ಮುಧೋಳ: ನನಗೆ ಸೇವೆ ಮಾಡಲು ಅವಕಾಶ ಕಲ್ಪಿಸಿ, ತಮ್ಮ ಮನೆಯ ಸದಸ್ಯನಂತೆ ಬೆಳೆಸಿದ ಕ್ಷೇತ್ರದ ಮತದಾರರ ಋಣ ತೀರಿಸಲು ಹತ್ತು ಜನ್ಮವೇ ಬೇಕು ಎಂದು ಚಿತ್ರದುರ್ಗ ಸಂಸದ, ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಏರ್ಪಡಿಸಿದ್ದ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳರ 75 ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜನತೆಯ ಪ್ರೀತಿ ವಿಶ್ವಾಸಕ್ಕೆ ಧಕ್ಕೆ ಆಗದಂತೆ ನಡೆದುಕೊಂಡಿದ್ದೇನೆ. ಎಲ್ಲ ಸಮಾಜದ ಮುಖಂಡರ, ಪಕ್ಷದ ನಾಯಕರ, ಕಾರ್ಯಕರ್ತರ ಶ್ರಮದಿಂದ ಬೆಳೆದಿದ್ದೇನೆ. ಈಗ ಮುಧೋಳದೊಂದಿಗೆ ಚಿತ್ರದುರ್ಗದ ಜವಾಬ್ದಾರಿ ಬಂದಿದೆ. ಅಲ್ಲಿಯವರೂ ನನ್ನನ್ನು ನೋಡದೆ ಮತ ನೀಡಿ ಆಯ್ಕೆ ಮಾಡಿದ್ದಾರೆ. ಸೋಲು-ಗೆಲವು ಇರುತ್ತದೆ. ಆದರೆ, ನಾವು ಮಾಡಿದ ಕಾರ್ಯಗಳು, ಅಭಿವೃದ್ಧಿಗಳಿಂದ ನಮ್ಮನ್ನು ಗುರುತಿಸುವಂತಾಗಬೇಕು ಎಂದರು.
ಈ ಭಾಗದ ಮಂಟೂರ ಮಹಾಲಕ್ಷ್ಮೀ ಏತ ನೀರಾವರಿ ಕನಸು ನನಸಾಗಿ ರೈತರ ಹೊಲಗಳಿಗೆ ನೀರು ಸಿಕ್ಕಿದ್ದಕ್ಕೆ ಸಂತಸವಾಗಿದೆ. ತಾಲೂಕಿನಲ್ಲಿ ಹೊಲಗಳಿಗೆ ಹೋಗಲು ರಸ್ತೆ, ಶೈಕ್ಷಣಿಕ ಕಾಂತ್ರಿ, ನೀರಾವರಿ ಯೋಜನೆ, ವಿದ್ಯುತ್ ಕೇಂದ್ರಗಳು, ಮುಧೋಳ ನಾಯಿ ತಳಿ ಅಭಿವೃದ್ಧಿ ಕೇಂದ್ರ, ಬ್ಯಾರೇಜ್‌ಗಳ ನಿರ್ಮಾಣ, ಪ್ರತಿ ಗ್ರಾಮಗಳಿಗೆ ಸಮುದಾಯ ಭವನಗಳು, ರನ್ನ ವೈಭವ ಆರಂಭಿಸಿರುವುದು, 100 ಹಾಸಿಗೆ ಆಸ್ಪತ್ರೆ, ತಾಲೂಕು ಆಡಳಿತ ಭವನ, ನಗರಸಭೆ, ಸರಣಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದ ತೃಪ್ತಿ ನನಗಿದೆ ಎಂದು ತಿಳಿಸಿದರು.
ಬಿಜೆಪಿ ಅಧ್ಯಕ್ಷ ಸಂಗಣ್ಣ ಕಾತರಕಿ, ನಿಕಟಪೂರ್ವ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ನಾರಾಯಣ ಯಡಹಳ್ಳಿ, ಶ್ರೀಕಾಂತ ಗುಜ್ಜನ್ನವರ, ರಸ್ತೆ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಕೆ.ಆರ್. ಮಾಚಪ್ಪನವರ, ಜಿಲ್ಲಾ ಉಪಾಧ್ಯಕ್ಷ ಶ್ರೀಶೈಲಗೌಡ ಪಾಟೀಲ, ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಕಲ್ಲಪ್ಪಣ್ಣ ಸಬರದ, ರಮೇಶ ವಜ್ಜರಮಟ್ಟಿ, ಕಾರ್ತಿಕ ವಚ್ಚರಮಟ್ಟಿ, ಎಸ್.ಎಸ್. ಸಾವನ್, ಪ್ರಕಾಶ ಸಬರದ, ಪತ್ನಿ ಶಾಂತಾದೇವಿ ಕಾರಜೋಳ, ಮಗ ಅರುಣ ಕಾರಜೋಳ ಇತರರಿದ್ದರು.
ಮಲಾಪುರದ ಗೋಶಾಲೆ ಹಾಗೂ ನಗರದ ಗಣೇಶ ದೇವಾಲಯದಲ್ಲಿ ಕಾರ್ಯಕರ್ತರು ಆಯುಷ್ಯ ವೃದ್ಧಿಸಲು ಕೈಗೊಂಡ ಪೂಜೆಯಲ್ಲಿ ಕಾರಜೋಳ ಭಾಗಿಯಾಗಿದ್ದರು. ಯುವಮೊರ್ಚಾ ಕಾರ್ಯಕರ್ತರಿಂದ ರಕ್ತದಾನ ಶಿಬಿರ ನಡೆಯಿತು.
ಸಾವಿರಾರು ಜನರು ತಮ್ಮ ನೆಚ್ಚಿನ ನಾಯಕನಿಗೆ ಹಾರ ತುರಾಯಿ, ಶಾಲು ಹೊದಿಸಿ, ಸಿಹಿ ತಿನ್ನಿಸುವುದು, ನೂರಾರು ಕೇಕ್ ತರುವುದು ಬೆಳಗಿನಿಂದ ನಿರಂತರ ನಡೆದಿತ್ತು.
ರಾಜ್ಯದಲ್ಲಿ ಎಲ್ಲೂ ನಡೆಯದ ಅಭಿವೃದ್ಧಿ ಕಾರ್ಯಗಳನ್ನು ಮುಧೋಳ ತಾಲೂಕಿನಲ್ಲಿ ಗೋವಿಂದ ಕಾರಜೋಳ ಅವರು ಮಾಡಿದ್ದು, ನಿಮ್ಮ ಕಣ್ಣು ಮುಂದೆ ಇದೆ. ಅಂತವರನ್ನು ಸೋಲಿಸಿ ತಪ್ಪು ಮಾಡಿದ್ದಿರಿ.
ಮುರಳಿ, ಚಿತ್ರದುರ್ಗ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ