ಅಪಘಾತದಲ್ಲಿ ಭಾವಿ ಮದುಮಗ ಮೃತ್ಯು

ಕುಂದಾಪುರ: ಬೈಕ್‌ನಲ್ಲಿ ದೇವಸ್ಥಾನಕ್ಕೆ ಹೊರಟಿದ್ದ ಭಾವಿ ಮದುಮಗ ತೆಕ್ಕಟ್ಟೆ ನಿವಾಸಿ ವರುಣ್(33) ಕೋಟ ಬೆಲ್ಲದ ಗಣಪತಿ ದೇವಸ್ಥಾನ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ವರುಣ್ ವಿವಾಹ ಡಿ.30ರಂದು ಕಾಳಾವರದ ಯುವತಿ ಜತೆ ಸಾಲಿಗ್ರಾಮ ಕಲ್ಯಾಣ ಮಂಟಪವೊಂದರಲ್ಲಿ ನಡೆಯಲಿದ್ದು, ಮದುವೆ ಸಿದ್ಧತೆಯಲ್ಲಿರುವಾಗಲೇ ಮೃತಪಟ್ಟಿದ್ದು, ಎರಡೂ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ.
ವರುಣ್ ಬೈಕ್‌ನಲ್ಲಿ ರೋಡ್‌ರೋಲರ್‌ನ್ನು ಹಿಂದಿಕ್ಕಿ ಸಾಗುತ್ತಿದ್ದಾಗ ಬೈಕ್‌ಗೆ ರೋಡ್‌ರೋಲರ್ ತಾಗಿದ್ದು, ನಿಯಂತ್ರಣ ತಪ್ಪಿ ವರುಣ್ ರಸ್ತೆಗೆ ಬಿದ್ದಿದ್ದರು. ಈ ಸಂದರ್ಭ ಹಿಂದಿನಿಂದ ಬರುತ್ತಿದ್ದ ಲಾರಿ ಅವರ ಮೈಮೇಲೆ ಚಲಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವರುಣ್ ವಿದೇಶದಲ್ಲಿದ್ದು, ಡಿ.26ಕ್ಕೆ ಊರಿಗೆ ಬರಬೇಕಿತ್ತು. ರಜೆ ಬೇಗ ಮಂಜೂರಾದ ಕಾರಣ ಮದುವೆ ತಯಾರಿಗಾಗಿ ಒಂದಷ್ಟು ದಿನದ ಮುಂಚಿತವಾಗಿ ಊರಿಗೆ ಬಂದಿದ್ದರು. ಮದುವೆ ಕಾರ್ಯಗಳಿಗೆ ಓಡಾಡಲು ಗೆಳೆಯನಿಂದ ಬೈಕ್ ಪಡೆದಿದ್ದರು. ಮೃತ ಯುವಕ ತಂದೆ, ತಾಯಿ, ಸೋದರಿಯನ್ನು ಅಗಲಿದ್ದಾರೆ.
ಅಪಘಾತದ ಸುದ್ದಿ ತಿಳಿದು ವರುಣ್ ಸಂಬಂಧಿ ಗಿರಿಜಾ(68) ಎಂಬುವರೂ ಮೃತಪಟ್ಟಿದ್ದಾರೆ. ವರುಣ್, ಅವರ ತಂದೆ ತಾಯಿ ಹಾಗೂ ಗಿರಿಜಾ ಹಿಂದೆ ದಾಂಡೇಲಿಯಲ್ಲಿ ಒಟ್ಟಿಗೆ ವಾಸವಾಗಿದ್ದರು ಎನ್ನಲಾಗಿದೆ.