ಸಮ್ಮಿಶ್ರ ಸರ್ಕಾರ ಅಸ್ಥಿರಕ್ಕೆ ಮಾಜಿ ಮುಖ್ಯಮಂತ್ರಿ ಯತ್ನ

ಕೋಲಾರ: ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ಮೈತ್ರಿ ಸರ್ಕಾರವನ್ನು ಮುನ್ನಡೆಸುವ ವಿಚಾರದಲ್ಲಿ ಸೂಕ್ತ ಮಾರ್ಗದರ್ಶನ, ಸಲಹೆ, ಸಹಕಾರ ನೀಡುವ ಬದಲು ಸರ್ಕಾರ ಅಸ್ಥಿರಗೊಳಿಸುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಮತ್ತೊಮ್ಮೆ ಟೀಕಿಸಿದರು.

ಬುಧವಾರ ಗಟ್ಟಹಳ್ಳಿಯ ಆಂಜನೇಯಸ್ವಾಮಿ ದರ್ಶನ ಮಾಡಿ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ರಚಿಸಬೇಕಾಗಿರುವುದು ಜೆಡಿಎಸ್ ಅಥವಾ ಕೆಪಿಸಿಸಿ ಅಧ್ಯಕ್ಷರ ಜವಾಬ್ದಾರಿಯಲ್ಲ. ಸಮನ್ವಯ ಸಮಿತಿ ಅಧ್ಯಕ್ಷರು ಮಾಡಬೇಕಾದ ಕೆಲಸ, ಕಾರ್ಯಕ್ರಮಗಳ ವಿಚಾರದಲ್ಲಿ ಚಕಾರ ಎತ್ತದಿರುವ ಬಗ್ಗೆ ನನಗೆ ಅಸಮಾಧಾನವಿದೆಯೇ ಹೊರತು ನನ್ನ ಮತ್ತು ಅವರ ನಡುವೆ ವೈಯಕ್ತಿಕ ಭಿನ್ನಾಭಿಪ್ರಾಯವಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್​ನ ರೋಷನ್ ಬೇಗ್ ಸೇರಿ ಅನೇಕರು ಸಿದ್ದರಾಮಯ್ಯ ಹೇಳಿಕೆಗಳಿಂದ ಬೇಸತ್ತಿದ್ದಾರೆ. ಇನ್ನು ಮುಂದೆ ಗೊಂದಲಗಳಿಲ್ಲದೆ ಸರ್ಕಾರ ನಡೆಯಬೇಕೆಂಬ ಉದ್ದೇಶವಿದ್ದರೆ ಎರಡೂ ಪಕ್ಷಗಳು ಸಮನ್ವಯತೆಯಿಂದ ಕೆಲಸ ಮಾಡುವುದು ಅನಿವಾರ್ಯ ಎಂದರು.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ನನ್ನ ವಿರುದ್ಧ ಮಾಡಿರುವ ಟೀಕೆಯನ್ನು ಸಮನ್ವಯ ಸಮಿತಿ ಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ. ಈ ವಿಚಾರವಾಗಿ ಬಹಿರಂಗವಾಗಿ ಚರ್ಚೆ ಮಾಡಲು ಬಯಸುವುದಿಲ್ಲ.

| ಸಿದ್ದರಾಮಯ್ಯ ಮಾಜಿ ಸಿಎಂ

ವಿಶ್ವನಾಥ್ ಏತಕ್ಕೆ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿಕೊಂಡು ಹೇಳಿಕೆ ನೀಡುತ್ತಿದ್ದಾರೋ ಗೊತ್ತಿಲ್ಲ. ಕಳ್ಳರ ಮನಸ್ಸು ಹುಳ್ಳುಳ್ಳುಗೆ ಇರುತ್ತಲ್ಲ ಅದಕ್ಕೆ ಅವರು ಈ ರೀತಿ ಮಾತಾಡಿರಬಹುದು. ಅವರು ಜೆಡಿಎಸ್ ರಾಜ್ಯಾಧ್ಯಕ್ಷ. ಎರಡೂ ಪಕ್ಷಗಳ ನಡುವೆ ಸಾಮರಸ್ಯ ಮೂಡಿಸಬೇಕು.

| ಎಚ್.ಸಿ. ಮಹದೇವಪ್ಪ ಮಾಜಿ ಸಚಿವ

Leave a Reply

Your email address will not be published. Required fields are marked *