ಇನ್ನೂ ಜಾರಿಯಲ್ಲಿದೆ ನೀತಿ ಸಂಹಿತೆ

>>

ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ, ಶಿರ್ವ

ಚುನಾವಣೆ ಮುಗಿದರೂ ನೀತಿ ಸಂಹಿತೆ ಜಾರಿಯಲ್ಲಿದ್ದು ಮೇ 23ರವರೆಗೆ ಧಾರ್ಮಿಕ, ಖಾಸಗಿ ಕಾರ್ಯಕ್ರಮಗಳಿಗೆ ಆಯಾ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳ(ಎಆರ್‌ಒ) ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಕಾಪು ಕ್ಷೇತ್ರದಲ್ಲಿ ಪುರಸಭಾ ಕಟ್ಟಡಲ್ಲಿರುವ ಎಆರ್‌ಒ ಕಚೇರಿಯಲ್ಲಿ ಚುನಾವಣೆ ಬಳಿಕವೂ ದಿನಕ್ಕೆ 30ಕ್ಕೂ ಹೆಚ್ಚು ಅರ್ಜಿಗಳು ಕಾರ್ಯಕ್ರಮಕ್ಕೆ ಅನುಮತಿ ಕೋರಿ ಸ್ವೀಕೃತವಾಗುತ್ತಿವೆ.

ಕಾಪು ಎಆರ್‌ಒ ಕಚೇರಿಯಲ್ಲಿ ನಿಗದಿತ ನಮೂನೆಯಲ್ಲಿ ಕಾರ‌್ಯಕ್ರಮದ ಆಮಂತ್ರಣ ಪತ್ರಿಕೆ, ಸಂಸ್ಥೆಯ ಅಥವಾ ವ್ಯಕ್ತಿಯ ಪಾಸ್‌ಪುಸ್ತಕದ ಮೊದಲ ಪುಟ ಹಾಗೂ ಕ್ಲೋಸಿಂಗ್ ಬ್ಯಾಲೆನ್ಸ್ ಪುಟದ ಪ್ರತಿ, ಸ್ಥಳೀಯ ಸಂಸ್ಥೆ ನಿರಕ್ಷೇಪಣೆ ಪತ್ರದೊಂದಿಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಬೇಕಾಗುತ್ತದೆ.

10 ನಿಮಿಷದಲ್ಲಿ ಅನುಮತಿ: ಕಾಪು ಎಆರ್‌ಒ ನಾಗರಾಜ್ ಅವರು ಆರಂಭದಿಂದಲೂ ಜನಸ್ನೇಹಿಯಾಗಿದ್ದು, ಕಚೇರಿಯಲ್ಲಿ ಇರುವ ವೇಳೆ ಕೇವಲ 10 ನಿಮಿಷದಲ್ಲಿ ಸಮರ್ಪಕ ದಾಖಲೆ ಒದಗಿಸಿದವರಿಗೆ ಅನುಮತಿ ನೀಡುತ್ತಿದ್ದಾರೆ. ಚುನಾವಣೆ ಬಳಿಕ ದಿನಕ್ಕೆ ಸುಮಾರು 30ರಷ್ಟು ಅರ್ಜಿಗಳು ಸ್ವೀಕೃತವಾಗುತ್ತಿದ್ದು ಶೀಘ್ರ ವಿಲೇಯಾಗುತ್ತಿವೆ. ಜತೆಗೆ ಕಾರ‌್ಯಕ್ರಮಗಳ ವಿವರದ ಬಗ್ಗೆ ಫ್ಲೈಯಿಂಗ್ ಸ್ಕ್ವ್ಯಾಡ್ ಮತ್ತು ಇತರ ಕಣ್ಗಾವಲು ತಂಡಗಳಿಗೂ ತತ್‌ಕ್ಷಣ ಮಾಹಿತಿ ರವಾನೆಯಾಗುತ್ತಿದೆ.

ರಾಜಕೀಯ ಕಾರ‌್ಯಕ್ರಮಕ್ಕಿಲ್ಲ ಅನುಮತಿ: ಚುನಾವಣೆ ಮುಗಿದಿರುವುದರಿಂದ ಪ್ರಚಾರ ಕಾರ‌್ಯಗಳೆಲ್ಲವೂ ಸಂಪನ್ನಗೊಂಡಿವೆ. ಹಾಗಾಗಿ ಮೇ 23ರವರೆಗೆ ಯಾವುದೇ ರಾಜಕೀಯ ಪಕ್ಷಗಳ ಯಾವುದೇ ಕಾರ‌್ಯಕ್ರಮಗಳಿಗೆ ಅನುಮತಿ ನೀಡಲಾಗುವುದಿಲ್ಲ. ಕೇವಲ ಖಾಸಗಿ ಹಾಗೂ ಧಾರ್ಮಿಕ ಕಾರ‌್ಯಕ್ರಮಗಳಿಗೆ ಮಾತ್ರ ಅನುಮತಿ ನೀಡಲಾಗುತ್ತದೆ ಎಂದು ಕಾಪು ಎಆರ್‌ಒ ಡಾ.ನಾಗರಾಜ್ ತಿಳಿಸಿದ್ದಾರೆ.

ಪೊಲೀಸ್ ಅನುಮತಿಗೆ ಅಲೆದಾಟ: ಕಾರ‌್ಯಕ್ರಮ ನಡೆಯುವ ಸ್ಥಳದ ಬಗ್ಗೆ ಗ್ರಾಪಂ ಅನುಮತಿ ಪಡೆದು ಬಳಿಕ ಎಆರ್‌ಒ ಅನುಮತಿ ಪಡೆವ ಜನಸಾಮಾನ್ಯರು, ಧ್ವನಿವರ್ಧಕ ಅನುಮತಿಗಾಗಿ ಅಲ್ಲಿಂದ ಕಾರ‌್ಯಕ್ರಮ ನಡೆಯುವ ಸ್ಥಳಕ್ಕೆ ಸಂಬಂಧಿಸಿದ ಪೊಲೀಸ್ ಠಾಣೆಗೆ ತೆರಳಿ ಅಧಿಕೃತ ಒಪ್ಪಿಗೆ ಪಡೆದು, ವೃತ್ತ ನಿರೀಕ್ಷಕರ ಕಚೇರಿಗೆ ತೆರಳಿ ಅನುಮತಿ ಪಡೆಯಬೇಕಿದೆ. ಚುನಾವಣೆವರೆಗೆ ಎಆರ್‌ಒ ಕಚೇರಿಯಲ್ಲೇ ಪೊಲೀಸ್ ಅನುಮತಿ ಕೂಡ ದೊರೆಯುತ್ತಿತ್ತು. ಈಗ ಪೊಲೀಸರು ಎಆರ್‌ಒ ಕಚೇರಿಗೆ ಬಾರದಿರುವುದರಿಂದ ಜನರು ಪೊಲೀಸ್ ಠಾಣೆಗಳಿಗೆ ಮತ್ತು ವೃತ್ತ ನಿರೀಕ್ಷಕರ ಕಚೇರಿಗೆ ಅಲೆದಾಡುವಂತಾಗಿದೆ.

ಮೇ 23ರವರೆಗೆ ಕಾರ‌್ಯಕ್ರಮಗಳಿಗೆ ಎಆರ್‌ಒ ಅನುಮತಿ ಪಡೆಯಬೇಕೆಂದು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಕಾರ‌್ಯಕ್ರಮದ ಆಯೋಜಕರು ಕಚೇರಿಗೆ ಬಂದು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ಪರಿಶೀಲಿಸಿ ಶೀಘ್ರ ಅನುಮತಿ ನೀಡಲಾಗುತ್ತದೆ.
– ಡಾ.ನಾಗರಾಜ್, ಎಆರ್‌ಒ, ಕಾಪು