ಚುನಾವಣೆ ಇರುವುದು ಖರ್ಗೆ-ಜಾಧವ್​ ನಡುವೆ ಅಲ್ಲ, ಸಂವಿಧಾನ-ಅಸಂವಿಧಾನದ ನಡುವೆ: ಪ್ರಿಯಾಂಕ ಖರ್ಗೆ

ಕಲಬುರಗಿ: ಚುನಾವಣೆ ಇರುವುದು ಖರ್ಗೆ-ಜಾಧವ್ ನಡುವೆ ಅಲ್ಲ. ಚುನಾವಣೆ ಇರುವುದು ಸಂವಿಧಾನ ಮತ್ತು ಅಸಂವಿಧಾನದ ವಿರುದ್ಧ. ಜನರು ಆಶೀರ್ವಾದ ಮಾಡುವವರು, ಐದು ವರ್ಷಕ್ಕೆ ಆಶೀರ್ವಾದ ಮಾಡುತ್ತಾರೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.

ಕಲಬುರಗಿಯಲ್ಲಿ ಮಾತನಾಡಿದ ಅವರು, ಎಂಎಲ್ಎ ಆಗೋದು ಬಹಳ ಕಷ್ಟದ ಕೆಲಸ, ಅದನ್ನ ಮಾಜಿ ಶಾಸಕ ಜಾಧವ್​ ಧಿಕ್ಕರಿಸಿದ್ದಾರೆ. ಇದಕ್ಕೆ ಚಿಂಚೋಳಿಯ ಜನರಿಗೆ ಜಾಧವ್ ಮೊದಲು ಸ್ಪಷ್ಟನೆ ನೀಡಲಿ ಎಂದರು.

ಜಾಧವ್ ಮಾನನಷ್ಟ ಮೊಕದ್ದಮೆ ಹಾಕುವುದಾದರೆ ಹಾಕಲಿ ಎಂದು ಸವಾಲು ಹಾಕಿದ ಅವರು, ನಮಗೂ ಕಾನೂನು ಗೊತ್ತು. ಮನೆ ಮಗ ಮನೆ ಬಿಟ್ಟು ಓಡಿ ಹೋಗಿದ್ದರಿಂದ ನಾವು ಚಿಂಚೋಳಿಗೆ ಬರಬೇಕಾಯಿತು ಎಂದು ವ್ಯಂಗ್ಯವಾಡಿದರು.

ಚಿಂಚೋಳಿ, ಅಫಜಲಪುರ ಕ್ಷೇತ್ರಗಳಿಗೆ ಹೋಗಬೇಕಾದರೆ ಪಾಸ್​ಪೋರ್ಟ್, ವೀಸಾ ಹಿಡಿದುಕೊಂಡು ಬರಬೇಕಾದಂತಹ ಪರಿಸ್ಥಿತಿಯನ್ನು ಜಾಧವ್ ಮತ್ತು ಮಾಲೀಕಯ್ಯ ನಿರ್ಮಾಣ ಮಾಡಿದ್ದರು. ಚಿಂಚೋಳಿಯಲ್ಲಿ ಜೂಜಾಟಕ್ಕೆ ಜಾಧವ್ ಕುಮ್ಮುಕ್ಕು ನೀಡುತ್ತಿದ್ದರು. ಅದನ್ನ ನಾವು ತಡೆದು ಜನರಿಗೆ ಒಳ್ಳೆಯ ಕೆಲಸ ಮಾಡಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.

ನಾಳೆಯಿಂದ ಮೂರು ದಿನಗಳ ಕಾಲ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​, ಉಪಮುಖ್ಯಮಂತ್ರಿ ಪರಮೇಶ್ವರ್​ ಚಿಂಚೋಳಿ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *