ಅಕ್ಕಿಆಲೂರ: ಬಸವಾದಿ ಪ್ರಮಥರ ವಚನ ಸಾಹಿತ್ಯದ ಮೂಲಕ ಕನ್ನಡ ನಾಡಿಗೆ ಮಠಗಳು ಅಮೋಘ ಕೊಡುಗೆ ನೀಡಿವೆ ಎಂದು ನಿಪ್ಪಾಣಿಯ ಭಕ್ತಿ ಯೋಗಾಶ್ರಮದ ಮಹೇಶಾನಂದ ಸ್ವಾಮೀಜಿ ಹೇಳಿದರು.
ಸಮೀಪದ ಆಡೂರ ಗ್ರಾಮದಲ್ಲಿ ಮಾತೃ ನುಡಿ ಕಲಾ ಸಂಘ ಕನ್ನಡ ರಾಜೋತ್ಸವದ ಪ್ರಯುಕ್ತ ಮಂಗಳವಾರ ಆಯೋಜಸಿದ್ದ ಮಾತೃ ನುಡಿ ಸಂಭ್ರಮ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದರು.
ಹುಳುಗಳ ಬಾಯಿಗೆ ಬಿದ್ದು, ಅಳಿವಿನ ಅಂಚಿನಲ್ಲಿದ್ದ ಲಕ್ಷಾಂತರ ವಚನ ಸಾಹಿತ್ಯದ ಪ್ರತಿಗಳನ್ನು ಹೊಸರೂಪದೊಂದಿಗೆ ಕನ್ನಡ ನಾಡಿಗೆ ನೀಡಿ, ನಾಡಿನ ಸಾಹಿತ್ಯ ಉತ್ತೇಜಿಸುವ ಕಾರ್ಯಕ್ಕೆ ಮಠಗಳು ಮುಂದಾದವು. ಕನ್ನಡಿಗರಲ್ಲಿ ವಿಶೇಷ ಶಕ್ತಿ ಇದೆ. ಅನ್ಯ ಭಾಷಿಕರು ಕನ್ನಡದ ಹೆಸರಿನಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಗಡಿಯಲ್ಲಿ ನೆಲ, ಜಲ ಮತ್ತು ಭಾಷೆಗಾಗಿ ನಡೆಯುತ್ತಿರುವ ಸಂಘರ್ಷದಲ್ಲಿ ಪದೆ ಪದೇ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ಖೇಧ ವ್ಯಕ್ತಪಡಿಸಿದರು.
ತಾಪಂ ಮಾಜಿ ಉಪಾಧ್ಯಕ್ಷ ಸಿದ್ದಲಿಂಗಪ್ಪ ಶಂಕ್ರಿಕೊಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕನ್ನಡ ಕಾರ್ಯಕ್ರಮ ಆಯೋಜಿಸುವ ಮೂಲಕ ನಾಡ ಜಾಗೃತಿ ಆಗಬೇಕಿದೆ. ಕನ್ನಡದಲ್ಲಿ ಅನೇಕ ಮಹಾನ್ ಶಬ್ದ ಕೋಶಗಳು ಅಡಗಿದ್ದು, ಅವುಗಳ ಅಧ್ಯಯನಕ್ಕೆ ಯುವಕರು ಮುಂದಾಗಬೇಕು ಎಂದು ಹೇಳಿದರು. ರೈತ ಮುಖಂಡ ಚಂದ್ರಶೇಖರ ಸಿಕ್ಕಂ ಮಾತನಾಡಿ, ಭಾಷೆಯ ಮೇಲಿನ ಅಭಿಮಾನ, ಜಾತಿ ಧರ್ಮವನ್ನು ಮೀರುವಂತಿರಬೇಕು ಎಂದು ಹೇಳಿದರು.
ನಂತರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಲಾ- ಕಾಲೇಜು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಮಾತೃ ನುಡಿ ಕಲಾಸಂಘದ ಅಧ್ಯಕ್ಷ ಗುಡ್ಡಪ್ಪ ಪೊಲೀಸಿ, ಮುಖಂಡರಾದ ರೇಣುಕಯ್ಯ ಹಿರೇಮಠ, ಬಸವಣ್ಣೆಪ್ಪ ಬೆಂಚಿಹಳ್ಳಿ, ಶಿವಾನಂದಯ್ಯ ಸಂಗೂರಮಠ, ಕರಬಸಪ್ಪ ಶಿವೂರ, ಗದಿಗೆಪ್ಪ ನಂದಿಹಳ್ಳಿ, ಮಾಲತೇಶ ಬೆಂಚಿಹಳ್ಳಿ, ಮೆಹಬೂಬಾಲಿ ಕರ್ಕಕುಮ್ಮಿನವರ, ಸಂತೋಷ ಅಗಸಿಮನಿ, ಮಂಜುನಾಥ ಉಳ್ಳಾಗಡ್ಡಿ, ತೇಜಪ್ಪ ಪೂಜಾರ, ಶಂಕರ ಸುಂಕದ, ಉಸ್ಮಾನ್ ದೊಡ್ಡುಮುಲ್ಲಾ, ಜುಂಜನಗೌಡ ದೊಡ್ಡಗೌಡರ, ಕೆ.ಎಫ್. ಚಿಕ್ಕೇರಿ, ಗುರುನಂಜನಗೌಡ ಪಾಟೀಲ, ರಾಜಶೇಖರ ಮಳೆಯಣ್ಣವರ, ಕರಬಸಪ್ಪ ದೇವಗಿರಿ, ಗಿಡ್ಡನಗೌಡರ, ನಿಂಗಪ್ಪ ದೊಂಡಗೆನವರ, ಮಹೇಶ ಪೂಜಾರ, ಪ್ರವೀಣ ಗಿಡ್ಡನಗೌಡರ ಇದ್ದರು.