ಥಾಯ್​ ಬಾಲಕರನ್ನು ರಕ್ಷಿಸಿದ ಡೈವರ್ ಹ್ಯಾರಿಸ್ ಸಂತಸ ಹೆಚ್ಚು ಕಾಲ ಉಳಿಯಲಿಲ್ಲವೇಕೆ?

ಫೆಚಾಬುರಿ(ಥಾಯ್ಲೆಂಡ್): ಪ್ರವಾಹಪೀಡಿತ ಗುಹೆಯಲ್ಲಿ ಸಿಲುಕಿದ್ದ ಎಲ್ಲಾ ಬಾಲಕರು ಹೊರಬಂದ ನಂತರ ಕೊನೆಯದಾಗಿ ಹ್ಯಾರಿಸ್​ ಗುಹೆಯಿಂದ ಹೊರಬಂದು ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ತಿಳಿಸಿದ್ದರು. ಆದರೆ, ಅವರ ಸಂತಸ ಹೆಚ್ಚು ಕಾಲ ಉಳಿಯಲಿಲ್ಲ.

ಹ್ಯಾರಿಸ್​ ಮತ್ತು ಅವರ ತಂಡದ ಸಾಧನೆಯನ್ನು ವಿಶ್ವದಾದ್ಯಂತ ಸಾಮಾಜಿಕ ಜಾಲ ತಾಣಗಳಲ್ಲಿ ಶ್ಲಾಘಿಸಲಾಗುತ್ತಿದೆ. ಆದರೆ, ಈ ಸಂತಸದಲ್ಲಿ ಭಾಗಿಯಾಗಲು ಹ್ಯಾರಿಸ್​ ಅವರಿಗೆ ಸಾಧ್ಯವಾಗುತ್ತಿಲ್ಲ. ಹ್ಯಾರಿಸ್​ ಅವರು ಎಲ್ಲಾ ಬಾಲಕರನ್ನು ರಕ್ಷಿಸಿದ ಕೆಲ ಕ್ಷಣಗಳಲ್ಲೇ ಅವರ ತಂದೆ ಮೃತಪಟ್ಟಿದ್ದಾರೆ ಎಂದು ಸುದ್ದಿ ಅವರ ಕಿವಿಗೆ ಅಪ್ಪಳಿಸಿದೆ.

ಅಪಾಯಕಾರಿ ಕಾರ್ಯಾಚರಣೆ

ಮಕ್ಕಳನ್ನು ರಕ್ಷಿಸುವ ಕಾರ್ಯಾಚರಣೆ ಅಷ್ಟು ಸುಲಭವಾಗಿರಲಿಲ್ಲ, ಸಾಕಷ್ಟು ಕಿರಿದಾದ ಮತ್ತು ಕಡಿದಾದ ಜಾಗಳಲ್ಲಿ ತೆರಳಬೇಕಿತ್ತು. ಜೊತೆಗೆ ಗಾಢ ಕತ್ತಲು ಗುಹೆಯನ್ನು ಆವರಿಸಿತ್ತು. ಕಾರ್ಯಾಚರಣೆ ಎಷ್ಟು ಅಪಾಯಕಾರಿಯಾಗಿತ್ತು ಎಂದರೆ ಗುಹೆಯೊಳಗೆ ಮಕ್ಕಳನ್ನು ರಕ್ಷಿಸಲು ತೆರಳಿದ್ದ ಥಾಯ್ ನೇವಿ ಸೀಲ್ಸ್​ನ ಡೈವರ್ ಸಮನ್ ಕುನಾನ್ ಉಸಿರುಗಟ್ಟಿ ನೀರು ತುಂಬಿದ ಗುಹೆಯೊಳಗೆ ಮೃತಪಟ್ಟಿದ್ದರು.

ಕಾರ್ಯಾಚರಣೆಯಲ್ಲಿ ಭಾಗಿಯಾದ ಉಳಿದ ಡೈವರ್​ಗಳು

ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಡೈವರ್​ಗಳ ಕುರಿತು ಇನ್ನೂ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಆದರೆ, ಪ್ರಸ್ತುತ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪ್ರಮುಖ ಡೈವರ್​ಗಳೆಂದರೆ…

ಜಾನ್​ ವೊಲಂನ್ತೇನ್​ ಮತ್ತು ರಿಚರ್ಡ್​​ ಸ್ಟಾಟನ್​: ಗುಹೆಯೊಳಗೆ ಕಾಣೆಯಾಗಿದ್ದ ಬಾಲಕರನ್ನು ಮೊದಲು ಹುಡುಕಿದ್ದು ಜಾನ್​ ವೊಲಂನ್ತೇನ್​. ಇವರು ರಿಚರ್ಡ್​​ ಸ್ಟಾಟನ್ ಮತ್ತು ಮತ್ತೋರ್ವ ನುರಿತ ಡೈವರ್​ನೊಂದಿಗೆ ಮಕ್ಕಳು ಕಾಣೆಯಾದ ಮೂರನೇ ದಿನಕ್ಕೆ ಥಾಯ್ಲೆಂಡ್​ಗೆ ಆಗಮಿಸಿ ರಕ್ಷಣಾ ಕಾರ್ಯಚರಣೆಯನ್ನು ಪ್ರಾರಂಭಿಸಿದ್ದರು.

ಥಾಯ್ ನೇವಿ ಸೀಲ್ಸ್​:

ಥಾಯ್ಲೆಂಡ್​ನ ನುರಿತ ಡೈವರ್​ಗಳ ತಂಡ ಕಾರ್ಯಾಚರಣೆಯ ಪ್ರಾರಂಭದಿಂದಲೂ ಸ್ಥಳದಲ್ಲೇ ಬೀಡು ಬಿಟ್ಟು ಮಕ್ಕಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಇದೇ ತಂಡದ ಡೈವರ್ ಸಮನ್ ಕುನಾನ್ ಗುಹೆಯೊಳಗೆ ಉಸಿರುಗಟ್ಟಿ ಮೃತಪಟ್ಟಿದ್ದರು.

ಬೆಲ್ಜಿಯಂನ ಬೆನ್ ರೇಮೆನ್ಮೆಂಟ್ಸ್, ಡೆನ್ಮಾರ್ಕ್​ನ ಕ್ಲಾಸ್ ರಾಸ್ಮುಸ್ಸೆನ್, ಫಿನ್​ಲ್ಯಾಂಡ್​ನ ಮಿಕ್ಕೊ ಪಾಸಿ, ಇವನ್​ ಕಾರ್ದಾಜಿಕ್​, ಕೆನಡಾದ ಎರಿಕ್​ ಬ್ರೌನ್​ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪ್ರಮುಖ ಡೈವರ್​ಗಳು. ಇವರನ್ನು ಹೊರತುಪಡಿಸಿ ಸಾಕಷ್ಟು ಡೈವರ್​ಗಳು ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಹಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಒಟ್ಟು 50 ವಿದೇಶಿ ಡೈವರ್​ಗಳು ಮತ್ತು ಥಾಯ್ಲೆಂಡ್​ನ 40 ಡೈವರ್​ಗಳು ಪಾಲ್ಗೊಂಡಿದ್ದರು. ಬಾಲಕರು ಮತ್ತು ಅವರ ಕೋಚ್​ ಗುಹೆಯಲ್ಲಿ ನಾಪತ್ತೆಯಾದ ವಿಷಯ ತಿಳಿದ ನಂತರ ಅವರಿಗಾಗಿ ಹುಡುಕಾಟ ಪ್ರಾರಂಭಿಸಲಾಯಿತು. ಜುಲೈ 2 ರಂದು ಬ್ರಿಟನ್​ ಡೈವರ್​ಗಳು ಬಾಲಕರು ಗುಹೆಯ ಪ್ರವೇಶ ದ್ವಾರದಿಂದ ಸುಮಾರು 4.5 ಕಿ.ಮೀ. ದೂರದಲ್ಲಿ ಇರುವುದನ್ನು ಪತ್ತೆ ಹಚ್ಚಿದ್ದರು. ಆ ನಂತರ ಅವರನ್ನು ರಕ್ಷಿಸುವ ಕಾರ್ಯಾಚರಣೆ ಪ್ರಾರಂಭವಾಯಿತು. ಈ ಹಂತದಲ್ಲಿ ನುರಿತ ಡೈವರ್​ಗಳಿಗಾಗಿ ಹುಡುಕಾಟ ನಡೆಸಲಾಯಿತು.

ರಕ್ಷಣೆಗೆ ಕೇಳಿಬಂದ ಮೊದಲ ಹೆಸರೇ ಹ್ಯಾರಿಸ್

ಎರಡು ವಾರಕ್ಕೂ ಹೆಚ್ಚು ಕಾಲ ಗುಹೆಯೊಳಗೆ ಸಿಲುಕಿದ್ದ ‘ವೈಲ್ಡ್ ಬೋರ್ ’ ಫುಟ್ಬಾಲ್ ತಂಡದ 12 ಬಾಲಕರು ಮತ್ತು ಒಬ್ಬ ತರಬೇತುದಾರನನ್ನು ಯಶಸ್ವಿ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಹೊರಕ್ಕೆ ಕರೆತರಲಾಗಿದೆ. ಆದರೆ, ಅತ್ಯಂತ ಕ್ಲಿಷ್ಟಕರವಾದ ಮತ್ತು ಅಷ್ಟೇ ಅಪಾಯಕಾರಿಯಾದ ಕಾರ್ಯಾಚರಣೆಯನ್ನು ಹಲವು ರಾಷ್ಟ್ರಗಳ ಮತ್ತು ಥಾಯ್ಲೆಂಡ್​ನ ನುರಿತ ಡೈವರ್​ಗಳ ತಂಡ ಯಶಸ್ವಿಯಾಗಿ ನಿಭಾಯಿಸಿದೆ.

ಈ ಸಂದರ್ಭದಲ್ಲಿ ಕೇಳಿಬಂದ ಮೊದಲ ಹೆಸರೆಂದರೆ ಆಸ್ಟ್ರೇಲಿಯಾದ ಡಾ. ರಿಚರ್ಡ್​ ಹ್ಯಾರಿಸ್​. ಹೌದು ಹ್ಯಾರಿಸ್​ ಕಾರ್ಯಾಚರಣೆ ಸಂಪೂರ್ಣ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡು ಯಶಸ್ವಿಯಾಗಿ ಮಕ್ಕಳನ್ನು ಮತ್ತು ಕೋಚ್​ನನ್ನು ಗುಹೆಯಿಂದ ಹೊರತಂದಿದ್ದಾರೆ. ನುರಿತ ಅರವಳಿಕೆ ತಜ್ಞರಾಗಿರುವ ಇವರು ಗುಹೆಗಳಲ್ಲಿ ಡೈವಿಂಗ್​ ಮಾಡುವ ಪರಿಣಿತಿ ಹೊಂದಿದ್ದಾರೆ. ಅಲ್ಲದೆ, ಡೈವಿಂಗ್​ನಲ್ಲಿ 30 ವರ್ಷಗಳ ಅಗಾಧ ಅನುಭವ ಹೊಂದಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳಿದ್ದ ಹ್ಯಾರಿಸ್​ ಅವರು ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಆಸ್ಟ್ರೇಲಿಯಾದ 20 ಡೈವರ್​ಗಳ ತಂಡದೊಂದಿಗೆ ಥಾಯ್ಲೆಂಡ್​ಗೆ ಆಗಮಿಸಿದ್ದರು. ಕಾರ್ಯಾಚರಣೆ ಆರಂಭಿಸಿದ ಇವರು ಮೊದಲಿಗೆ ಗುಹೆಯೊಳಗೆ ತೆರಳಿ ಬಾಲಕರ ಆರೋಗ್ಯ ಪರೀಕ್ಷಿಸಿದ್ದರು ಮತ್ತು ಅವರೊಂದಿಗೆ 3 ದಿನ ಇದ್ದು ಕಾರ್ಯಾಚರಣೆಯ ರೂಪರೇಷೆಯನ್ನು ಹೆಣೆದಿದ್ದರು. ಆ ನಂತರ ಅವರು ಅಂತಿಮ ಹಂತದ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು.

ಜುಲೈ 8 ರಂದು ಮೊದಲ ಹಂತದಲ್ಲಿ ನಾಲ್ವರು ಬಾಲಕರನ್ನು ರಕ್ಷಿಸಲಾಗಿತ್ತು. ಆ ನಂತರ ಜುಲೈ 9 ರಂದು ಎರಡನೇ ದಿನದ ಕಾರ್ಯಾಚರಣೆಯಲ್ಲಿ ನಾಲ್ವರು ಬಾಲಕರು ಸುರಕ್ಷಿತವಾಗಿ ಹೊರಕ್ಕೆ ಕರೆತರಲಾಗಿತ್ತು. ಜುಲೈ 10 ರಂದು ಅಂತಿಮ ಹಂತದ ಕಾರ್ಯಾಚರಣೆ ನಡೆಸಿದ ತಂಡ ಉಳಿದ ನಾಲ್ವರು ಬಾಲಕರು ಮತ್ತು ಫುಟ್​ಬಾಲ್​ ಕೋಚ್​ನನ್ನು ಗುಹೆಯಿಂದ ಸುರಕ್ಷಿತವಾಗಿ ರಕ್ಷಿಸಿದ್ದರು.