ನಗರ ವ್ಯಾಪ್ತಿಯಲ್ಲಿ ಶಾಂತಿಯುತ ಮತದಾನ

ಬೆಳಗಾವಿ: ಸಣ್ಣಪುಟ್ಟ ಗದ್ದಲ-ಗೊಂದಲಗಳ ಮಧ್ಯೆಯೂ ನಗರ ವ್ಯಾಪ್ತಿಯಲ್ಲಿ ಲೋಕಸಭೆ ಚುನಾವಣೆ ಮತದಾನ ಶಾಂತಿಯುತವಾಗಿ ನಡೆದಿದೆ. ಸಂಸದರು, ಶಾಸಕರು ಕುಟುಂಬ ಸಮೇತರಾಗಿ ಮತದಾನ ಮಾಡಿ ಗಮನ ಸೆಳೆದರು.

ಬೆಳಗಾವಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ಸಂಸದ ಸುರೇಶ ಅಂಗಡಿ ವಿಶ್ವೇಶ್ವರಯ್ಯ ನಗರದ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಅವರ ಪತ್ನಿ ಮಂಗಲ ಅಂಗಡಿ, ಪುತ್ರಿಯರಾದ ಶ್ರದ್ಧಾ ಮತ್ತು ಸ್ಫೂರ್ತಿ ಮತ ಚಲಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ ಅಂಗಡಿ, ನನಗೆ ಕ್ಷೇತ್ರದ ಮತದಾರರ ಆಶೀರ್ವಾದ ಇದೆ. ದೇಶದ ಜನತೆಗಾಗಿ ಪ್ರಧಾನಿ ನರೇಂದ್ರ ಮೋದಿ ಹತ್ತಾರು ಮಹತ್ವದ ಯೋಜನೆ ಜಾರಿಗೊಳಿಸಿದ್ದಾರೆ. ಹಾಗಾಗಿ, ಮೋದಿ ಅಲೆ ಕೈಹಿಡಿಯಲಿದೆ. ಸತತ 4ನೇ ಸಲ ಗೆಲುವು ನನ್ನದೇ. ಜನತೆಗೆ ಉತ್ತಮ ಸೇವೆ ನೀಡುವುದೇ ನನ್ನ ಗುರಿಯಾಗಿದೆ ಎಂದು ಹೇಳಿದರು.

ಹೊಸೂರ ಪ್ರದೇಶದಲ್ಲಿರುವ ಸರ್ಕಾರಿ ಗಂಡು ಮಕ್ಕಳ ಶಾಲೆ ಸಂಖ್ಯೆ 8ರ ಮತಗಟ್ಟೆಯಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮತ ಚಲಾಯಿಸಿದರು. ಆಂಜನೇಯ ನಗರದ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರ ಶಾಸಕ ಅನಿಲ ಬೆನಕೆ ಮತ ಚಲಾಯಿಸಿದರು. ಹಿಂಡಲಗಾ ಗ್ರಾಮದ ವಿಜಯನಗರ ಸರ್ಕಾರಿ ಶಾಲೆಯಲ್ಲಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ ಚಲಾಯಿಸಿದರು.

ಮೂವರು ತೃತೀಯ ಲಿಂಗಿಗಳಿಂದ ಮತದಾನ!

ಬೆಳಗಾವಿ ಅರಣ್ಯ ಇಲಾಖೆ ಕಚೇರಿ ಮತಗಟ್ಟೆಯಲ್ಲಿ ತೃತೀಯ ಲಿಂಗಿ ಮಧು ಮರಾಠೆ ಮತ ಚಲಾಯಿಸಿ ಗಮನಸೆಳೆದರು. ಮಹಿಳಾ ಮತದಾರರನ್ನು ಮತದಾನದತ್ತ ಸೆಳೆಯುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಮಧು ಅವರನ್ನು ‘ಸ್ವೀಪ್ ಐಕಾನ್’ ಆಗಿ ನೇಮಿಸಿತ್ತು. ಇದಲ್ಲದೆ, ತೃತೀಯ ಲಿಂಗಿಗಳಾದ ಚಂದ್ರಿಕಾ ಹಾಲಗಾ ಗ್ರಾಮದಲ್ಲಿ ಮತ್ತು ಶಗುಣಾ ಚವಾಟ್ ಗಲ್ಲಿ ಪ್ರದೇಶದಲ್ಲಿ ಮತ ಚಲಾಯಿಸಿದರು.

ಹಿರಿಯರ ಉತ್ಸಾಹ!: ಸುಡು ಬಿಸಿಲಿನ ಅಬ್ಬರದ ಮಧ್ಯೆಯೂ, ನಗರ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಮತ ಚಲಾವಣೆಗೆ ಜನ ಉತ್ಸಾಹದಿಂದ ಬಂದಿದ್ದರು. ಯುವಕ, ಯುವತಿಯರು ಮತ್ತು ಮಹಿಳೆಯರು ಮಾತ್ರವಲ್ಲದೆ, ಇಳಿವಯಸ್ಸಿನ ಹಿರಿಯರು ಮತ ಚಲಾಯಿಸಿ ಗಮನ ಸೆಳೆದರು. ನಡೆಯಲು ಬಾರದಿದ್ದರೂ ಮತ ಚಲಾಯಿಸಲೇಬೇಕೆಂಬ ತವಕದಿಂದ ಹಿರಿಯರು ಮತಗಟ್ಟೆಗೆ ಕಾಲಿಟ್ಟಿದ್ದು ವಿಶೇಷವಾಗಿತ್ತು. ಶಾಲೆ ವಿದ್ಯಾರ್ಥಿಗಳು ವ್ಹೀಲ್‌ಚೇರ್‌ಗಳ ನೆರವಿನಿಂದ ಮತಗಟ್ಟೆಯೊಳಗೆ ಅವರನ್ನು ಕರೆದೊಯ್ದರು.