ಶ್ರೀನಗರ: 2019ರ ಫೆಬ್ರುವರಿಯಲ್ಲಿ ನಡೆದಿದ್ದ ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿದ್ದ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಪ್ರಮುಖ ಕಮಾಂಡರ್ ಸೇರಿ ಮೂವರು ಉಗ್ರರನ್ನು ಭದ್ರತಾ ಪಡೆ ಭಾನುವಾರ ಹೊಡೆದುರುಳಿಸಿದೆ.
ಮೃತ ಉಗ್ರರನ್ನು ಬುರಾನ್ ಶೇಖ್, ಅಬು ಉಸ್ಮಾನ್ ಮತ್ತು ಜೈಷ್ನ ಕಮಾಂಡರ್ ಕ್ವಾರಿ ಯಾಸಿರ್ ಎಂದು ಗುರುತಿಸಲಾಗಿದೆ. 40 ಸಿಆರ್ಪಿಎಫ್ ಯೋಧರನ್ನು ಬಲಿ ಪಡೆದ ಪುಲ್ವಾಮಾ ಉಗ್ರ ದಾಳಿಯಲ್ಲಿ ಕ್ವಾರಿ ಯಾಸಿರ್ ಭಾಗಿಯಾಗಿದ್ದ ಎಂದು ಭದ್ರತಾ ಪಡೆಗಳು ತಿಳಿಸಿವೆ. ಪಾಕ್ ಮೂಲದವನಾದ ಯಾಸಿರ್, ಈ ಹಿಂದೆ ಲೆಥಪೋರಾ ಸ್ಫೋಟ ಸೇರಿ ಜಮ್ಮು- ಕಾಶ್ಮೀರದಲ್ಲಿ ಹಲವು ಪ್ರಮುಖ ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ಅವಂತಿಪೋರಾದ ತ್ರ್ರಾಲ್ ಪ್ರದೇಶದಲ್ಲಿ ಮೂವರು ಉಗ್ರರು ಅಡಗಿದ್ದ ಮಾಹಿತಿ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಭಾನುವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿ ಮೂವರನ್ನೂ ಹೊಡೆದುರುಳಿಸಿವೆ. ಈ ಉಗ್ರರು ಗಣರಾಜ್ಯೋತ್ಸವ ವೇಳೆ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ. ಕಳೆದೊಂದು ವಾರದಲ್ಲಿ ಭದ್ರತಾ ಪಡೆಗಳು ಒಟ್ಟು 8 ಭಯೋತ್ಪಾದಕರನ್ನು ಹೊಡೆದುರುಳಿಸಿವೆ.