ಯುವಕನ ಬೆತ್ತಲೆ ಮೆರವಣಿಗೆಗೆ ಖಂಡನೆ

ಮೈಸೂರು: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ದಲಿತ ಯುವಕನೊಬ್ಬನನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದ ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ನಗರದಲ್ಲಿ ಬುಧವಾರ ಪ್ರತ್ಯೇಕ ಮೂರು ಪ್ರತಿಭಟನೆಗಳು ನಡೆದವು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ಬೆತ್ತಲೆ ಮೆರವಣಿಗೆ ಮಾಡಿದವರ ವಿರುದ್ಧ ನಾನಾ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ದಲಿತ ಯುವಕ ಪ್ರತಾಪ್ ದೇವಸ್ಥಾನ ಪ್ರವೇಶಿಸಿದ ಎಂಬ ಕಾರಣದಿಂದ ಆತನ ಮೇಲೆ ದೇವಸ್ಥಾನ ಕಳವು ಆರೋಪ ಹೊರಿಸಿ ಬೆತ್ತಲೆ ಮೆರವಣಿಗೆ ಮಾಡಿರುವುದು ಖಂಡನೀಯ. ದಲಿತ ಯುವಕ ತಪ್ಪುಗಳನ್ನು ಮಾಡಿದ್ದರೆ ಕಾನೂನು ಕ್ರಮಕ್ಕೆ ಗುರಿಪಡಿಸಬೇಕು. ಅದು ಬಿಟ್ಟು ಆತನನ್ನು ಬೆತ್ತಲೆಗೊಳಿಸಿ ಅಪಮಾನ ಮಾಡಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತರ ಮೇಲೆ ಪ್ರತಿನಿತ್ಯ ನಾನಾ ತರಹದ ದೌರ್ಜನ್ಯ ಪ್ರಕರಣಗಳು ನಡೆಯುತ್ತಲೇ ಇವೆ. ಎಷ್ಟೋ ಘಟನೆಗಳು ಹೊರಪ್ರಪಂಚಕ್ಕೆ ತಿಳಿಯದೆ ಮುಚ್ಚಿ ಹೋಗುತ್ತಿವೆ. ಅಂತಹ ಒಂದು ಘಟನೆ ಗುಂಡ್ಲುಪೇಟೆ ತಾಲೂಕಿನ ವೀರನಪುರ ಗೇಟ್ ಬಳಿ ನಡೆದಿದೆ. ಈ ಪ್ರಕರಣ ನಡೆದು ವಾರ ಕಳೆದರೂ ಪೊಲೀಸರಾಗಲಿ, ಜಿಲ್ಲಾಡಳಿತವಾಗಲಿ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.

ಇಂತಹ ಘಟನೆಗಳು ನಡೆದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೆ ಇರುವುದು ಆಡಳಿತ ವ್ಯವಸ್ಥೆಯ ದಲಿತ ವಿರೋಧಿ ಧೋರಣೆ ತೋರಿಸುತ್ತದೆ. ಹೀಗಾಗಿ, ಕಾನೂನು ಸುವ್ಯವಸ್ಥೆ ಬಗ್ಗೆ ಯಾವ ಗೌರವ, ಕಾಳಜಿ ಇಲ್ಲದ ದೌರ್ಜನ್ಯಕೋರರ ಅಟ್ಟಹಾಸಗಳು ಮರುಕಳಿಸುತ್ತಲೇ ಇವೆ. ಆದ್ದರಿಂದ ಈ ಘಟನೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾದ ಎಲ್ಲರನ್ನೂ ಬಂಧಿಸಬೇಕು. ಸಮಾಜದಲ್ಲಿ ಜಾತಿ, ಧರ್ಮ, ಲಿಂಗ ತಾರತಮ್ಯಗಳಿಂದ ನಡೆಯುವ ಇಂತಹ ಅಮಾನುಷ ಕೃತ್ಯಗಳನ್ನು ತಡೆಯಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಸಮಿತಿಯ ಜಿಲ್ಲಾ ಸಂಚಾಲಕ ಬೆಟ್ಟಯ್ಯಕೋಟೆ, ಪದಾಧಿಕಾರಿಗಳಾದ ಶಂಭುಲಿಂಗಸ್ವಾಮಿ, ರತ್ನಪುರಿ ಪುಟ್ಟಸ್ವಾಮಿ, ಹೆಗ್ಗನೂರು ನಿಂಗರಾಜು, ಕೆ.ಕೆ. ಜಗದೀಶ್, ಬಿ.ಡಿ. ಶಿವಬುದ್ಧಿ, ಯಡಕೊಳ ಮಹದೇವಸ್ವಾಮಿ, ಕುಪ್ಪೇಗಾಲ ಸೋಮು, ಮಂಜುನಾಥ್ ಕುಂಬಾರಕೊಪ್ಪಲು, ಎಸ್.ರಾಜಣ್ಣ ಇತರರು ಹಾಜರಿದ್ದರು.

ಪುರಭವನ ಆವರಣ: ದಲಿತ ಯುವಕನೊಬ್ಬನನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ಪುರಭವನದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರು ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಗುಂಡ್ಲುಪೇಟೆ ತಾಲೂಕಿನಲ್ಲಿ ದಲಿತ ಯುವಕನ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ದಲಿತ ಯುವಕನನ್ನು ಆದಿವಾಸಿಗಳಂತೆ ನಡೆಸಿಕೊಂಡಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಇಂತಹ ಘಟನೆಗಳನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ದಲಿತ ಸಂಘಟನೆಗಳು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಿವೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ನಿವೃತ್ತ ಪ್ರಾಧ್ಯಾಪಕ ಪ್ರೊ.ಮಹೇಶ್‌ಚಂದ್ರಗುರು ಇತರರು ಹಾಜರಿದ್ದರು.

ತಾಲೂಕು ಕಚೇರಿ ಎದುರು: ಗುಂಡ್ಲುಪೇಟೆಯಲ್ಲಿ ನಡೆದ ದಲಿತ ಯುವಕನ ಮೇಲಿನ ದೌರ್ಜನ್ಯ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ನಗರದ ತಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಇಂತಹ ಕ್ರೂರ ಅಮಾನವೀಯ ಕೃತ್ಯಕ್ಕೆ ಕೈಜೋಡಿಸಿದವರ ವಿರುದ್ಧ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಯುವಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ಭಾಗಿಯಾದವರಿಗೆ ತಕ್ಕ ಶಿಕ್ಷೆಯಾಗಬೇಕು. ಸರ್ಕಾರ ಕೂಡಲೇ ತಪ್ಪಿತಸ್ಥರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಸಂಘಟನಾ ಸಂಚಾಲಕ ಕೆ.ನಂಜಪ್ಪ ಬಸವನಗುಡಿ, ಮುಖಂಡರಾದ ವೆಂಕಟೇಶ್ ದಾಸ್, ಸಿ. ಮೋಹನ್‌ಕುಮಾರ್, ಆಟೋ ಸಿದ್ದು ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *