ಎಲ್ಲ ಧರ್ವಿುಯರಿಗೆ ಶಬರಿಮಲೆ ಪ್ರವೇಶ

ನವದೆಹಲಿ: ನಲ್ವತ್ತೊಂದು ದಿನಗಳ ಕಠಿಣ ಧಾರ್ವಿುಕ ವಿಧಿವಿಧಾನ ಹಾಗೂ ಹರಕೆ ಪೂರೈಸಲು ಮಹಿಳೆಯರಿಗೆ ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಶಬರಿಮಲೆ ಅಯ್ಯಪ್ಪ ದೇವಸ್ಥಾನ ಪ್ರವೇಶ ನಿಷೇಧಿಸಲಾಗಿದೆ ಎಂದು ಸುಪ್ರೀಂ ಕೋರ್ಟ್​ಗೆ ದೇವಸ್ಥಾನ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ದೇವಸ್ಥಾನದಲ್ಲಿ ಯಾವುದೇ ಧರ್ಮ ಹಾಗೂ ಜಾತಿ ಆಧಾರದ ಮೇಲೆ ನಿಷೇಧ ಹೇರಲಾಗಿಲ್ಲ. ಎಲ್ಲ ಜಾತಿ, ಧರ್ವಿುಯರಿಗೂ ಪ್ರವೇಶ ನೀಡಲಾಗುತ್ತಿದೆ. ಆದರೆ 41 ದಿನಗಳ ಕಠಿಣ ಹರಕೆ ಪೂರೈಸಲು ಮಹಿಳೆಯರಿಗೆ ಕಷ್ಟಸಾಧ್ಯ. ಇದು ಕೇವಲ ಆಡಳಿತ ಮಂಡಳಿ ನಿರ್ಣಯವಲ್ಲ, ಭಕ್ತ ಸಮೂಹದ ಅಭಿಪ್ರಾಯವೂ ಆಗಿದೆ ಎಂದು ಸಂವಿಧಾನ ಪೀಠಕ್ಕೆ ದೇವಾಲಯ ಮಂಡಳಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಮಾಹಿತಿ ನೀಡಿದ್ದಾರೆ.

ತಾರತಮ್ಯವೇಕೆ?

ಅಸಾಧ್ಯವಾದ ಷರತ್ತುಗಳನ್ನು ಹಾಕಿ ಮಹಿಳೆಯರ ಪ್ರವೇಶಕ್ಕೆ ನೆಪ ಹುಡುಕಲಾಗು ತ್ತಿದೆ. ಹಾಗಿದ್ದರೆ ಯಾವುದೋ ಮಹಿಳೆಗೆ 46ನೇ ವಯಸ್ಸಿಗೆ ಋತುಚಕ್ರ ನಿಂತರೆ ಪ್ರವೇಶ ನೀಡುತ್ತೀರಾ? ಪ್ರತಿ ಮಹಿಳೆಯು ದೇವರ ಸೃಷ್ಟಿ ಎನ್ನುವುದಾದರೆ ಉದ್ಯೋಗ ಹಾಗೂ ದೇವಸ್ಥಾನ ಪ್ರವೇಶದಲ್ಲಿ ತಾರತಮ್ಯವೇಕೆ ಎಂದು ಕೋರ್ಟ್ ಪ್ರಶ್ನಿಸಿದೆ. ದೇವಸ್ಥಾನಕ್ಕೆ ಮಹಿಳೆ ಪ್ರವೇಶ ನಿಷೇಧಿಸಿರುವುದು ಸಂವಿಧಾನ ಬಾಹಿರ ಎಂದು ಸುಪ್ರೀಂಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿತ್ತು.