ಮುಂಡಗೋಡ: ಮಳೆಗಾಲ ಆರಂಭವಾಗುತ್ತಿದೆ. ಆದರೆ, ಪಟ್ಟಣ ವ್ಯಾಪ್ತಿಯಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸದೇ ಪಟ್ಟಣ ಪಂಚಾಯಿತಿಯವರು ನಿರ್ಲಕ್ಷೃ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮಳೆಗಾಲದಲ್ಲಿ ಪಟ್ಟಣದ ಬಂಕಾಪುರ ರಸ್ತೆ, ಪ್ರವಾಸಿ ಮಂದಿರದ ಎದುರು, ಹುಬ್ಬಳ್ಳಿ ರಸ್ತೆ ಸೇರಿದಂತೆ ಬಹುತೇಕ ವಾರ್ಡ್‌ಗಳಲ್ಲಿ ಮಳೆಯ ನೀರು ರಸ್ತೆಯ ಮೇಲೆ ಹರಿಯುವುದು ಹಾಗೂ ರಸ್ತೆಯಲ್ಲಿ ನಿಲ್ಲುವುದು ಸಾಮಾನ್ಯವಾಗಿದೆ. ರಸ್ತೆಗಳು ಮಳೆಯ ನೀರಿನಿಂದ ಕೆರೆಯಂತೆ ಭಾಸವಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿ ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಹರಿದು ಹೋಗುವಂತೆ ಮಾಡುವುದು ಕಂಡು ಬರುತ್ತದೆ. ಪಟ್ಟಣದ ಕೆಲ ಭಾಗಗಳಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಇದರಿಂದಾಗಿ ಚರಂಡಿಯಲ್ಲಿ ಹರಿಯಬೇಕಿದ್ದ ನೀರು ರಸ್ತೆಯ ಮೇಲೆ ಹರಿಯುತ್ತದೆ.
ಪ್ರತಿವರ್ಷ ಮಳೆಗಾಲ ಆರಂಭಕ್ಕೆ ತಿಂಗಳು ಮುಂಚಿತವಾಗಿ ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಲಾಗುತ್ತಿತ್ತು. ಆದರೆ, ಈ ವರ್ಷ ಇದುವರೆಗೆ ಚರಂಡಿಗಳನ್ನು ಸ್ವಚ್ಛಗೊಳಿಸಿಲ್ಲ. ಈ ಕುರಿತು ಪಟ್ಟಣ ಪಂಚಾಯಿತಿಯವರು ಗಮನ ಹರಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.