಾಳುವುದೇ ಕುಟುಂಬದ ಲಕ್ಷಣ. ನಿಸ್ವಾರ್ಥ ಪ್ರೇಮದ ಆಧಾರದಲ್ಲಿ ಪರಸ್ಪರ ತ್ಯಾಗಭಾವನೆಯಿಂದ ಜೀವಿಸುವುದು ಕುಟುಂಬ ಕ್ಷೇಮದ ರಹಸ್ಯ. ವೈಯಕ್ತಿಕ ಸಂಕುಚಿತ ಮನೋಭಾವನೆ ತ್ಯಜಿಸದೆ ನಾವು ಒಂದು ಸುಖೀ ಕುಟುಂಬವಾಗಿ ಬಾಳಲು ಸಾಧ್ಯವಿಲ್ಲ. ಇದೇ ತತ್ವವು ನಮ್ಮ ವಿಶ್ವಕುಟುಂಬಕ್ಕೂ ಅನ್ವಯಿಸುತ್ತದೆ. ಜಗತ್ತಿನಲ್ಲಿ ಯಾವುದೇ ದೇಶದ ಯೋಗಕ್ಷೇಮವು ಇತರ ಎಲ್ಲಾ ದೇಶಗಳ ಮೇಲೆ ಅವಲಂಬಿತವಾಗಿದೆ. ಅಂತೆಯೇ ಯಾವುದೇ ದೇಶದ ಸೌಖ್ಯವು ಇತರ ಎಲ್ಲಾ ದೇಶಗಳ ಸೌಖ್ಯದಲ್ಲಿಯೇ ಅಡಗಿದೆ. ಎಲ್ಲರೂ ಈ ಮೌಲ್ಯಗಳನ್ನು ಅರ್ಥ ಮಾಡಿಕೊಂಡು ಅಚರಣೆಗೆ ತಂದಾಗ ಮಾತ್ರ ವಸುಧೈವ ಕುಟುಂಬಕಂ ಎಂಬ ಆದರ್ಶವು ಸಾಕಾರಗೊಳ್ಳಬಹುದು.

    ಜಗತ್ತಿನ ಇನ್ನೂರು ದೇಶಗಳಲ್ಲಿ ವಾಸಿಸುತ್ತಿರುವ ಎಂಟುನೂರು ಕೋಟಿ ಜನರಿಗೆಲ್ಲರಿಗೂ ಸುಖವಾಗಿ ಬಾಳಲು ಸಮಾನವಾದ ಹಕ್ಕುಗಳು ಹಾಗೂ ಅವಕಾಶಗಳು ಲಭಿಸಿದಾಗ ವಿಶ್ವ ಕುಟುಂಬದ ಕನಸು ನನಸಾಗಬಹುದು. ಆದರೆ, ಇಂದಿನ ವಾಸ್ತವಿಕ ಪರಿಸ್ಥಿತಿ ಗಮನಿಸಿದಾಗ ಇದು ಬಹು ದೂರದ ಮಾತೇ ಸರಿ. ಏಕೆಂದರೆ, ದಿನದಿಂದ ದಿನಕ್ಕೆ ಉಳ್ಳವರ ಮತ್ತು ಇಲ್ಲದಿರುವವರ ಮಧ್ಯದ ಅಂತರವು ನಿರಂತರವಾಗಿ ಹೆಚ್ಚಾಗುತ್ತಲೇ ಇದೇ. ಕೋವಿಡ್ ನಂತರದ ದಿನಗಳಲ್ಲಂತೂ ಈ ಅಂತರವು ವಿಪರೀತವಾಗಿ ಬೆಳೆಯುತ್ತಿದೆ. ಒಂದು ಲಕ್ಷ ಡಾಲರುಗಳಿಗಿಂತ ಅಧಿಕ ಜಿ.ಡಿ.ಪಿ. ಹೊಂದಿರುವ ದೇಶಗಳು ಒಂದೆಡೆಯಾದರೆ, ತಲಾ ಒಂದು ಡಾಲರಿಗಿಂತ ಕಡಿಮೆ ಆದಾಯದೊಂದಿಗೆ ಬಡತನದ ಬವಣೆಯಲ್ಲಿ ಪ್ರತಿನಿತ್ಯ ಜೀವವನ್ನು ಸವೆಸುತ್ತಿರುವ ಜನರಿರುವ ದೇಶಗಳು ಇನ್ನೊಂದೆಡೆ. ಇಡೀ ಮಾನವ ಇತಿಹಾಸದಲ್ಲಿ ಜಗತ್ತು ಇಂದು ನೂರು ಟ್ರಿಲಿಯನ್ ದಾಖಲೆ ಜಿ.ಡಿ.ಪಿ.ಯನ್ನು ಸಾಧಿಸಿ ಅತ್ಯಂತ ಶ್ರೀಮಂತವಾಗಿದೆ. ಇಂತಹ ಶ್ರೀಮಂತ ಜಗತ್ತಿನಲ್ಲಿ ಅರವತ್ತು ಕೋಟಿ ಜನರು ಪ್ರತಿರಾತ್ರಿ ಹಸಿದ ಹೊಟ್ಟೆಯಲ್ಲಿ ಮಲಗುತ್ತಾರೆಂಬುದು ದುರ್ದೈವವೇ ಸರಿ. ಕೆಲವರ ದುರಾಸೆ ಹಾಗೂ ಸ್ವಾರ್ಥಪರತೆಗಳು ಕೋಟಿಗಟ್ಟಲೆ ಜನರ ಅವರ್ಣನೀಯ ದುಃಖಕ್ಕೆ ಕಾರಣವಾಗಿವೆ.

    2015ರಲ್ಲಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ›ಗಳು ಜಗತ್ತಿನ ಎಲ್ಲಾ ಮಾನವರ ಇಂದಿನ ಮತ್ತು ಭವಿಷ್ಯದ ಶಾಂತಿ-ಸಮೃದ್ಧಿಗಳ ಸಾಧನೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸುಸ್ಥಿರ ಅಭಿವೃದ್ಧಿಗಾಗಿ ಕಾರ್ಯಸೂಚಿ 2030 ಎಂಬ ಮಸೂದೆಯನ್ನು ಒಮ್ಮತದಿಂದ ಅಂಗೀಕರಿಸಿದವು. 2030 ರ ಮೊದಲು ಸಾಧಿಸಬಯಸಿದ ಹದಿನೇಳು ಸುಸ್ಥಿರ ಅಭಿವೃದ್ಧಿಯ ಗುರಿಗಳೆಂದರೆ ಬಡತನ ನಿಮೂಲನೆ, ಶೂನ್ಯ ಹಸಿವು, ಉತ್ತಮ ಆರೋಗ್ಯ, ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆ, ಶುದ್ಧ ನೀರು ಮತ್ತು ಶುಚಿತ್ವ, ಶುದ್ಧ ಇಂಧನ, ಗುಣಮಟ್ಟದ ಕೆಲಸ ಮತ್ತು ಆರ್ಥಿಕ ಬೆಳವಣಿಗೆ, ಕೈಗಾರಿಕಾ ಅಭಿವೃದ್ಧಿ, ಅಸಮಾನತೆಯ ನಿವಾರಣೆ, ಸುಸ್ಥಿರ ನಗರ ಮತ್ತು ಸಮುದಾಯಗಳು, ಜವಾಬ್ದಾರಿಯುತ ಬಳಕೆ ಮತ್ತು ಉತ್ಪಾದನೆ, ಉತ್ತಮ ನೈಸರ್ಗಿಕ ಪರಿಸರದ ರಕ್ಷಣೆ, ಸಮುದ್ರ ಸಂಪನ್ಮೂಲಗಳ ಸುಸ್ಥಿರ ಬಳಕೆ, ಜೀವ ವೈವಿಧ್ಯ ಸಂರಕ್ಷಣೆ, ಎಲ್ಲರಿಗೂ ಶಾಂತಿ ಮತ್ತು ನ್ಯಾಯಗಳ ಲಭ್ಯತೆಗಾಗಿ ಪ್ರಬಲ ಸಂಸ್ಥೆಗಳು ಹಾಗೂ ಸಮಾನ ಅಂತರಾಷ್ಟಿ›ೕಯ ಸಹಭಾಗಿತ್ವ. ಆದರೆ, ಈ ಕುರಿತಾಗಿ 2022ರ ಆಗಸ್ಟ್ ವರದಿಯು ಕೆಳಕಂಡ ವಿಷಾದನೀಯ ಅಂಶಗಳನ್ನು ಎತ್ತಿ ತೋರಿಸಿದೆ.

    ಕೋವಿಡ್-2019 ಸಾಂಕ್ರಾಮಿಕವು ಬಡತನ ನಿಮೂಲನೆಯ ನಾಲ್ಕು ವರ್ಷಗಳಿಗಿಂತಲೂ ಹೆಚ್ಚಿನ ಪ್ರಗತಿಯನ್ನು ತೊಡೆದುಹಾಕಿದೆ ಮತ್ತು 9.3 ಕೋಟಿಗಿಂತಲೂ ಅಧಿಕ ಜನರನ್ನು ತೀವ್ರ ಬಡತನಕ್ಕೆ ತಳ್ಳಿದೆ. ಅತ್ಯಗತ್ಯ ಆರೋಗ್ಯ ಸೇವೆಗಳು ಕುಂಠಿತಗೊಂಡಿದ್ದರ ಪರಿಣಾಮವಾಗಿ ದಶಕದಲ್ಲಿಯೇ ಪ್ರಥಮ ಬಾರಿಗೆ ಜನರಿಗೆ ಅಗತ್ಯ ರೋಗ-ನಿರೋಧಕಗಳನ್ನು ಒದಗಿಸಲು ಸಾಧ್ಯವಾಗಲಿಲ್ಲ ಮತ್ತು ಮಲೇರಿಯಾ ಮತ್ತು ಕ್ಷಯ ರೋಗಗಳಿಂದಾಗಿ ಸಾವುಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗಿದೆ.

    ಪೂರ್ವಪ್ರಾಥಮಿಕ ಮಟ್ಟದಿಂದ ವಿಶ್ವವಿದ್ಯಾಲಯದವರೆಗೆ 2.4 ಕೋಟಿಗಿಂತಲೂ ಅಧಿಕ ವಿದ್ಯಾರ್ಥಿಗಳು, ಪುನಃ ಶಾಲಾ-ಕಾಲೇಜುಗಳಿಗೆ ಮರಳಲು ಅಸಮರ್ಥರಾಗಿದ್ದಾರೆ. ಜಾಗತಿಕ ಜನಸಂಖ್ಯೆಯ ಕಾಲು ಭಾಗದಷ್ಟು ಜನರು, ಅಂದರೆ 200 ಕೋಟಿ ಜನರು ಪ್ರಸ್ತುತ ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ವಾಸಿಸುವಂತಾಗಿದೆ. ಸುಮಾರು ಹತ್ತು ಕೋಟಿ ಜನರನ್ನು ಬಲಾತ್ಕಾರದಿಂದ ಸ್ಥಳಾಂತರಿಸಿದ್ದು ಇದು ಇಲ್ಲಿಯವರೆಗಿನ ವಿಶ್ವ ದಾಖಲೆಯಾಗಿದೆ. ಯೂಕ್ರೇನ್ ಯುದ್ಧವು ಆಧುನಿಕ ಜಗತ್ತಿನ ಅತಿ ದೊಡ್ಡ ನಿರಾಶ್ರೀತರ ಬಿಕ್ಕಟ್ಟನ್ನು ಸೃಷ್ಟಿಸಿದೆ.

    ಈ ರೀತಿಯಲ್ಲಿ ಸಂಘರ್ಷ ಮತ್ತು ಅವ್ಯವಸ್ಥೆಯಿಂದ ಕಂಗೆಟ್ಟು ತೀವ್ರ ಖಿನ್ನತೆಯಿಂದ ಬಳಲುತ್ತಿರುವ ಇಂದಿನ ಜಗತ್ತಿನಲ್ಲಿ ಆಶೋದಯವನ್ನುಂಟು ಮಾಡಬಲ್ಲ ಏಕೈಕ ಸಂದೇಶವೆಂದರೆ, ‘ಇಡೀ ಜಗತ್ತು ಒಂದು ಕುಟುಂಬ’ ಎಂಬ ಸನಾತನ ಧರ್ಮದ ಸಂದೇಶ. ಈ ಸಂದೇಶವನ್ನು ಸಾಕಾರಗೊಳಿಸಬೇಕಾಗಿದ್ದರೆ, ಎಲ್ಲಾ ದೇಶಗಳ ಜನರೂ ಹೃದಯವೈಶಾಲ್ಯ ಬೆಳೆಸಿಕೊಂಡು ಸಂಕುಚಿತ ದೇಶಿಯ ಗೋಡೆಗಳನ್ನು ತೊಡೆದುಹಾಕಿ ‘ನಾವು ಬೇರೆ ಅವರು ಬೇರೆ’ ಎಂಬ ಮನೋಭಾವನೆಯಿಂದ ಮುಕ್ತರಾಗಬೇಕು. ಇಲ್ಲದಿದ್ದರೆ, ಮಾನವತೆಗೆ ಉತ್ತಮ ಭವಿಷ್ಯವು ಕನಸೇ ಸರಿ.

    ವಸುಧೈವ ಕುಟುಂಬಕಂ ಆದರ್ಶವನ್ನು ಆಚರಣೆಗೆ ತರಲು ಸೇವೆ ಮತ್ತು ಆಧ್ಯಾತ್ಮಿಕತೆಗಳನ್ನೇ ಉಸಿರಾಗಿಸಿಕೊಂಡಿರುವ ನಮ್ಮ ಸಂಸ್ಥೆಗಳು ನಿರಂತರವಾಗಿ ಶ್ರಮಿಸುತ್ತಿವೆ. ಈಗಾಗಲೇ ಈ ನಿಟ್ಟಿನಲ್ಲಿ, ಉಚಿತ ಆರೋಗ್ಯಸೇವೆಯ ಮೂಲಕ ಶ್ರೀ ಸತ್ಯಸಾಯಿ ಸಂಜೀವಿನಿ ಆಸ್ಪತ್ರೆಗಳು, ಉಚಿತ ಶಿಕ್ಷಣದ ಮೂಲಕ ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲಂ ಸಮೂಹ ಸಂಸ್ಥೆಗಳು ಹಾಗೂ ಉಚಿತ ಉಪಹಾರ ಮತ್ತು ಪೋಷಕಾಂಶಗಳ ವಿತರಣೆಯ ಮೂಲಕ ಶ್ರೀ ಸತ್ಯಸಾಯಿ ಅನ್ನಪೂರ್ಣ ಯೋಜನೆಗಳು 33 ದೇಶಗಳಲ್ಲಿ ನೆಲೆಗೊಂಡು ಎಲ್ಲರೂ ನಮ್ಮವರೇ ಎಂಬ ಭಾವದೊಂದಿಗೆ ಸಾವಿರಾರು ರೋಗಿಗಳಿಗೆ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಹಾಗೂ ಮಕ್ಕಳಿಗೆ ಸೇವೆ ಸಲ್ಲಿಸುತ್ತಿವೆ.

    ಕುಟುಂಬದ ಪ್ರತಿ ಸದಸ್ಯನೂ ಇತರಿಗಾಗಿ ಹಾಗೂ ಎಲ್ಲರೂ ಒಟ್ಟಾಗಿ ಭಗವಂತನಿಗಾಗಿ ಬಾಳಿದಾಗ ಮಾತ್ರ ಅದು ಒಂದು ಆದರ್ಶ ಕುಟುಂಬವಾಗಿ ಬೆಳಗುತ್ತದೆ. ಇಂತಹ ಆದರ್ಶವು ನಮ್ಮ ಈ ’ವಿಶ್ವ ಕುಟುಂಬ’ದ ಅಡಿಪಾಯವಾಗಲಿ!

    ಸ್ವಸ್ತಿಪ್ರಜಾಭ್ಯಃ ಪರಿಪಾಲಯಂತಾಂ, ನ್ಯಾಯೇನ ಮಾರ್ಗೆನ ಮಹೀಂ ಮಹೀಶಾಃ ?

    ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ, ಲೋಕಾಃ ಸಮಸ್ತಾಃ ಸುಖಿನೋ ಭವಂತು ?

    ಸಕಲ ಪ್ರಜೆಗಳಿಗೂ ಸುಕ್ಷೇಮವಾಗುವಂತೆ ಪ್ರಜಾಪಾಲಕರು ನೀತಿಯ ಮಾರ್ಗದಲ್ಲಿ ದೇಶಗಳನ್ನು ಆಳುವಂತಾಗಲಿ! ಮಾನವತೆಯನ್ನು ಪೋಷಿಸುವ ಗೋವುಗಳಿಗೆ ಮತ್ತು ಜಗತ್ತಿಗೆ ಸುಜ್ಞಾನವನ್ನು ಬೋಧಿಸುವ ಬ್ರಾಹ್ಮಣರಿಗೆ ನಿತ್ಯವೂ ಶುಭವಾಗಲಿ! ಸಮಸ್ತ ಲೋಕಗಳಲ್ಲಿನ ಸರ್ವ ಜೀವಿಗಳೂ ಸುಖವಾಗಿರಲಿ!

    ಓಂ ಶಾಂತಿಃ ಶಾಂತಿಃ ಶಾಂತಿಃ ?

    (ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)

    ಸರ್ವರೋಗಕ್ಕೂ ಇದೇ ಮದ್ದು!; ಚಿನ್ನಕ್ಕಿಂತಲೂ ದುಬಾರಿ ಈ ವಸ್ತು: ಇದಕ್ಕೆಂದೇ ಚೀನಾದವರು ಭಾರತದೊಳಕ್ಕೆ ನುಗ್ಗಿದ್ದಾರೆ ಹಲವು ಸಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts