22 ವಾರದ ಅತ್ಯಾಚಾರ ಸಂತ್ರಸ್ತೆ ಬಾಲಕಿ ಗರ್ಭಪಾತಕ್ಕೆ ಕೋರ್ಟ್​ ಸಮ್ಮತಿ; ಜೀವಕ್ಕೇ ಅಪಾಯ ಎಂದ ವೈದ್ಯರು

ದೆಹಲಿ: ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿಯಾಗಿ 22 ವಾರ ಪೂರೈಸಿರುವ 16 ವರ್ಷದ ಬಾಲಕಿಯೊಬ್ಬಳಿಗೆ ಗರ್ಭಪಾತ ನಡೆಸಲು ದೆಹಲಿ ಹೈಕೋರ್ಟ್​ ಮಂಗಳವಾರ ಸಮ್ಮತಿ ನೀಡಿದೆ.

ಆದರೆ, ಈ ಸಂದರ್ಭದಲ್ಲಿ ಬಾಲಕಿಗೆ ಗರ್ಭಪಾತ ಮಾಡಿದರೆ ಜೀವಕ್ಕೆ ಅಪಾಯ ಅಥವಾ ಆಕೆ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಗಳ ಬಗ್ಗೆ ಆಸ್ಪತ್ರೆ ವರದಿ ನೀಡಿದೆ.

ಗರ್ಭಪಾತದ ಪರಿಣಾಮಗಳ ಬಗ್ಗೆ ಬಾಲಕಿ ಮತ್ತು ಆಕೆಯ ತಂದೆಗೆ ವಿವರಣೆ ನೀಡಲಾಗಿದೆ. ಆದರೂ, ಗರ್ಭಪಾತ ಮಾಡಲೇಬೇಕು ಎಂಬ ಅವರ ನಿರ್ಧಾರ ಅಚಲವಾಗಿದೆ. ಹೀಗಾಗಿ ಗರ್ಭಪಾತ ನೀಡಲು ಅವಕಾಶ ನೀಡಲಾಗುತ್ತಿದೆ ಎಂದು ನ್ಯಾಯಮೂರ್ತಿ ವಿಭು ಬಖ್ರು ಹೇಳಿದ್ದಾರೆ.

ವಿಚ್ಛೇದಿತನಾಗಿದ್ದೇನೆ ಎಂದು ಹೇಳಿಕೊಂಡಿದ್ದ ವ್ಯಕ್ತಿಯೊಬ್ಬ ನಾನೇ ನಿನ್ನ ಪತಿ ಎಂದು ನಂಬಿಸಿ ವರ್ಷದ ಹಿಂದೆ ಆಕೆಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದ. ಅದಾದ ನಂತರ ಬಾಲಕಿ ಗರ್ಭ ಧರಿಸಿದ್ದಳು. ಆದರೆ, ಭ್ರೂಣವನ್ನು ತೆಗೆದು ಹಾಕಲು ಅವಕಾಶ ನೀಡಬೇಕು ಎಂದು ಕೋರಿ ಬಾಲಕಿ ಮತ್ತು ಆಕೆಯ ತಂದೆ ಕೋರ್ಟ್​ಗೆ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್​, ಈ ಸಂದರ್ಭದಲ್ಲಿ ಗರ್ಭಪಾತ ನಡೆಸುವುದು ಸಾಧುವೆ ಎಂಬುದರ ಕುರಿತು ಪರೀಕ್ಷೆ ನಡೆಸಿ ವರದಿ ನೀಡುವಂತೆ ಗುರು ತೇಜ್​ ಬಹದ್ದೂರ್​ ಆಸ್ಪತ್ರೆ ವೈದ್ಯರಿಗೆ ಸೂಚನೆ ನೀಡಿತ್ತು. ಪರೀಕ್ಷೆಗೆ ವೈದ್ಯಕೀಯ ಮಂಡಳಿ ರಚನೆ ಮಾಡಿ, ಆ ಮಂಡಳಿ ಮೂಲಕ ವರದಿ ನೀಡಬೇಕು ಎಂದು ಕೋರ್ಟ್​ ಅದೇಶಿಸಿತ್ತು.

ಅದರಂತೆ ಕಳೆದ ಶನಿವಾರ ತನ್ನ ವರದಿ ನೀಡಿದ್ದ ವೈದ್ಯಕೀಯ ಮಂಡಳಿ, 8 ವಾರಗಳಲ್ಲಿ ನಡೆಯುವ ಗರ್ಭಪಾತಕ್ಕಿಂತಲೂ ಈ ಹಂತದಲ್ಲಿ ನಡೆಯುವ ಗರ್ಭಪಾತದ ಪರಿಣಾಮಗಳು ಹೆಚ್ಚಾಗಿರುತ್ತವೆ ಎಂದಿತ್ತು. ಅದರೆ, ಯಾವುದೇ ಕಾರಣಕ್ಕೂ ಗರ್ಭ ಬೇಡ ಎಂದು ಬಾಲಕಿ ಮತ್ತು ಆಕೆಯ ತಂದೆ ನಿರ್ಧರಿಸಿರುವುದರಿಂದ ಗರ್ಭಪಾತಕ್ಕೆ ಅನುವು ಮಾಡಿಕೊಡಲಾಗುತ್ತಿದೆ ಎಂದು ಕೋರ್ಟ್​ ಸ್ಪಷ್ಟಪಡಿಸಿದೆ.

ಗರ್ಭಪಾತ ನಡೆಸಿದ ನಂತರ ಭ್ರೂಣದ ಕೋಶಗಳನ್ನು ಮುಂದಿನ ತನಿಖೆಗಾಗಿ ಸಂಗ್ರಹಿಸಿಡುವಂತೆಯೂ ಕೋರ್ಟ್​ ಸೂಚನೆ ನೀಡಿದೆ.

Leave a Reply

Your email address will not be published. Required fields are marked *