ಬದಲಾಗದ ಲ್ಯಾನ್ಸ್‌ಡೌನ್ ಕಟ್ಟಡದ ಭವಿಷ್ಯ

ಸದೇಶ್ ಕಾರ್ಮಾಡ್ ಮೈಸೂರು
ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಆದರೆ, ಚುನಾವಣೆ ನೀತಿ ಸಂಹಿತೆಯಿಂದಾಗಿ ನಗರದ ಪಾರಂಪರಿಕ ಕಟ್ಟಡಗಳಾದ ಲ್ಯಾನ್ಸ್‌ಡೌನ್, ದೇವರಾಜ ಮಾರುಕಟ್ಟೆಯ ಭವಿಷ್ಯ ಇನ್ನೂ ಅತಂತ್ರ ಸ್ಥಿತಿಯಲ್ಲಿಯೇ ಇದೆ.

ಚುನಾವಣೆಗೂ ಮುನ್ನ ಲ್ಯಾನ್ಸ್‌ಡೌನ್ ಮತ್ತು ದೇವರಾಜ ಮಾರುಕಟ್ಟೆಯನ್ನು ಕೆಡವಿ ಹೊಸದಾಗಿ ಪಾರಂಪರಿಕ ಶೈಲಿಯಲ್ಲಿ ಕಟ್ಟಡ ನಿರ್ಮಾಣ ಮಾಡಬೇಕೆಂದು ನಗರ ಪಾಲಿಕೆ ತೀರ್ಮಾನ ಕೈಗೊಂಡು ವರದಿಯನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟಿತು. ಸರ್ಕಾರ ಕೂಡ ಪಾಲಿಕೆ ನಿರ್ಧಾರವನ್ನು ಅನುಷ್ಠಾನಗೊಳಿಸುವ ಆಲೋಚನೆಯಲ್ಲಿ ಇತ್ತು.

ಈ ಸಂದರ್ಭ ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ನಾಗರಿಕರು ಪಾರಂಪರಿಕ ಕಟ್ಟಡಗಳನ್ನು ನೆಲಸಮ ಮಾಡಲು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಕಟ್ಟಡವನ್ನು ಕೆಡವಿ ಹೊಸದಾಗಿ ನಿರ್ಮಾಣ ಮಾಡಬೇಕೆ ಅಥವಾ ಈಗಿರುವ ಕಟ್ಟಡವನ್ನು ಅಭಿವೃದ್ಧಿ ಪಡಿಸಬೇಕೆ ಎಂಬ ಗೊಂದಲ ಮತ್ತೆ ಪ್ರಾರಂಭವಾಯಿತು.

ಈ ಗೊಂದಲ ತಿಳಿಗೊಳಿಸಲು ಸ್ವತಃ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಗರದ ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು. ಕಟ್ಟಡದ ಭವಿಷ್ಯ ತೀರ್ಮಾನ ಮಾಡಲು ಶೀಘ್ರದಲ್ಲಿಯೇ ನಗರದಲ್ಲಿ ನಾಗರಿಕ ಪ್ರಮುಖರ ಸಭೆ ನಡೆಸಲಾಗುವುದು. ಎಲ್ಲರ ಅಭಿಪ್ರಾಯ ಆಲಿಸಿದ ನಂತರವಷ್ಟೇ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು.

ಅಷ್ಟರೊಳಗೆ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಸಭೆ ನಡೆಸಲು ಸಾಧ್ಯವಾಗಲಿಲ್ಲ. ಮೇ 23ರಂದು ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಳ್ಳಲಿದ್ದು, ಅಲ್ಲಿಯವರೆಗೆ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಯಾವುದೇ ಸಭೆಗಳನ್ನು ಸರ್ಕಾರ ನಡೆಸುವುದಿಲ್ಲ.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಭವಿಷ್ಯ ಮಂಡ್ಯ, ಹಾಸನ, ತುಮಕೂರು ಮತ್ತು ಮೈಸೂರು ಲೋಕಸಭಾ ಕ್ಷೇತ್ರದ ಫಲಿತಾಂಶದ ಮೇಲೆ ನಿಂತಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಇದಕ್ಕೆ ಪೂರಕವಾದ ಮಾತುಗಳನ್ನು ಆಡಿದ್ದಾರೆ. ಹೀಗಾಗಿ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರವೂ ಈ ಎರಡು ಕಟ್ಟಡಗಳ ಭವಿಷ್ಯ ನಿರ್ಧರಿಸುವ ಸಭೆ ನಡೆಯುವ ಲಕ್ಷಣಗಳು ಕಾಣುತ್ತಿಲ್ಲ.

ಹಲವು ಚುನಾವಣೆಗಳು: 2012ರಲ್ಲಿ ಲ್ಯಾನ್ಸ್‌ಡೌನ್ ಕಟ್ಟಡ ಕುಸಿದು ಬಿತ್ತು. ಅಲ್ಲಿಂದ ಇಲ್ಲಿಯವರಿಗೆ ಎರಡು ವಿಧಾನಸಭಾ ಚುನಾವಣೆ, ಎರಡು ಲೋಕಸಭಾ ಚುನಾವಣೆ, ಎರಡು ಪಾಲಿಕೆ ಚುನಾವಣೆ, ವಿಧಾನ ಪರಿಷತ್, ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸೇರಿ ಹಲವು ಚುನಾವಣೆಗಳು ನಡೆದು ಹೋಗಿವೆ. ಹೊಸ ಸರ್ಕಾರ, ಹೊಸ ಆಡಳಿತ ಬಂದರೂ ಕಟ್ಟಡದ ಭವಿಷ್ಯದ ಕುರಿತು ಯಾವುದೇ ಸ್ಪಷ್ಟ ತೀರ್ಮಾನ ಕೈಗೊಳ್ಳಲು ಇದುವರೆಗೆ ಸಾಧ್ಯವಾಗದೆ ಇರುವುದು ದುರ್ದೈವದ ಸಂಗತಿ.

ಕಟ್ಟಡಗಳ ಅಭಿವೃದ್ಧಿಗೆ 1.60 ಕೋಟಿ ರೂ. ವಿನಿಯೋಗ: 2012ರಲ್ಲಿ ಲ್ಯಾನ್ಸ್‌ಡೌನ್ ಕಟ್ಟಡದ ಒಂದು ಭಾಗ ಕುಸಿದು ಬಿದ್ದ ಸಂದರ್ಭ ತಜ್ಞರ ವರದಿ ಆಧರಿಸಿ ಕಟ್ಟಡ ಅಭಿವೃದ್ಧಿ ಕಾಮಗಾರಿಗೆ 2015ರಲ್ಲಿ ಚಾಲನೆ ನೀಡಲಾಯಿತು. 2016ರಲ್ಲಿ ಲ್ಯಾನ್ಸ್‌ಡೌನ್ ಕಟ್ಟಡ ಅಭಿವೃದ್ಧಿ ಕಾಮಗಾರಿಯ ಜತೆಗೆ ದೇವರಾಜ ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿ ಸಹ ಕೈಗೆತ್ತಿಕೊಳ್ಳಲಾಯಿತು. ಕಟ್ಟಡಗಳ ಅಭಿವೃದ್ಧಿ ಕಾಮಗಾರಿಗೆ ಒಟ್ಟು 1.60 ಕೋಟಿ ರೂ. ವಿನಿಯೋಗಿಸಲಾಗಿದೆ. ದೇವರಾಜ ಮಾರುಕಟ್ಟೆ ಅಭಿವೃದ್ಧಿಗೆ 70 ಲಕ್ಷ ರೂ., ಲ್ಯಾನ್ಸ್‌ಡೌನ್ ಕಟ್ಟಡ ಅಭಿವೃದ್ಧಿಗೆ 90 ಲಕ್ಷ ರೂ. ಬಳಕೆಯಾಗಿದೆ.

ಕಾಮಗಾರಿ ಪ್ರಗತಿಯಲ್ಲಿದ್ದ ಸಂದರ್ಭ 2016 ಆಗಸ್ಟ್ 29ರಂದು ದೇವರಾಜ ಮಾರುಕಟ್ಟೆಯ ಒಂದು ಭಾಗ ಕುಸಿದು ಬಿತ್ತು. ಹೀಗಾಗಿ ಕಟ್ಟಡದ ಅಭಿವೃದ್ಧಿ ಕಾಮಗಾರಿ ಮುಂದುವರಿಸಬೇಕೇ ಅಥವಾ ಬೇಡವೇ ಎಂಬ ಗೊಂದಲ ಪ್ರಾರಂಭವಾದಾಗ ತಜ್ಞರ ಅಭಿಪ್ರಾಯ ಪಡೆಯಲು ನಿರ್ಧರಿಸಲಾಯಿತು.
ನಗರಪಾಲಿಕೆ ಮನವಿ ಮೇರೆಗೆ ಸರ್ಕಾರಿ ಕಾಮಗಾರಿಗಳ ಗುಣಮಟ್ಟ ಭರವಸೆ ಕಾರ್ಯಪಡೆ (ಟಾಸ್ಕ್ ಫೋರ್ಸ್) ತಜ್ಞರು 2016ರ ನವೆಂಬರ್‌ನಲ್ಲಿ ದೇವರಾಜ ಹಾಗೂ ಲ್ಯಾನ್ಸ್‌ಡೌನ್ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಟ್ಟಡ ಪುನರ್ ನಿರ್ಮಾಣ ಮಾಡಬೇಕೆಂದು ವರದಿ ಸಲ್ಲಿಸಿತ್ತು.

ಶತಮಾನದ ಇತಿಹಾಸವಿರುವ ಕಟ್ಟಡ: ಶತಮಾನದ ಇತಿಹಾಸ ಹೊಂದಿರುವ ಪಾರಂಪರಿಕ ‘ಲ್ಯಾನ್ಸ್‌ಡೌನ್’ ಕಟ್ಟಡ 2012 ಆಗಸ್ಟ್ 23, 24 ರಂದು ಸುರಿದ ಧಾರಾಕಾರ ಮಳೆಯಿಂದಾಗಿ ಆ.25 ರಂದು ಸಂಜೆ 6ಕ್ಕೆ ಕಟ್ಟಡದ ಒಂದು ಭಾಗ ಕುಸಿದು ನಾಲ್ವರು ಮೃತಪಟ್ಟಿದ್ದರು. ಲ್ಯಾನ್ಸ್‌ಡೌನ್ ಕಟ್ಟಡದ ದಕ್ಷಿಣ ಭಾಗದ ಮೊದಲ ಮಹಡಿಯ ಕೊಠಡಿ ಸಂಖ್ಯೆ 10, 11 ಮತ್ತು ನೆಲಮಾಳಿಗೆಯ 17ರ ಛಾವಣಿ ಕುಸಿದಿತ್ತು. ಈ ದುರಂತದ ನಂತರ ಕಟ್ಟಡದಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಕಟ್ಟಡದ ಮುಂಭಾಗದಲ್ಲಿ ತಾತ್ಕಾಲಿಕವಾಗಿ ನಗರಪಾಲಿಕೆಯಿಂದ ಮಳಿಗೆ ನಿರ್ಮಾಣ ಮಾಡಲಾಯಿತು. 1183.61 ಚ.ಮೀ. ವಿಸ್ತೀರ್ಣ ಹೊಂದಿರುವ ಲ್ಯಾನ್ಸ್‌ಡೌನ್ ಕಟ್ಟಡವನ್ನು ಬ್ರಿಟಿಷ್ ವೈಸ್‌ರಾಯ್ ಆಗಿದ್ದ ಲ್ಯಾನ್ಸ್‌ಡೌನ್ ಮತ್ತು ಪತ್ನಿ ನಗರಕ್ಕೆ ಭೇಟಿ ನೀಡಿದ ನೆನಪಿಗಾಗಿ ಮಹಾರಾಜ ಚಾಮರಾಜ ಒಡೆಯರ್ ಗೋಥಿಕ್ ಶೈಲಿಯಲ್ಲಿ 1892ರಲ್ಲಿ ನಿರ್ಮಿಸಿದ್ದರು. ಇನ್ನು ದೇವರಾಜ ಮಾರುಕಟ್ಟೆಗೆ 125 ವರ್ಷಗಳ ಇತಿಹಾಸ ಇದೆ.

Leave a Reply

Your email address will not be published. Required fields are marked *