ಸವಣೂರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಬಳಿ ಸಂಭವಿಸಿದ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. 10 ಜನ ಮೃತಪಟ್ಟಿದ್ದಾರೆ ಎಂಬ ಆಘಾತಕಾರಿ ಸುದ್ದಿ ಪಟ್ಟಣವನ್ನು ತಲ್ಲಣಗೊಳಿಸಿತು.
ಹಣ್ಣು-ತರಕಾರಿ, ಮಸಾಲೆ ಪದಾರ್ಥ ಮತ್ತಿತರ ಸಾಮಗ್ರಿಗಳೊಂದಿಗೆ ಸವಣೂರ ಪಟ್ಟಣದಿಂದ ಪ್ರತಿ ಮಂಗಳವಾರ ರಾತ್ರಿ 11 ಗಂಟೆಗೆ ಹೊರಟು ಬುಧವಾರ ಕುಮಟಾ ಪಟ್ಟಣದಲ್ಲಿ ಹಾಗೂ ಗುರುವಾರ ಗೋಕರ್ಣದಲ್ಲಿ ವ್ಯಾಪಾರ ಮುಗಿಸಿಕೊಂಡು ಶುಕ್ರವಾರ ಸವಣೂರಿಗೆ ವಾಪಸಾಗುತ್ತಿದ್ದರು. ಅದರಂತೆ ಮಂಗಳವಾರ ರಾತ್ರಿ ಪಟ್ಟಣದಿಂದ 29 ವ್ಯಾಪಾರಿಗಳು ಕುಮಟಾಕ್ಕೆ ತೆರಳುತ್ತಿದ್ದರು. ಬುಧವಾರ ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸಕ್ಕೆ 10 ಜನ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡ 7 ಜನರನ್ನು ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ. ಮೃತರ ಮತ್ತು ಗಾಯಾಳುಗಳ ಕುಟುಂಬಸ್ಥರಿಗೆ ದಿಕ್ಕು ತೋಚದಂತಾಗಿತ್ತು. ಮೃತಪಟ್ಟ ಬಹುತೇಕರು ಕುಟುಂಬಕ್ಕೆ ಆಧಾರಸ್ತಂಭವಾಗಿದ್ದವರು.
ಮೃತಪಟ್ಟವರು
ಮಝರರಜಾ ಬೆಣ್ಣಿ (23)
ಫಯಾಜ್ ಜಮಖಂಡಿ(44)
ಗುಲಾಮಹುಸೇನ್ ಜವಳಿ (21)
ಜಲಾಲಬಾಷಾ ಮಿರ್ಚೋಣಿ (26)
ಇಂತಿಯಾಜ್ ಮುಳಕೇರಿ (36)
ವಸೀಮಅಹ್ಮದ ಗುಡಿಗೇರಿ(25)
ಮಹ್ಮದಸಾದೀಕ ಪರಾಶ (28)
ಕಮಾಲವುದ್ದೀನ್ ಮುಲ್ಲಾ(22)
ಜೀಲಾನಿ ಅಬ್ದುಲಗಫಾರ ಜಕಾತಿ (19)
ಹುಸೇನ್‌ಮಿಯಾ ರಮೇಣದ (24)
ಮೃತ ಹುಸೇನ್‌ಮಿಯಾ ರಮೇಣದ (25) ಕಳೆದ ವರ್ಷ ಮದುವೆಯಾಗಿದ್ದ. ತುಂಬು ಗರ್ಭಿಣಿ ಪತ್ನಿಯನ್ನ ಹೆರಿಗೆಗಾಗಿ ಆಸ್ಪತ್ರೆಗೆ ಕಳುಹಿಸಿ ದುಡಿಮೆಗಾಗಿ ಸಂತೆ ವ್ಯಾಪಾರಕ್ಕೆಂದು ರಾತ್ರಿ ಲಾರಿ ಹತ್ತಿದ್ದ. ಆದರೆ, ವಿಧಿಯಾಟ ಬೇರೆಯಾಗಿತ್ತು.
ಮಝರರಜಾ ಬೆಣ್ಣಿ ಮದುವೆಯಾಗಿ ಕೇವಲ ನಾಲ್ಕು ತಿಂಗಳಾಗಿದೆ. ಬಡತನ ಜತೆಗೆ ಸರಿಯಾಗಿ ಕಣ್ಣು ಕಾಣದ ತಂದೆ-ತಾಯಿಯನ್ನು ಮನೆಯಲ್ಲಿ ಬಿಟ್ಟು ವ್ಯಾಪಾರಕ್ಕೆಂದು ತೆರಳಿದ್ದ. ಮಗನ ಸಾವಿನ ಸುದ್ದಿ ಬರಸಿಡಿಲು ಬಡಿದಂತಾಗಿದೆ.
ಮೃತ ಫಯಾಜ್ ಜಮಖಂಡಿ ಅವರು ಭಾನುವಾರವಷ್ಟೇ ಪುತ್ರಿ ಹಾಗೂ ಪುತ್ರನ ನಿಶ್ಚಿತಾರ್ಥ ನೆರವೇರಿಸಿದ್ದರು. ಈ ಸಂದರ್ಭದಲ್ಲಿ ಸಂತೆಗೆ ಹೋಗದಂತೆ ಕುಟುಂಬಸ್ಥರು ಕೋರಿಕೊಂಡರೂ ಕಿವಿಗೊಡಲಿಲ್ಲ. ದುಡಿಮೆ ಮೊದಲು ಎಂದು ಮನೆಯಲ್ಲಿ ಮಕ್ಕಳಿಗೆ ತಿಳಿ ಹೇಳಿ ಹೋದ ವ್ಯಕ್ತಿ ಇನ್ನಿಲ್ಲವಾಗಿರುವುದು ಕುಟುಂಬಸ್ಥರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಮದುವೆಗಾಗಿ ಕನ್ಯೆ ನೋಡು ಎಂದು ಮೃತ ಗುಲಾಮಹುಸೇನ್ ಜವಳಿಗೆ ಕುಟುಂಬಸ್ಥರು ಒತ್ತಾಯಿಸಿದ್ದರು. ಸದ್ಯ ಮದುವೆ ಬೇಡ ಎಂದು ಅಣ್ಣನೊಂದಿಗೆ ಸಂತೆ ವ್ಯಾಪಾರಕ್ಕಾಗಿ ತೆರಳಿದ್ದ.
ಮೃತ ಜಲಾಲ ಮಿರ್ಚೋಣಿ ಮೂಲತಃ ಸವಣೂರಿನವರಾಗಿದ್ದರೂ ಹುಬ್ಬಳ್ಳಿಯಲ್ಲಿ ವಾಸವಾಗಿದ್ದ. ಆದರೆ, ಪ್ರತಿ ಸಲ ಸಂತೆ ವ್ಯಾಪಾರಕ್ಕೆ ಸವಣೂರಿನ ಬಂಧು-ಮಿತ್ರರೊಂದಿಗೆ ಹೋಗುತ್ತಿದ್ದ. ಮಗಳ ಹೆರಿಗೆಯಾಗುವ ತನಕ ಸಂತೆ ಬೇಡ ಎಂದು ಕುಟುಂಬದವರು ಅಲವತ್ತುಕೊಂಡಿದ್ದರು. ಆದರೂ, ಹೆರಿಗೆ ಇನ್ನೂ ತಡ ಇದೆ ಎಂದು ಸಂತೆಗೆ ತೆರಳಿದ್ದ.
ಸಂತಾಪ
ಅಪಘಾತದಲ್ಲಿ ಸವಣೂರ ಪಟ್ಟಣದ ಹತ್ತು ಜನ ಮೃತಪಟ್ಟಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಸಂಸದ ಬಸವರಾಜ ಬೊಮ್ಮಾಯಿ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಇತರರು ಸಂತಾಪ ಸೂಚಿಸಿದ್ದಾರೆ.
ಸಹೋದರಿ ಹಾಗೂ ನನ್ನ ನಿಶ್ಚಿತಾರ್ಥವನ್ನು ಕಳೆದ ಭಾನುವಾರ ನೆರವೇರಿಸಿದ್ದರು. ಸಂತೆಗೆ ಈ ವಾರ ಬೇಡ ಅಂದ್ರೂ ಕೇಳಲಿಲ್ಲ. ದುಡುಮೆ ಮೊದಲು ಎಂದು ನಮ್ಮೆಲ್ಲರಿಗೂ ಬುದ್ಧಿವಾದ ಹೇಳಿ ಹೋದ ತಂದೆ ಇಲ್ಲ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ.
ಖ್ವಾಜಾಮೋದಿನ್ ಜಮಖಂಡಿ (ಮೃತ ಫಯಾಜ್‌ನ ಮಗ)ಮಗನ ಮದುವೆ ಮಾಡಿರುವೆ. ಸಂತೆ ವ್ಯಾಪಾರ ಮಾಡುತ್ತಾನೆ. ನನಗೆ ಸರಿಯಾಗಿ ಕಣ್ಣು ಕಾಣುವುದಿಲ್ಲ. ಇಂದು ಮನೆ ಮುಂದೆ ಬಂಧು-ಮಿತ್ರರೆಲ್ಲ ಸೇರಿದ್ದಾರೆ. ಯಾಕೆ ಅಂದ್ರೆ ಮಗ ತೀರಿಕೊಂಡಿದ್ದಾನೆ ಎನ್ನುತ್ತಾರೆ. ಆದರೆ, ನನಗೆ ನಂಬಿಕೆ ಇಲ್ಲ.
ಗೌಸಮೋದಿನ್ ಬೆಣ್ಣಿ (ಮೃತ ಮಝರರಜಾ ತಂದೆ)