ಉಡುಪಿ: ಮಲ್ಪೆ ಸುವರ್ಣ ತ್ರಿಭುಜ ಬೋಟು ನಾಪತ್ತೆ ಪ್ರಕರಣ ಸಂಬಂಧ, ಈವರೆಗೂ ಪತ್ತೆಯಾಗದ 7 ಮೀನುಗಾರರ ಕುಟುಂಬಸ್ಥರಿಗೆ ಕರಾರು ಒಪ್ಪಂದದ ಪ್ರಕಾರ (ಬಾಂಡ್ ಅಗ್ರಿಮೆಂಟ್) ಪರಿಹಾರ ನೀಡಲು ಅವಕಾಶವಿದ್ದು, ಈ ನಿಟ್ಟಿನಲ್ಲಿ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ.
ಇಲಾಖೆ ಅಧಿಕಾರಿಗಳು, ಮೀನುಗಾರ ಮುಖಂಡರು ಮತ್ತು ಕುಟುಂಬ ಸದಸ್ಯರಿಗೆ ಈ ಬಗ್ಗೆ ಸೂಚನೆ ನೀಡಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲೆಯ ಮೀನುಗಾರರು ತಿಳಿಸಿದ್ದಾರೆ. ಬೋಟು ಅವಘಡ, ನಾಪತ್ತೆಯಾದವರ ವಿವರ ಮತ್ತು ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಸಮಗ್ರ ವರದಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಪರಿಹಾರ ಸಂಬಂಧಿ ಪ್ರಕ್ರಿಯೆಗಳಲ್ಲಿ ಕುಟುಂಬ ಸದಸ್ಯರಿಗೆ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಪಾರ್ಶ್ವನಾಥ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ವಿಶೇಷ ಪ್ರಕರಣದಲ್ಲಿ ಪರಿಹಾರ: ಮಲ್ಪೆ ಮೀನುಗಾರಿಕೆ ಬಂದರಿನಿಂದ ಡಿ.13 ರಂದು ಹೊರಟು ಡಿ.15 ರಂದು ಬೋಟು ಸಹಿತ ಚಂದ್ರಶೇಖರ ಕೊಟ್ಯಾನ್ , ದಾಮೋದರ್, ಲಕ್ಷ್ಮಣ್, ಸತೀಶ್, ಹರೀಶ್, ರಮೇಶ್, ರವಿ ನಾಪತ್ತೆಯಾಗಿದ್ದರು. ಮೇ 1ರಂದು ನೌಕಪಡೆ, ಮೀನುಗಾರರ ಸಮ್ಮುಖದಲ್ಲಿ ನಡೆದ ಕಾರ್ಯಚರಣೆ ವೇಳೆ ಸುವರ್ಣ ತ್ರಿಭುಜ ಬೋಟು ಅವಘಡಕ್ಕೀಡಾಗಿ ಮುಳುಗಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ 7 ಮೀನುಗಾರರು ಬದುಕಿರುವ ಸಾಧ್ಯತೆ ಇಲ್ಲ ಎಂಬ ಅಭಿಪ್ರಾಯಕ್ಕೆ ಮೀನುಗಾರ ಮುಖಂಡರು, ಶಾಸಕ ರಘುಪತಿ ಭಟ್ ಬಂದಿದ್ದಾರೆ. ಸಂಕಷ್ಟದಲ್ಲಿರುವ ಮೀನುಗಾರ ಕುಟುಂಬಕ್ಕೆ ಆರ್ಥಿಕ ನೆರವು ಅನಿವಾರ್ಯ. ನಾಪತ್ತೆಯಾಗಿರುವ ಮೀನುಗಾರರಿಗೆ ಪರಿಹಾರ ನೀಡಲು ವಿಶೇಷ ಪ್ರಕರಣ ಎಂದು ಪರಿಗಣಿಸಿ, ಕರಾರು ಒಪ್ಪಂದದ ಪ್ರಕಾರ (ಬಾಂಡ್ ಅಗ್ರಿಮೆಂಟ್) ಪರಿಹಾರ ನೀಡಲು ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಕರಾರು ಒಪ್ಪಂದ ಪರಿಹಾರ ?: ಮೀನುಗಾರಿಕೆ ವೇಳೆ ಮೀನುಗಾರ ನಾಪತ್ತೆಯಾಗಿ, ಮೃತಪಟ್ಟು ಮೃತದೇಹ ಸಿಗದೇ ಇದ್ದರೆ ನಾಪತ್ತೆ ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಪರಿಹಾರ ಕೊಡುವಾಗ ಕುಟುಂಬಸ್ಥರಿಂದ ಬಾಂಡ್ ಅಗ್ರಿಮೆಂಟ್ ಮಾಡಿಸಿ ಸರ್ಕಾರ ಪರಿಹಾರ ನೀಡುತ್ತದೆ. ಒಂದು ವೇಳೆ ನಾಪತ್ತೆಯಾಗಿರುವ ವ್ಯಕ್ತಿ ಮರಳಿ ಬಂದರೆ, ಪರಿಹಾರ ಮೊತ್ತವನ್ನು ಸರ್ಕಾರಕ್ಕೆ ಹಿಂದಿರುಗಿಸುವುದಾಗಿ ಪ್ರಮಾಣಿಕರಿಸುವ ಬಾಂಡ್ ಅಗ್ರಿಮೆಂಟ್ ಇದಾಗಿದೆ. ಕಳೆದ 4 ವರ್ಷದಲ್ಲಿ ಮೀನುಗಾರಿಕೆ ವೇಳೆ ಮೀನುಗಾರ ನಾಪತ್ತೆಯಾಗಿ, ಮೃತಪಟ್ಟು ಮೃತದೇಹ ಸಿಗದ ನಾಲ್ಕೈದು ಪ್ರಕರಣಗಳಲ್ಲಿ ಬಾಂಡ್ ಅಗ್ರಿಮೆಂಟ್ ಮೂಲಕ ಪರಿಹಾರ ನೀಡಲಾಗಿದೆ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮೀನುಗಾರಿಕೆ ವೇಳೆ ಮೃತಪಟ್ಟ ವ್ಯಕ್ತಿಗೆ ರಾಜ್ಯ ಸರ್ಕಾರ 6 ಲಕ್ಷ ರೂ. ಪರಿಹಾರ ನೀಡುತ್ತಿದೆ.
ನಂಬುವ ಸ್ಥಿತಿಯಲ್ಲಿಲ್ಲ ಉ.ಕ.ಕುಟುಂಬ: ಸುವರ್ಣ ತ್ರಿಭುಜ ಬೋಟು ಅವಘಡಕ್ಕೀಡಾದ ಬಗ್ಗೆ ಪತ್ರಿಕೆ, ಟಿವಿಗಳಲ್ಲಿ ಸುದ್ದಿ ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ಕುಟುಂಬದ ಸದಸ್ಯರು ಇದನ್ನು ನಂಬುವ ಸ್ಥಿತಿಯಲ್ಲಿಲ್ಲ ಎಂದು ಮೀನುಗಾರರು ಹೇಳಿದರು. ನಮ್ಮವರು ವಾಪಸ್ ಬರುವ ನಿರೀಕ್ಷೆಯಲ್ಲೇ ಬಡ ಕುಟುಂಬಗಳು ಜೀವನ ನಡೆಸುತ್ತಿವೆ. ಬೋಟು ಅವಘಡಕ್ಕೀಡಾಗಿರುವ ಬಗ್ಗೆ ನೌಕಾಪಡೆ, ರಾಜ್ಯ, ಕೇಂದ್ರ ಸರ್ಕಾರ ಕುಟುಂಬದವರಿಗೆ ಈ ವರೆಗೆ ಅಧಿಕೃತ ಮಾಹಿತಿ ನೀಡಿಲ್ಲ. ಸರ್ಕಾರ ಪರಿಹಾರ ಕೊಡುವ ಬಗ್ಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಕುಮಟಾದ ಮೀನುಗಾರ, ಮೃತ ಲಕ್ಷ್ಮಣ್ ಅವರ ಸಂಬಂಧಿ ಗೋವಿಂದ ಹರಿಕಾಂತ ಹೇಳಿದರು.