ಒಣ ಮರದ ಕೊಂಬೆ ಬಿದ್ದು ಬಾಲಕ ಸಾವು

ಬೆಂಗಳೂರು: ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಪ್ರೆಸ್ಟೀಜ್ ಕಂಪನಿಗೆ ಸೇರಿದ ನಿರ್ಮಾಣ ಹಂತದ ಫಾಲ್ಕನ್ ಟವರ್ ಆವರಣದಲ್ಲಿ ಮರದ ಕೊಂಬೆ ಬಿದ್ದು 12 ವರ್ಷದ ಬಾಲಕ ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ.

ವಿಜಯನಗರ ಸಮೀಪದ ಪಟ್ಟೇಗಾರಪಾಳ್ಯದ ಮನೋಜ್ (12) ಮೃತ ಬಾಲಕ. ಮನೋಜ್​ನ ತಂದೆ ರಾಜೇಶ್ ಕೊಟ್ಟ ದೂರಿನ ಮೇರೆಗೆ ಫಾಲ್ಕಾನ್ ಟವರ್ ಮಾಲೀಕ, ಇಂಜಿನಿಯರ್​ಗಳಾದ ಶಮೀಮ್ ಪ್ರಫುಲ್​ಕುಮಾರ್ ಮತ್ತು ಗುತ್ತಿಗೆದಾರ ಕರುಣಾಕರ್, ಮೆಸ್ತ್ರಿ ಕುಮಾರ್ ವಿರುದ್ಧ ಎಫ್​ಐಆರ್ ದಾಖಲಿಸಿ ಕ್ರಮ ಕೈಗಪಳ್ಳಲಾಗಿದೆ ಎಂದು ಹಲಸೂರು ಪೊಲೀಸರು ತಿಳಿಸಿದ್ದಾರೆ.

ಆಂಧ್ರಪ್ರದೇಶದ ಆನಂತಪುರ ಜಿಲ್ಲೆಯ ರಾಜೇಶ್, ಕೂಲಿ ಅರಸಿ ಪತ್ನಿ ಮಹಾಲಕ್ಷ್ಮಿ ಮತ್ತು ಪುತ್ರ ಮನೋಜ್ ಜತೆಗೆ 15 ದಿನಗಳ ಹಿಂದೆ ಬೆಂಗಳೂರಿಗೆ ಬಂದು ಪಟ್ಟೇಗಾರಪಾಳ್ಯದ ಜೋಪಡಿಯಲ್ಲಿ ನೆಲೆಸಿದ್ದರು. 2 ದಿನಗಳ ಹಿಂದೆ ಫಾಲ್ಕಾನ್ ಟವರ್ ಆವರಣದಲ್ಲಿ ಸಿಸಿ ಕ್ಯಾಮರಾದ ಕೇಬಲ್ ಅಳವಡಿಸಲು ಗುಂಡಿ ತೋಡುವ ಕೆಲಸಕ್ಕೆ ಹೋಗುತ್ತಿದ್ದರು. ಮೇ 24ರಂದು ತನ್ನ ಪುತ್ರ ಮನೋಜ್ ಜತೆಗೆ ದಂಪತಿ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ 2.45ರಲ್ಲಿ ಮನೋಜ್ ತನ್ನ ಪಾಲಕರ ಬಳಿಗೆ ಬಂದು ನೀರು ಕುಡಿದು ವಾಪಸ್ ಆಟವಾಡಲು ಕಟ್ಟಡದ ಸಮೀಪದ ತೆರಳುತ್ತಿದ್ದ. ಮರದ ದೊಡ್ಡ ಕೊಂಬೆಯೊಂದು ಮನೋಜ್ ಮೇಲೆ ಬಿದ್ದ ಪರಿಣಾಮ ಕೂಗಿಕೊಂಡಿದ್ದ. ತಕ್ಷಣ ಪಾಲಕರು ಹತ್ತಿರ ಹೋಗಿ ಮಗನ ಮೇಲೆ ಬಿದ್ದಿದ್ದ ಕೊಂಬೆಯನ್ನು ತೆರವು ಮಾಡಿ ಆಸ್ಪತ್ರೆಗೆ ದಾಖಲಿಸಿದ್ದರು. ಬಾಲಕನ ಎಡಗಾಲು ಮುರಿದು ತೀವ್ರ ರಕ್ತಸ್ರಾವ ಉಂಟಾಗಿ ಚಿಕಿತ್ಸೆ ಫಲಿಸದೆ ಮಧ್ಯಾಹ್ನ 4.30ರಲ್ಲಿ ಅಸುನೀಗಿದ್ದಾನೆ.

ವಿಷಯ ತಿಳಿದು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಸಾಕಷ್ಟು ಮರಗಳು ಇದ್ದು, ಕೊಂಬೆ ಒಣಗಿದ್ದರೂ ಕಡಿಯದೆ ಬಿಟ್ಟಿದ್ದರು. ಪರಿಣಾಮ ಬಾಲಕನ ಸಾವಿಗೆ ಕಾರಣವಾಗಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *