ಚಿಕ್ಕಮಗಳೂರು: ಕೆಲವು ಪ್ರೌಢಶಾಲೆಗಳಲ್ಲಿ ನಡೆಯುವ ಅಕ್ರಮ ನಿಯಂತ್ರಿಸುವಲ್ಲಿ ಶಿಕ್ಷಣ ಇಲಾಖೆ ವಿಫಲವಾಗಿದೆ. ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸುಳ್ಳು ಮಾಹಿತಿ ನೀಡುವ ಶಾಲೆಗಳ ವಿರುದ್ಧ ೭ದಿನದೊಳಗೆ ಕ್ರಮ ಕೈಗೊಳ್ಳಲು ಮುಂದಾಗದಿದ್ದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಬೆನಡಿಕ್ಟ್ ಜೇಮ್ಸ್ ಎಚ್ಚರಿಕೆ ನೀಡಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರು ನಗರದಲ್ಲಿ ಒಟ್ಟು ೮೪ ಶಾಲೆಗಳಿವೆ. ಅವುಗಳಲ್ಲಿ ಈ ವರ್ಷ ಎಷ್ಟು ಮಂದಿ ೧೦ನೇ ತರಗತಿಗೆ ಪ್ರವೇಶಪಡೆದುಕೊಂಡಿದ್ದಾರೆ ಎಂದು ಮಾಹಿತಿ ಹಕ್ಕಿನಡಿ ಜನವರಿ ೧೨ ರಂದು ಅರ್ಜಿಸಲ್ಲಿಸಿದರೆ ೧೧ ಶಾಲೆಗಳು ಮಾಹಿತಿ ನೀಡಿವೆ. ಉಳಿದ ೭೩ ಶಾಲೆಗಳು ಯಾವುದೇ ಮಾಹಿತಿ ಕೊಟ್ಟಿಲ್ಲ. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಮಾಹಿತಿ ಇಲ್ಲ. ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಬಳಿ ಕಳುಹಿಸುತ್ತಾರೆ ಎಂದು ದೂರಿದರು.
ನಗರದಲ್ಲಿರುವ ಕೆಲವು ಶಾಲೆಗಳು ಸರ್ಕಾರದ ನಿಯಮ ಪಾಲಿಸುತ್ತಿಲ್ಲ. ಕಳೆದ ವರ್ಷ ಎಷ್ಟು ವಿದ್ಯಾರ್ಥಿಗಳು ಶುಲ್ಕಪಾವತಿಸಿ ಪ್ರವೇಶ ಪಡೆದುಕೊಂಡಿದ್ದಾರೆ. ವಾರ್ಷಿಕ ಪರೀಕ್ಷೆಗೆ ಎಷ್ಟು ಮಕ್ಕಳು ಶುಲ್ಕ ಪಾವತಿಸಿ ಹೆಸರು ನೋಂದಾಯಿಸಿಕೊAಡಿದ್ದಾರೆ ಎಂಬ ಮಾಹಿತಿ ಒದಗಿಸುತ್ತಿಲ್ಲ. ಡಿಡಿಪಿಐ ಕಚೇರಿಯಲ್ಲಿ ಈ ಮಾಹಿತಿ ಲಭ್ಯವಿಲ್ಲವೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಅರ್ಜಿ ಕಳುಹಿಸಿಕೊಟ್ಟಿದ್ದರು. ಆದರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಇದುವರೆಗೆ ೭೩ ಶಾಲೆಗಳ ಮಾಹಿತಿಯನ್ನೆ ಇದುವರೆಗೂ ನೀಡಿಲ್ಲ ಎಂದು ದೂರಿದರು.
ಮಾಹಿತಿ ದೊರೆಯುವ ಮೊದಲೇ ೧೦ನೇ ತರಗತಿ ಫಲಿತಾಂಶ ಪ್ರಕಟಗೊಂಡಿತು. ಕೆಲವು ಶಾಲೆಗಳು ಶೇ.೧೦೦ ಫಲಿತಾಂಶ ಬಂದಿದೆ ಎಂದು ಹೇಳಿಕೊಂಡಿವೆ. ಆದರೆ ನಗರದಲ್ಲೊಂದು ಶಾಲೆಯಲ್ಲಿ ೧೦ನೇ ತರಗತಿ ಪರೀಕ್ಷೆಗೆ ೨೭ ವಿದ್ಯಾರ್ಥಿಗಳು ಹೆಸರು ನೋಂದಯಿಸಿಕೊAಡಿರುತ್ತಾರೆ. ಆದರೆ ಆ ಶಾಲೆ ನೀಡಿರುವ ಜಾಹಿರಾತಿನಲ್ಲಿ ೪೦ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಎಲ್ಲರೂ ತೇರ್ಗಡೆಯಾಗುವ ಮೂಲಕ ಶಾಲೆಗೆ ಶೇ.೧೦೦ ಫಲಿತಾಂಶ ಬಂದಿದೆ ಎಂದು ಹೇಳಿಕೊಂಡಿದ್ದಾರೆ. ಈ ಕುರಿತು ಶಿಕ್ಷಣ ಇಲಾಖೆಗೆ ದೂರು ನೀಡಿದ್ದರೂ ಆ ಶಾಲೆಯ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ ಎಂದು ದೂರಿದರು.
ಪಾಲಕರಿಂದ ಶುಲ್ಕ, ವಂತಿಕೆಪಡೆಯುವ ಕೆಲವು ಶಾಲೆಗಳು ೧೦ನೇ ತರಗತಿ ಪರೀಕ್ಷೆ ಸಂದರ್ಭದಲ್ಲಿ ಕ್ಯಾತೆ ತೆಗೆಯಲಾಗುತ್ತದೆ. ಓದಿನಲ್ಲಿ ಹಿಂದುಳಿದಿರುವ ಮಕ್ಕಳನ್ನು ಸಣ್ಣ, ಪುಟ್ಟ ಶಾಲೆಗಳಲ್ಲಿ ಪರೀಕ್ಷೆ ಕಟ್ಟಿಸುತ್ತಾರೆ. ಉತ್ತೀರ್ಣರಾಗುವ ಮಕ್ಕಳನ್ನು ಸಂಸ್ಥೆಯ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ಅನುತ್ತೀರ್ಣಗೊಳ್ಳುವ ಮಕ್ಕಳನ್ನು ಪರೀಕ್ಷೆ ಬರೆದ ಶಾಲೆಯ ಲೆಕ್ಕಕ್ಕೆ ಬಿಡುತ್ತಾರೆ ಎಂದು ಆರೋಪಿಸಿದರು.
ಈ ಕುರಿತು ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಎರಡು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ಕೆಲವು ಶಾಲೆಗಳು ಫಲಿತಾಂಶದಲ್ಲಿ ನಡೆಸುವ ಕಳ್ಳಾಟವನ್ನು ತಡೆಯಲು ಉಚ್ಚ ನ್ಯಾಯಾಲಯದ ಮೊರೆಹೋಗುವುದಾಗಿ ತಿಳಿಸಿದರು.