ಕೈ ಪ್ರಸ್ತಾಪ ತಿರಸ್ಕರಿಸಿದ ಎಸ್​ಪಿ-ಬಿಎಸ್​ಪಿ

ಲಖನೌ: ಉತ್ತರಪ್ರದೇಶದಲ್ಲಿ ಕಾಂಗ್ರೆಸ್​ನ ಪ್ರತಿ ರಾಜಕೀಯ ನಡೆ ಕೂಡ ಹಿನ್ನಡೆಗೆ ಕಾರಣವಾಗುತ್ತಿದೆ. ಎಸ್​ಪಿ-ಬಿಎಸ್​ಪಿ-ಆರ್​ಎಲ್​ಡಿ ಜತೆ ಮೈತ್ರಿಗೆ ವಿಫಲವಾಗಿದ್ದ ಕಾಂಗ್ರೆಸ್, ಸಮಾಜವಾದಿ, ಬಹುಜನ ಸಮಾಜವಾದಿ ಹಾಗೂ ರಾಷ್ಟ್ರೀಯ ಲೋಕದಳ ಪಕ್ಷದ ಪ್ರಮುಖರು ಸ್ಪರ್ಧಿಸುತ್ತಿರುವ 7 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕದೇ ಬೆಂಬಲ ನೀಡುವುದಾಗಿ ಘೋಷಿಸಿತ್ತು.

ಆದರೆ ಕಾಂಗ್ರೆಸ್​ನ ಈ ಪ್ರಸ್ತಾಪವನ್ನು ತಿರಸ್ಕರಿಸಿರುವ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ಮಾಯಾವತಿ ಹಾಗೂ ಅಖಿಲೇಶ್ ಯಾದವ್, ಬಿಜೆಪಿ ಸೋಲಿಸಲು ಎಸ್​ಪಿ-ಬಿಎಸ್​ಪಿ-ಆರ್​ಎಲ್​ಡಿ ಮೈತ್ರಿ ಸಮರ್ಥವಾಗಿದೆ. ಮತದಾರರಲ್ಲಿ ಅನಗತ್ಯ ಗೊಂದಲ ಮೂಡಿಸುವ ಕೆಲಸಕ್ಕೆ ಕಾಂಗ್ರೆಸ್ ಮುಂದಾಗದಿರಲಿ ಎಂದು ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ನಡೆಗೆ ವಿರೋಧವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಮಾಯಾವತಿ, ‘ಉತ್ತರಪ್ರದೇಶದ ಎಲ್ಲ 80 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಬಹುದಾಗಿದೆ. ನಮ್ಮ ಮೈತ್ರಿಯು ಬಿಜೆಪಿ ವಿರುದ್ಧ ಸ್ಪರ್ಧಿಸಲು ಸಮರ್ಥವಾಗಿದೆ. ಅನವಶ್ಯಕವಾಗಿ 7 ಸೀಟುಗಳಿಗೆ ಬೆಂಬಲ ನೀಡುವಂಥ ಭ್ರಮೆ ಹಾಗೂ ಗೊಂದಲವನ್ನು ಜನರಲ್ಲಿ ಮೂಡಿಸುವ ಪ್ರಯತ್ನಕ್ಕೆ ಕಾಂಗ್ರೆಸ್ ಮುಂದಾಗದಿರಲಿ. ಹಾಗೆಯೇ ದೇಶಾದ್ಯಂತ ಯಾವುದೇ ರಾಜ್ಯದಲ್ಲಿಯೂ ಕಾಂಗ್ರೆಸ್ ಜತೆ ಬಿಎಸ್​ಪಿ ಮೈತ್ರಿ ಮಾಡಿಕೊಳ್ಳುತ್ತಿಲ್ಲ. ಮತದಾರರಿಗೆ ಈ ಕುರಿತು ಸುಳ್ಳು ಮಾಹಿತಿ ನೀಡುವ ಕೆಲಸವನ್ನು ಕಾಂಗ್ರೆಸ್ ಮಾಡದಿರಲಿ. ಪಕ್ಷದ ಕಾರ್ಯಕರ್ತರು ಈ ಕುರಿತು ಎಚ್ಚರಿಕೆ ಹೊಂದಿರಬೇಕು’ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಟ್ವೀಟ್​ನ್ನು ಅನುಮೋದಿಸಿ ಟ್ವೀಟ್ ಮಾಡಿರುವ ಅಖಿಲೇಶ್, ಕಾಂಗ್ರೆಸ್ ನಾಯಕರು ಅನವಶ್ಯಕ ಗೊಂದಲ ಸೃಷ್ಟಿಸದಿರಲಿ. ನಮ್ಮ ಮೈತ್ರಿ ಸಮರ್ಥವಾಗಿದೆ ಎಂದಿದ್ದಾರೆ. ಆದರೆ ಅಮೇಠಿ ಹಾಗೂ ರಾಯ್ಬರೇಲಿ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಹಾಕುವುದಿಲ್ಲ ಎಂದಿದ್ದ ಎಸ್​ಪಿ-ಬಿಎಸ್​ಪಿ ಹೇಳಿಕೆಯಲ್ಲಿ ಬದಲಾವಣೆಯಾಗಲಿದೆಯೇ ಎನ್ನುವುದು ಇನ್ನೂ ಖಾತ್ರಿಯಾಗಿಲ್ಲ.

ದಿಟ್ಟ ಹೋರಾಟಗಾರ ಜಾರ್ಜ್

ಇಂದಿರಾ ಗಾಂಧಿಯವರ ಸರ್ವಾಧಿಕಾರಿ ಧೋರಣೆ ವಿರುದ್ಧ ಪರಿಣಾಮಕಾರಿಯಾಗಿ ದನಿಯೆತ್ತಿದವರಲ್ಲಿ ಜಾರ್ಜ್ ಫರ್ನಾಂಡಿಸ್ ಅಗ್ರಗಣ್ಯರು. ಜಾರ್ಜ್ ದನಿಯನ್ನು ದಮನಿಸಲೆಂದು ತುರ್ತು ಪರಿಸ್ಥಿತಿಯ ವೇಳೆ ಅವರ ಬಂಧನಕ್ಕೆ ಇಂದಿರಾ ಸರ್ಕಾರ ವಾರಂಟ್ ಹೊರಡಿಸಿತಾದರೂ, ಚಾಣಾಕ್ಷ ಜಾರ್ಜ್ ತಪ್ಪಿಸಿಕೊಂಡು ಭೂಗತರಾದರು. ಇಂದಿರಾ ಭಾಷಣ ಆಯೋಜನೆಯಾಗಿರುವ ತಾಣಗಳ ಆಸುಪಾಸಿನಲ್ಲಿ (ಸಾವು-ನೋವು ಸಂಭವಿಸದ ರೀತಿಯಲ್ಲಿ) ಡೈನಮೈಟ್ ಸಿಡಿಸಿ ಅವರಿಗೆ ತಲೆಬಿಸಿಯಾಗಿದ್ದರು. ತರುವಾಯದಲ್ಲಿ ಹಲವು ಕಸರತ್ತುಗಳ ನಂತರ ಜಾರ್ಜ್ ರನ್ನು ಬಂಧಿಸಿ ಜೈಲಿಗೆ ಕಳಿಸಲಾಯಿತು. ಕೆಲಕಾಲದ ನಂತರ ಲೋಕಸಭೆಗೆ ಚುನಾವಣೆ ಘೋಷಣೆಯಾಯಿತು. ‘ತಮ್ಮ ವಿರೋಧಿಗಳಲ್ಲೊಬ್ಬರು ಜೈಲುಪಾಲಾಗಿದ್ದಾರೆ’ ಎಂದು ಇಂದಿರಾ ನಿರುಮ್ಮಳವಾಗಿ ಇರಲಾಗಲಿಲ್ಲ. ಕಾರಣ, ಜೈಲಿಂದಲೇ ನಾಮಪತ್ರ ಸಲ್ಲಿಸಿಬಿಟ್ಟರು ಜಾರ್ಜ್. ಚುನಾವಣಾ ಪ್ರಚಾರಕಾರ್ಯಕ್ಕೆ, ಶ್ರೀಸಾಮಾನ್ಯರು-ಕಾರ್ಯಕರ್ತರ ಜತೆಗಿನ ಅಗತ್ಯ ಒಡನಾಟಕ್ಕೆ ಅವಕಾಶ ಸಿಗಲಿಲ್ಲವಾದರೂ, ಭರ್ಜರಿ ಗೆಲುವು ದಾಖಲಿಸಿದ್ದು ಜಾರ್ಜ್ ಹೆಗ್ಗಳಿಕೆ. ತರುವಾಯದಲ್ಲಿ ಕೇಂದ್ರದಲ್ಲಿ ರೂಪುಗೊಂಡ ಮುರಾರ್ಜಿ ದೇಸಾಯಿ ನೇತೃತ್ವದ ಜನತಾ ಸರ್ಕಾರದಲ್ಲಿ ಕೈಗಾರಿಕಾ ಮಂತ್ರಿಯಾದ ಜಾರ್ಜ್, ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ಸಮರವನ್ನೇ ಸಾರಿದ್ದು ಈಗಲೂ ಹಲವರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ.

ರಾಜಕೀಯ, ಸಂತಾಪ, ಆಕ್ರೋಶ

ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ನಿಧನದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣವು ಗೋವಾ ರಾಜಕೀಯದ ಸುತ್ತಲೇ ಗಿರಕಿ ಹೊಡೆಯುತ್ತಿತ್ತು. ಬಿಜೆಪಿ ಬೆಂಬಲಿಗರು ಹಾಗೂ ಪರಿಕ್ಕರ್ ಇಷ್ಟಪಡುವವರು ಅವರ ಸಾಧನೆ ಹಾಗೂ ಜನಸ್ನೇಹಿ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದರು. ಹೀಗಾಗಿ ದಿನವಿಡಿ ‘ವಿ ಮಿಸ್ ಮನೋಹರ್ ಪರಿಕ್ಕರ್’ ಎನ್ನುವುದು ನಂ.1 ಟ್ರೆಂಡ್ ಆಯಿತು. ಆದರೆ ಈ ಸಂದರ್ಭದಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್ ಪ್ರಯತ್ನ ನಡೆಸಿರುವುದು ಕೂಡ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಯಿತು. ‘ವ್ಯಾಂಪಾಯರ್ ಕಾಂಗ್ರೆಸ್’ ಎನ್ನುವ ಹ್ಯಾಶ್​ಟ್ಯಾಗ್ ಕೂಡ ಟ್ರೆಂಡಿಂಗ್​ನಲ್ಲಿತ್ತು. ‘ಪರಿಕ್ಕರ್ ನಿಧನವನ್ನೇ ಕಾಯುತ್ತಿದ್ದ ರಕ್ತಪಿಶಾಚಿ ಕಾಂಗ್ರೆಸ್ ಅಧಿಕಾರದ ವ್ಯಾಮೋಹದಲ್ಲಿದೆ’ ಎಂದು ಟ್ವೀಟಿಗರು ಕಿಡಿಕಾರಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡ, ಗೋವಾ ಬಿಜೆಪಿಯ ನಡೆಯನ್ನು ಪ್ರಶ್ನಿಸಿದೆ. ಪರಿಕ್ಕರ್ ಅಂತ್ಯಕ್ರಿಯೆಗಿಂತ ಸರ್ಕಾರ ಭದ್ರಪಡಿಸಿಕೊಳ್ಳುವುದು ಪ್ರಮುಖವಾದಂತಿದೆ ಎಂದು ಕಾಲೆಳೆದಿದೆ.