ವಿಜಯವಾಣಿ ಸುದ್ದಿಜಾಲ ತುಮಕೂರು
ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ನಗರದ ಪ್ರವಾಸಿ ಮಂದಿರದಲ್ಲಿ ಅಧಿಕೃತ ಕಚೇರಿ ಆರಂಭಿಸಲು ನಿರ್ಧರಿಸಿರುವ ಬೆನ್ನಲ್ಲೇ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಿ.ಸುರೇಶಗೌಡ ಸಹ ಜನಸಂಪರ್ಕ ಕಚೇರಿಗೆ ಕೊಠಡಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿರುವುದು ಬೆಳಕಿಗೆ ಬಂದಿದೆ.
ಜಿಲ್ಲಾ ಕೇಂದ್ರ ತುಮಕೂರು ನಗರದಲ್ಲಿನ ಹಳೇ ಪ್ರವಾಸಿ ಮಂದಿರ ಹಿಂಭಾಗ ಲೋಕೋಪಯೋಗಿ ಇಲಾಖೆಯಿಂದ 8 ಕೋಟಿ ರೂ. ವೆಚ್ಚದಲ್ಲಿ ಜಿ+2 ಗೆಸ್ಟ್ ಹೌಸ್ ನಿರ್ಮಿಸಿ 2018ರಲ್ಲಿ ಲೋಕಾರ್ಪಣೆಗೊಳಿಸಿದ ಬಳಿಕ ಹಳೇ ಸಕ್ಯೂರ್ಟ್ ಹೌಸ್ ನಿರುಪಯುಕ್ತವಾಗಿತ್ತು. ಇತ್ತೀಚೆಗೆ ಜಿಲ್ಲಾಧಿಕಾರಿ ಪ್ರವಾಸಿ ಮಂದಿರದ ಹಳೇ, ನಿರುಪಯುಕ್ತ ಕಟ್ಟಡವನ್ನು ಕೇಂದ್ರ ರಾಜ್ಯ ಸಚಿವ ವಿ.ಸೋಮಣ್ಣ ಅವರ ಜನಸಂಪರ್ಕ ಕಚೇರಿಗೆ ನವೀಕರಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಹೊಂದಿಕೊಂಡಿರುವ ತಾಲೂಕು ಪಂಚಾಯಿತಿ ಕಚೇರಿ ಬಳಿ ಗ್ರಾಮಾಂತರ ಶಾಸಕರ ಜನಸಂಪರ್ಕ ಕಚೇರಿ ಇದ್ದು, ಈಗ ಶಾಸಕ ಸುರೇಶ್ಗೌಡ, ನಮಗೂ ಜನರನ್ನು ಸುಲಭವಾಗಿ ಸಂಪರ್ಕಿಸಲು ಪ್ರವಾಸಿ ಮಂದಿರದಲ್ಲೇ ಹಳೇ ಕಟ್ಟಡ ಒಂದನ್ನು ಕಚೇರಿ ಮಾಡಿಕೊಳ್ಳಲು ಅವಕಾಶ ಕಲ್ಪಿಸುವಂತೆ ಜಿಲ್ಲಾಧಿಕಾರಿ ಶುಭಕಲ್ಯಾಣ್ಗೆ ಪತ್ರ ಬರೆದಿರುವುದು ತಿಳಿದುಬಂದಿದೆ.
ಡಿಸಿಗೆ ಪತ್ರ: ನಾಲ್ಕು ಕೊಠಡಿ ಗಳನ್ನೊಳಗೊಂಡ ಹಳೇ ಸಕ್ಯೂರ್ಟ್ ಹೌಸ್ಅನ್ನು ಸಂಸದರ ಕಚೇರಿಗೆ ಕೊಡಲಾಗಿದೆ. ಇನ್ನೂ ಹಳೇ ವಿಐಪಿ ಗೆಸ್ಟ್ ಹೌಸ್, ಚಾಲಕರಿಗೆ ಉಳಿದುಕೊಳ್ಳುವಂತೆ ಪ್ರತ್ಯೇಕ ಕೊಠಡಿಗಳಿವೆ. ಈಗ ಸುರೇಶ್ಗೌಡ ಪ್ರವಾಸಿಮಂದಿರದಲ್ಲಿ ಜನಸಂಪರ್ಕ ಕಚೇರಿಗೆ ಅವಕಾಶ ನೀಡುವಂತೆ ಪತ್ರ ಬರೆದಿರುವುದು ಜಿಲ್ಲಾಧಿಕಾರಿಗಳನ್ನು ಮತ್ತಷ್ಟು ಧರ್ಮ ಸಂಕಟಕ್ಕೆ ಸಿಲುಕಿಸಿದೆ.
ಉಸ್ತುವಾರಿ ಸಚಿವರ ಆಕ್ಷೇಪ!
ಪ್ರವಾಸಿ ಮಂದಿರದ ಹಳೇ ಕಟ್ಟಡದಲ್ಲಿ ಸಂಸದರ ಕಚೇರಿ ಆರಂಭಿಸಲು ನವೀಕರಣ ಕಾಮಗಾರಿ ಪ್ರಾರಂಭವಾಗುತ್ತಿದ್ದಂತೆ ಕಾಂಗ್ರೆಸ್ಸಿಗರ ಕಣ್ಣು ಕೆಂಪಾಗಿಸಿತ್ತು. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಜನರಿಗೆ ಇನ್ನಷ್ಟು ಹತ್ತಿರವಾಗಿ ಕ್ಷೇತ್ರದಲ್ಲಿ ಹಿಡಿತ ಸಾಧಿಸುತ್ತಾರೆಂಬ ಸುಳಿವು ಸಿಗುತ್ತಿದ್ದಂತೆ ಸಹಜವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅಸಮಾಧಾನಗೊಂಡಿದ್ದರು. ಜಿಲ್ಲಾಧಿಕಾರಿಗಳು ಐಬಿನಲ್ಲಿ ಜಾಗ ಕೊಟ್ಟಿದ್ದಕ್ಕೆ ಸಚಿವರು ತೀವ್ರ ಆಕ್ಷೇಪ ಹೊರಹಾಕಿದ್ದರಿಂದ ನವೀಕರಣ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ.