<ಮಲ್ಪೆ ಮೀನುಗಾರರ ನಾಪತ್ತೆ ಪ್ರಕರಣ ತಿಂಗಳು ಕಳೆದರೂ ನಿಗೂಢ * ಮೀನುಗಾರರಿಂದಲೇ ಶೋಧ ಶುರು>
ಉಡುಪಿ: ಬೋಟು ನಾಪತ್ತೆಯಾದ ರಾತ್ರಿ ಎರಡು ಗಂಟೆ ಸುಮಾರಿಗೆ ಸಿಂಧುದುರ್ಗ, ರತ್ನಗಿರಿ ಭಾಗ (ಅರೆಬೀಯನ್ ಸೀ)ದಲ್ಲಿ ಒಂದು ದೊಡ್ಡ ಹಡಗಿಗೆ(ಕ್ರೂೃಸ್) ಸುವರ್ಣ ತ್ರಿಭುಜ ಬೋಟ್ನ ವಯರ್ಲೆಸ್ ಕನೆಕ್ಟ್ ಆದ ಮೆಸೇಜ್ ರವಾನೆಯಾಗಿದೆ ಎಂಬ ಮಹತ್ವದ ಮಾಹಿತಿ ಲಭ್ಯವಾಗಿದೆ.
ಈ ಆಕ್ಟಿವಿಟಿ ನೌಕಪಡೆ ಫ್ರೀಕ್ವೆನ್ಸಿಯಲ್ಲಿ ರೆಕಾರ್ಡ್ ಆಗಿದ್ದು, ಎರಡು ದೊಡ್ಡ ಹಡಗುಗಳು ಈ ಮಾರ್ಗದಲ್ಲಿ ಸಂಚರಿಸಿದ್ದವು ಎಂಬ ಮಾಹಿತಿ ಆಧರಿಸಿ ನೌಕಾಪಡೆ ಉನ್ನತ ಮಟ್ಟದಲ್ಲಿ ತನಿಖೆ ನಡೆಸುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಮಧ್ಯರಾತ್ರಿ 1 ರಿಂದ ಬೆಳಗ್ಗೆ 6 ಗಂಟೆವರೆಗೆ ಹಾದುಹೋದ ಎಲ್ಲ ಹಡಗುಗಳ ವಿವರ ಪರಿಶೀಲಿಸಲಾಗುತ್ತಿದ್ದು, ಹಲವು ಆಯಾಮಗಳಲ್ಲಿ ನೌಕಾ ಪಡೆ ತನಿಖೆ ಮಾಡಲಿದೆ.
ಇನ್ನೊಂದೆಡೆ, ಮಹಾರಾಷ್ಟ್ರದ ಸಿಂದುಧುರ್ಗ ಎಸ್ಪಿ, ಉಡುಪಿ ಎಸ್ಪಿ ನಿರಂತರ ಸಂಪರ್ಕದಲ್ಲಿದ್ದಾರೆ. ಗೋವಾದ ಮಲ್ವಾನ್ಗೆ, ಮಹರಾಷ್ಟ್ರದ ಸಿಂಧುದುರ್ಗ, ರತ್ನಗಿರಿಗೆ 5 ಮೀನುಗಾರರನ್ನು ಒಳಗೊಂಡ ಎರಡು ಪೊಲೀಸರ ತಂಡ ತೆರಳಿದೆ. ಕೇರಳ ಕೊಚ್ಚಿಗೂ ಒಂದು ತಂಡ ತೆರಳಿ, ತನಿಖೆ ಆರಂಭಿಸಿದೆ.
ಅನ್ನ, ನೀರು ಸೇವಿಸದ ಕುಟುಂಬ: ಮಲ್ಪೆಯ ಬಡನಿಡಿಯೂರಿನ ಮೀನುಗಾರರ ಮನೆಯಲ್ಲಿ ಆತಂಕ ಮನೆಮಾಡಿದೆ. ಚಂದ್ರಶೇಖರ ಕೊಟ್ಯಾನ್, ದಾಮೋದರ್ ಕುಟುಂಬದವರು ಅನ್ನ, ನೀರು ಸೇವಿಸಲು ಹಿಂದೇಟು ಹಾಕುತ್ತಿದ್ದಾರೆ. ನಮ್ಮವರು ಸುರಕ್ಷಿತವಾಗಿ ಬರುವವರೆಗೂ ನಮಗೇನೂ ಬೇಡ ಎಂದು ಕಣ್ಣೀರು ಹಾಕುತ್ತಿದ್ದಾರೆ. ಮನೆಯವರ ಪರಿಸ್ಥಿತಿ ನೋಡಲಾಗುತ್ತಿಲ್ಲ, ಇನ್ನು ದೇವರೇ ನಮ್ಮನ್ನು ಕಾಪಡಬೇಕು. ಇಷ್ಟು ದಿನ ಕಳೆದರೂ, ಅವರು ಮರಳಿ ಬಂದೇ ಬರುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದು ಮೀನುಗಾರ ಮುಖಂಡರು ಭಾವುಕರಾಗುತ್ತಾರೆ ಹೇಳಿದರು. ಡಿ.13ರಂದು ಮಲ್ಪೆ ಮೀನುಗಾರಿಕೆ ಬಂದರಿನಿಂದ ತೆರಳಿದ್ದ ಬೋಟು 15ರ ರಾತ್ರಿ ಸಂಪರ್ಕ ಕಡಿದುಕೊಂಡಿತ್ತು. ಬಳಿಕ ಪೊಲೀಸ್, ಕೋಸ್ಟ್ಗಾರ್ಡ್, ನೌಕಾಪಡೆ ಸೇರಿದಂತೆ ಎಲ್ಲಾ ಆಯಾಮಗಳಿಂದ ಕಾರ್ಯಚರಣೆ ನಡೆದರೂ, ಇದುವರೆಗೂ ಬೋಟು ಅಥವಾ ಮೀನುಗಾರರ ಕುರುಹು ಪತ್ತೆಯಾಗದಿರುವುದು ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ. ಬೋಟ್ನಲ್ಲಿ 7 ಮಂದಿ ಸುರಕ್ಷಿತವಾಗಿ ಮರಳುವಂತೆ ಉಡುಪಿ, ದ.ಕ, ಉತ್ತರ ಕನ್ನಡ ಜಿಲ್ಲೆಯ ಮೀನುಗಾರರು ದೈವ, ದೇವರ ಮೊರೆ ಹೋಗುತ್ತಿದ್ದಾರೆ.
ಮಾತು ತಪ್ಪಿದರೇ ಗೃಹ ಸಚಿವರು?: ಜ.5ರಂದು ಜಿಲ್ಲೆಗೆ ಆಗಮಿಸಿದ ಗೃಹ ಸಚಿವ ಎಂ.ಬಿ ಪಾಟಿಲ್ ಮೀನುಗಾರರ ಮುಖಂಡರೊಂದಿಗೆ ಚರ್ಚಿಸಿ, ಮೀನುಗಾರರ ಪತ್ತೆ ಕಾರ್ಯಕ್ಕೆ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ. ವಾರದ ಒಳಗೆ ಮಹಾರಾಷ್ಟ್ರ, ಗೋವಾದ ಗೃಹ ಸಚಿವರು ಮತ್ತು ಕೋಸ್ಟ್ ಗಾರ್ಡ್ನೊಂದಿಗೆ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಈ ವಿಚಾರದಲ್ಲಿ ಯಾವುದೇ ಮಹತ್ವದ ಬೆಳವಣಿಗೆಯಾಗಿಲ್ಲ, ಸಭೆಯನ್ನೂ ನಡೆಸಿಲ್ಲ ಎಂದು ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಪತ್ತೆ ಪ್ರಕರಣದ ಗಂಭೀರತೆ ಅರಿತು ಇಲ್ಲಿವರೆಗೆ ಪಕ್ಕದ ರಾಜ್ಯದ ಗೃಹ ಸಚಿವರೊಡನೆ ಸಭೆ ಆಗಬೇಕಿತ್ತು. ಆದರೆ ಇನ್ನು ಪತ್ರ ಬರೆಯುವ ಹಂತದಲ್ಲೇ ಇದ್ದಾರೆ. ಪತ್ತೆ ಕಾರ್ಯಕ್ಕೆ ಇಸ್ರೊ ಸಹಕಾರಕ್ಕೆ ಸರ್ಕಾರ ತಕ್ಷಣ ಮುಂದಾಗಬೇಕಿತ್ತು. ಇದು ಸಹ ಪತ್ರ ಬರೆಯುವ ಹಂತದಲ್ಲೆ ಇದೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶೋಧ ಆರಂಭಿಸಿದ ಮೀನುಗಾರರು: ಮಲ್ಪೆ ಮೀನುಗಾರಿಕೆ ಬಂದರಿನಿಂದ ಹಂತ, ಹಂತವಾಗಿ ಆಳ ಸಮುದ್ರ ಮೀನುಗಾರಿಕೆ ಬೋಟುಗಳು ಮೀನುಗಾರಿಕೆಗೆ ತೆರಳಿವೆ. ನಾಪತ್ತೆಯಾದ ಮೀನುಗಾರರು ಮತ್ತು ಬೋಟಿನ ಶೋಧ ಕಾರ್ಯಕ್ಕೆ ಆದ್ಯತೆ. ಶನಿವಾರ 150-200 ಬೋಟುಗಳು ಐದಾರು ತಂಡಗಳಾಗಿ ಹೋಗಿವೆ. ಭಾನುವಾರ 200 ಬೋಟುಗಳು ಕಡಲಿಗಿಳಿದಿವೆ ಎಂದು ಮೀನುಗಾರರು ತಿಳಿಸಿದ್ದಾರೆ.