ಬಿಎಂಟಿಸಿ ಬಸ್​ನಲ್ಲಿ ಟೆಕ್ಕಿ-ನಿರ್ವಾಹಕನ ನಡುವೆ ಜಗಳ, ಪೊಲೀಸ್​ ಠಾಣೆಗೆ ಬಸ್​ ತೆಗೆದುಕೊಂಡು ಹೋದ ಚಾಲಕ

ಬೆಂಗಳೂರು: ಬಿಎಂಟಿಸಿ ಬಸ್ ನಿರ್ವಾಹಕನಿಗೆ ಹಲ್ಲೆ ನಡೆಸಿದ ಟೆಕ್ಕಿಯೊಬ್ಬ ಬೆಂಗಳೂರು ಪೊಲೀಸರು ಹೊರ ರಾಜ್ಯದವರನ್ನು ನಿರ್ಲಕ್ಷಿಸುತ್ತಾರೆ ಎಂದು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾನೆ.

ಕೋಲ್ಕತ ಮೂಲದ ಸಿದ್ದಾರ್ಥ್ ಪಂಕಜ್ ಬಿಎಂಟಿಸಿ ಬಸ್ ನಿರ್ವಾಹಕ ಕೃಷ್ಣಪ್ಪ ಮೇಲೆ ಹಲ್ಲೆ ನಡೆಸಿದ ಟೆಕ್ಕಿ. ಈ ಬಗ್ಗೆ ನಗರದ ಕಾಡುಗುಡಿ ಠಾಣೆಯಲ್ಲಿ ದೂರು- ಪ್ರತಿದೂರು ದಾಖಲಾಗಿದೆ.

ಪಂಕಜ್ ನಗರದ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಮೇ 14ರಂದು ಟಿನ್ ಫ್ಯಾಕ್ಟರಿಯಿಂದ  ಐಟಿಪಿಎಲ್​ಗೆ ಹೋಗಲು ಬಿಎಂಟಿಸಿ ಬಸ್ ಹತ್ತಿದ್ದ. ಐಟಿಪಿಎಲ್ ನಿಲ್ದಾಣ ಬರುತ್ತಿ ದ್ದಂತೆ ಬಸ್ ಡೋರ್ ಬಳಿ ನಿಂತಿದ್ದ. ಆ ಸಂದರ್ಭದಲ್ಲಿ ಬಸ್ ನಿರ್ವಾಹಕ ಕೃಷ್ಣಪ್ಪ, ‘ನೀನು ಕೆಳಗೆ ಬಿದ್ದು ಸತ್ತರೆ, ನಾಳೆ ನಾನು ಉತ್ತರ ಕೊಡಬೇಕು. ಡೋರಿನಿಂದ ಮೇಲೆ ಬಂದು ನಿಲ್ಲು’ ಎಂದು ಪಂಕಜ್​ಗೆ ಬುದ್ಧಿ ಮಾತು ಹೇಳಿದ್ದರು. ಇದರಿಂದ ಸಿಟ್ಟಾದ ಪಂಕಜ್, ನಿರ್ವಾಹಕನಿಗೆ ಬೆದರಿಸಿ ಹಲ್ಲೆ ನಡೆಸಿದ್ದಾನೆ. ಇದನ್ನು ಗಮನಿಸಿದ ಬಸ್​ನಲ್ಲಿದ್ದ ಪ್ರಯಾಣಿಕರು ಟೆಕ್ಕಿ ಪಂಕಜ್​ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಗಲಾಟೆ ಹೆಚ್ಚಾಗುತ್ತಿದ್ದಂತೆ ಬಸ್ ಚಾಲಕ ಕಾಡುಗುಡಿ ಪೊಲೀಸ್ ಠಾಣೆಗೆ ಬಸ್ ತೆಗೆದುಕೊಂಡು ಹೋಗಿದ್ದಾನೆ. ಕರ್ತವ್ಯದಲ್ಲಿದ್ದಾಗ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪಂಕಜ್ ವಿರುದ್ಧ ನಿರ್ವಾಹಕ ಕೃಷ್ಣಪ್ಪ ಠಾಣೆಯಲ್ಲಿ ದೂರು ನೀಡಿದ್ದರು. ನಿರ್ವಾಹಕ ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಪಂಕಜ್ ಪ್ರತಿದೂರು ನೀಡಿದ್ದಾನೆ.

ಟೆಕ್ಕಿ ಉದ್ಧಟತನಕ್ಕೆ ಕಿಡಿ: ಬೆಂಗಳೂರಿನಲ್ಲಿ ಹೊರ ರಾಜ್ಯದವರಿಗೆ ರಕ್ಷಣೆಯೇ ಇಲ್ಲ. ಬೆಂಗಳೂರು ಪೊಲೀಸರು ಹೊರ ರಾಜ್ಯದವರನ್ನು ನೋಡುವ ರೀತಿಯೇ ಬೇರೆಯಾಗಿದೆ. ಪೊಲೀಸರಿಂದ ನ್ಯಾಯವೇ ಸಿಕ್ಕಿಲ್ಲ. ಬಿಎಂಟಿಸಿ ನಿರ್ವಾಹಕನ ಪರವಾಗಿ ನಿಂತಿದ್ದ ಪೊಲೀಸರು, ಮತ್ತೊಮ್ಮೆ ನನ್ನ ವಿರುದ್ಧ ದೂರು ನೀಡುವಂತೆ ನಿರ್ವಾಹಕನಿಗೆ ಸೂಚಿಸಿದ್ದಾರೆ. ನಡೆದ ಘಟನೆ ಬಗ್ಗೆ ಸೂಕ್ತ ಮಾಹಿತಿ ತಿಳಿದುಕೊಳ್ಳದೆ ಕೆಲ ತಾಸುಗಳ ಕಾಲ ನನ್ನ ಸಮಯವನ್ನು ವ್ಯರ್ಥಮಾಡಿದ್ದಾರೆ ಎಂದು ಫೇಸ್​ಬುಕ್ ಖಾತೆಯಲ್ಲಿ ಪಂಕಜ್ ಬರೆದುಕೊಂಡಿದ್ದಾನೆ. ಇದನ್ನು ಪೊಲೀಸರು ಹಾಗೂ ಬಿಎಂಟಿಸಿ ಅಧಿಕಾರಿಗಳಿಗೆ ಟ್ಯಾಗ್ ಮಾಡಿ ಆಕ್ರೋಶ ಹೊರಹಾಕಿದ್ದಾನೆ.

ಕನ್ನಡದ ಅನ್ನ, ನೀರು ಪಡೆದು ಬೆಂಗಳೂರಿಗರ ಮೇಲೆಯೇ ಹರಿಹಾಯ್ದ ಟೆಕ್ಕಿಯ ಉದ್ಧಟತನದ ಬಗ್ಗೆ ಹಲವಾರು ಮಂದಿ ಕಿಡಿ ಕಾರಿದ್ದಾರೆ.

ಪೊಲೀಸರಿಂದ ಎಚ್ಚರಿಕೆ

ಇದೊಂದು ಸಣ್ಣ ಜಗಳವಾಗಿದ್ದು, ಇಬ್ಬರೂ ದೂರು-ಪ್ರತಿ ದೂರು ನೀಡಿದ್ದಾರೆ. ಬಸ್ ನಿರ್ವಾಹಕ ಮುಂಜಾಗ್ರತೆಯಿಂದ ಡೋರ್​ವೆುೕಲೆ ನಿಂತಿದ್ದ ಟೆಕ್ಕಿಯನ್ನು, ಅಲ್ಲಿ ನಿಲ್ಲಬೇಡ ಎಂದು ಹೇಳಿದ್ದ. ಇಷ್ಟಕ್ಕೆ ನಿರ್ವಾಹಕನ ಜತೆ ಟೆಕ್ಕಿ ಜಗಳ ಮಾಡಿರುವುದು ಸರಿಯಲ್ಲ. ಮೇಲ್ನೋಟಕ್ಕೆ ಪಂಕಜ್ ತಪು್ಪ ಕಂಡುಬಂದಿದೆ. ಸದ್ಯ ಇಬ್ಬರಿಗೂ ಎಚ್ಚರಿಕೆ ನೀಡಲಾಗಿದೆ ಎಂದು ಕಾಡುಗುಡಿ ಪೊಲೀಸರು ತಿಳಿಸಿದ್ದಾರೆ. ನಾವು ಎಲ್ಲರನ್ನೂ ಸಮಾನವಾಗಿ ಕಾಣುತ್ತೇವೆ. ಯಾವ ರಾಜ್ಯದವರಾದರೂ ತಪ್ಪಿತಸ್ಥರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳುತ್ತೇವೆ. ಸಣ್ಣ ಪುಟ್ಟ ವಿಚಾರಕ್ಕೆ ಇಲ್ಲ ಸಲ್ಲದ ಆರೋಪ ಹೊರಿಸುವುದು ಸರಿಯಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *