ನಾಡು, ನುಡಿ, ದೇಶಕ್ಕೆ ಮಿಡಿದ ಯುವಜನ

 ಮೈಸೂರು: ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದಸರಾ ಯುವ ಸಂಭ್ರಮದಲ್ಲಿ ಕನ್ನಡ ನಾಡು, ನುಡಿ ಹಾಗೂ ದೇಶಕ್ಕೆ ಯುವಜನರ ಮನ ಮಿಡಿಯಿತು.

ರಾಜ್ಯದ ವಿವಿಧ 21 ಕಾಲೇಜುಗಳ ತಂಡ ಯುವ ಸಂಭ್ರಮದಲ್ಲಿ ನೃತ್ಯದ ಮೂಲಕ ಯುವಜನರನ್ನು ರಂಜಿಸಿದರು. ಈ ಪೈಕಿ ಹಲವು ತಂಡಗಳು ಕನ್ನಡ ನಾಡು, ನುಡಿ ಹಾಗೂ ದೇಶ ಭಕ್ತಿಗೆ ಸಂಬಂಧಿಸಿದ ನೃತ್ಯಗಳನ್ನು ಪ್ರದರ್ಶಿಸಿದರು. ಇಂದು ಗಾಂಧಿ ಜಯಂತಿ, ಹೀಗಾಗಿ ಯುವಜನರು ಹಲವು ನೃತ್ಯಗಳಲ್ಲಿ ಗಾಂಧೀಜಿಯನ್ನು ಸ್ಮರಿಸುವ ಕಾರ್ಯ ಮಾಡಿದರು.

ಕನ್ನಡ ನಾಡನ್ನು ಆಳಿದ ಕದಂಬ, ಹೊಯ್ಸಳ, ವಿಜಯನಗರ ಸಾಮ್ರಾಜ್ಯ ಹಾಗೂ ಕೆಂಪೇಗೌಡ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆಯನ್ನು ಸಾರುವ ಹಾಡಿಗೆ ನಗರದ ಬಿಜಿಎಸ್ ಬಿ.ಇಡಿ. ಕಾಲೇಜಿನ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು. ಗುಂಡ್ಲುಪೇಟೆಯ ಜೆಎಸ್‌ಎಸ್ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಸೈನಿಕರ ವೇಷ ತೊಟ್ಟು ವಂದೇ ಮಾತರಂ, ಮಾ ತುಜೇ ಸಲಾಂ ಸೇರಿದಂತೆ ಹಲವು ಹಾಡಿಗೆ ನೃತ್ಯ ಮಾಡಿ ದೇಶ ಭಕ್ತಿ ಪ್ರದರ್ಶಿಸಿದರು.

ಬನ್ನೂರಿನ ಸಂತೆಮಾಳ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ‘ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ’, ವಂದೇ ಮಾತರಂ, ಜೈ ಹೋ ಸೇರಿದಂತೆ ಹಲವು ಹಾಡಿಗಳಿಗೆ ನೃತ್ಯ ಪ್ರದರ್ಶಿಸಿದರು. ಗುಂಡ್ಲುಪೇಟೆ ಜೆಎಸ್‌ಎಸ್ ಕಲಾ ಮತ್ತು ವಾಣಿಜ್ಯ ಕಾಲೇಜು, ತಿಪಟೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಹಲವು ಕಾಲೇಜು ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಮಾಡಿದರು.

 

ಪರಮಾತ್ಮನ ಆಟ…!: ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ನೃತ್ಯದ ಮೂಲಕ ಕೊಡಗಿನ ಜಲಪ್ರಳಯವನ್ನು ‘ಪರಮಾತ್ಮನ ಆಟ’ ಎಂದು ಬಣ್ಣಿಸಿದರು. ಕನ್ನಡ ನಾಡಿನ ಜೀವ ನದಿ ಕಾವೇರಿ ಹಾಡಿಗೆ ಹೆಜ್ಜೆ ಹಾಕಿದ ವಿದ್ಯಾರ್ಥಿಗಳು ನಂತರ ಕೊಡಗಿನ ಜಲಪ್ರಳಯದ ಭೀಕರತೆಯನ್ನು ನೃತ್ಯದ ಮೂಲಕ ತೋರಿಸುವ ಪ್ರಯತ್ನ ಮಾಡಿದರು. ಈ ಸಂದರ್ಭ ‘ಆಟ ಹುಡುಗಾಟವೋ ಪರಮಾತ್ಮ ನಾಟವೋ’ ಹಾಡಿಗೆ ಹೆಜ್ಜೆ ಹಾಕಿದರು.

ಗಮನ ಸೆಳೆದ ಮಲ್ಲಕಂಬ: ಧಾರವಾಡದ ನೂಲ್ವಿಯ ಸಿಬಿಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ವಿದ್ಯಾರ್ಥಿಗಳು ಮೈನವಿರೇಳಿಸುವ ಮಲ್ಲ ಕಂಬ ಸಾಹಸ ಪ್ರದರ್ಶನ ನಡೆಸಿಕೊಟ್ಟರು. ಕಂಬ ಹಾಗೂ ಹಗ್ಗದ ಮೂಲಕ ಮಲ್ಲಕಂಬ ಸಾಹಸ ಪ್ರದರ್ಶನ ತೋರಿದ ವಿದ್ಯಾರ್ಥಿಗಳು ನಗರದ ಯುವಜನರ ಮೆಚ್ಚುಗೆ ಪಡೆದರು.

‘ಸಂಭ್ರಮ’ ತಂದ ಸಂಕಷ್ಟ: ಯುವಜನರ ಸಂಭ್ರಮಕ್ಕೆ ಕಾರಣವಾಗುತ್ತಿರುವ ‘ದಸರಾ ಯುವ ಸಂಭ್ರಮ’ ಗಂಗೋತ್ರಿ ವಿದ್ಯಾರ್ಥಿಗಳ ಸಂಕಟಕ್ಕೂ ಕಾರಣವಾಗುತ್ತಿದೆ. ಈ ವಿಚಾರವನ್ನು ಸಂಘಟಕರ ಗಮನ ಸೆಳೆಯುವ ಪ್ರಯತ್ನವನ್ನು ವಿದ್ಯಾರ್ಥಿಗಳು ಮಂಗಳವಾರ ಮಾಡಿದರು.
‘ಯುವ ಸಂಭ್ರಮದಲ್ಲಿ ಅತಿಯಾದ ಶಬ್ದ ಬಳಕೆಯಿಂದ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಶಬ್ದವನ್ನು ಕಡಿಮೆ ಮಾಡಿ ಎಂದು ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ಶಬ್ದವನ್ನು ಕಡಿಮೆ ಮಾಡಿ’ ಎಂದು ಯುವ ದಸರಾ ಉಪಸಮಿತಿ ಕಾರ್ಯಾಧ್ಯಕ್ಷ ಎಂ.ಎನ್. ನಟರಾಜ್ ನಿರ್ದೇಶನ ನೀಡಿದ ನಂತರ ಧ್ವನಿವರ್ಧಕದ ಶಬ್ದವನ್ನು ಸ್ವಲ್ಪ ಕಡಿಮೆ ಮಾಡಲಾಯಿತು.