ರಾಜೀವ್ ಗಾಂಧಿ 75ನೇ ಜನ್ಮದಿನದ ಅದ್ಧೂರಿ ಆಚರಣೆಗೆ ಕಾಂಗ್ರೆಸ್​ ಸಿದ್ಧತೆ; ಪಕ್ಷ ಸಂಘಟನೆಗೆ ಹೊಸ ಮಾರ್ಗ?

ನವದೆಹಲಿ: ಮಾಜಿ ಪ್ರಧಾನಿ ರಾಜೀವ್​ ಗಾಂಧಿಯವರ 75 ನೇ ಜನ್ಮದಿನವನ್ನು ಅದ್ಧೂರಿಯಿಂದ ಆಚರಣೆ ಮಾಡಲು ಕಾಂಗ್ರೆಸ್​ ಪಕ್ಷ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.
ಆಗಸ್ಟ್​ 20ರಂದು ರಾಜೀವ್​ ಗಾಂಧಿ ಹುಟ್ಟುಹಬ್ಬವಾಗಿದ್ದು ಅಂದು ದೇಶಾದ್ಯಂತ ಕಾರ್ಯಕ್ರಮ ಹಮ್ಮಿಕೊಳ್ಳಲು ಪಕ್ಷ ನಿರ್ಧರಿಸಿದೆ ಎನ್ನಲಾಗಿದೆ.

ಆಚರಣೆಗೆ ಸಂಬಂಧಪಟ್ಟಂತೆ ಯಾರ್ಯಾರು ಏನು ಜವಾಬ್ದಾರಿ ವಹಿಸಿಕೊಳ್ಳಬೇಕು? ಹೇಗೆ ಸಿದ್ಧತೆ ಮಾಡಬೇಕು ಎಂಬುದನ್ನು ಚರ್ಚಿಸಲು ಮಂಗಳವಾರ ರಾತ್ರಿ ಪಕ್ಷದ ಕಚೇರಿಯಲ್ಲಿ ಸಭೆ ನಡೆಸಲಾಗಿದೆ. ಅಲ್ಲದೆ, ದೆಹಲಿಯಲ್ಲಿ ಆಗಸ್ಟ್​ 22ರಂದು ಅದ್ಧೂರಿಯಾಗಿ ಮಾಜಿ ಪ್ರಧಾನಿ ಜನ್ಮದಿನ ಸಮಾರಂಭವನ್ನು ಆಯೋಜಿಸಲಾಗುವುದು ಎಂದು ಗೌಪ್ಯ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಸೋತಿದ್ದಲ್ಲದೆ ಪಕ್ಷದ ಬಲ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್​ ರಾಜೀವ್​ ಗಾಂಧಿಯವರ ಹುಟ್ಟುಹಬ್ಬ ಆಚರಣೆಯ ಮೂಲಕ ಮತ್ತೆ ಸಾರ್ವಜನಿಕರನ್ನು ತಲುಪಿ, ಪಕ್ಷ ಬಲವರ್ಧನೆ ಮಾಡಲು ಮುಂದಾಗಿದೆ ಎಂದು ಹೇಳಲಾಗಿದೆ.

ಅಲ್ಲದೆ, ಪ್ರತಿ ರಾಜ್ಯದ, ಜಿಲ್ಲೆ, ಬ್ಲಾಕ್​ ಮಟ್ಟದಲ್ಲಿ ಸಾಮಾನ್ಯ ಜನರೊಂದಿಗೆ ಹೆಚ್ಚೆಚ್ಚು ಸಂಪರ್ಕದಲ್ಲಿರಿ. ಪ್ರತಿದಿನದ ಆಗುಹೋಗುಗಳನ್ನು ಗಮನಿಸಿ ಎಂದು ಕಾಂಗ್ರೆಸ್​ ಸಂಘಟನಾ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್​ ಅವರು ಕಾಂಗ್ರೆಸ್​ ಕಾರ್ಯಕರ್ತರಿಗೆ ಈಗಾಗಲೇ ಸೂಚಿಸಿದ್ದಾರೆ.

ಹಾಗೇ ರಕ್ತದಾನ ಶಿಬಿರ, ಸಸಿನೆಡುವಿಕೆಯಂತಹ ಸಾಮಾಜಿಕ ಕೆಲಸಗಳನ್ನು ಕೈಗೊಳ್ಳಿ. ಜನರೊಂದಿಗೆ ಚರ್ಚಾ ಸಭೆ, ಸಮ್ಮೇಳನಗಳನ್ನು ಏರ್ಪಿಡಿಸಿ ಎಂದು ಪಕ್ಷದ ಮುಖಂಡರಿಗೂ ತಿಳಿಸಿದ್ದಾರೆ.
ಈಗ ಮಾಜಿ ಪ್ರಧಾನಿ ರಾಜೀವ್​ ಗಾಂಧಿಯವರ ಕೊಡುಗೆಗಳನ್ನು ಸಮಾಜದ ತಳಮಟ್ಟದವರೆಗೂ ತಲುಪಿಸುವ ಪ್ರಯತ್ನಕ್ಕೆ ಕಾಂಗ್ರೆಸ್​ ಮುಂದಾಗಿದೆ.

ಇಂದಿರಾ ಗಾಂಧಿಯವರ ಹತ್ಯೆಯ ಬಳಿಕ ಅವರ ಪುತ್ರ ರಾಜೀವ್​ ಗಾಂಧಿ ಪ್ರಧಾನಿ ಪಟ್ಟಕ್ಕೆ ಏರಿದ್ದರು. ನಂತರ 1991ರ ಮೇ ತಿಂಗಳಲ್ಲಿ ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಎಲ್​ಟಿಟಿಇ ಉಗ್ರ ಸಂಘಟನೆ ನಡೆಸಿದ್ದ ಆತ್ಮಾಹುತಿ ಬಾಂಬ್ ​ದಾಳಿಯಿಂದ ಸಾವನ್ನಪ್ಪಿದ್ದರು.

Leave a Reply

Your email address will not be published. Required fields are marked *