ಬ್ಯಾಡಗಿ: ಇಲ್ಲಿನ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಮಳೆಗಾಲದ ದಿನದಲ್ಲಿಯೂ ಭರ್ಜರಿ ಮೆಣಸಿನಕಾಯಿ ವ್ಯಾಪಾರ ನಡೆದಿದ್ದು, ಜೂ. 13ರಂದು 14 ಸಾವಿರಕ್ಕೂ ಅಧಿಕ ಚೀಲಗಳ ಟೆಂಡರ್ ನಡೆದಿದೆ.
ಪ್ರತಿವರ್ಷ ನವಂಬರ್ನಿಂದ ಆರಂಭವಾಗಿ ಏಪ್ರಿಲ್ ಅಂತ್ಯದವರೆಗೆ ಭರ್ಜರಿ ವ್ಯಾಪಾರ ನಡೆಯುತ್ತದೆ. ಬಳ್ಳಾರಿ, ರಾಯಚೂರು, ಗದಗ, ಹೊಸಪೇಟೆ ಸೇರಿದಂತೆ ಹೊರರಾಜ್ಯದಿಂದ ರೈತರು ಮೆಣಸಿನಕಾಯಿ ತರುತ್ತಿದ್ದರು. ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ವಹಿವಾಟು ಇಳಿಮುಖವಾಗುತ್ತಿತ್ತು. ಆದರೆ, 2ರಿಂದ 10 ಸಾವಿರ ಚೀಲಗಳನ್ನು ಟೆಂಡರ್ಗಿಡುವುದು ಸಾಮಾನ್ಯವಾಗಿರುತ್ತದೆ. ಆದರೆ, ಈ ಬಾರಿ ಅಧಿಕ ಚೀಲಗಳನ್ನು ಟೆಂಡರ್ ಹಾಕಲಾಗಿತ್ತು.
ಜೂ. 13ರಂದು 14198 ಚೀಲಗಳನ್ನು ಟೆಂಡರ್ನಲ್ಲಿ ಇಡಲಾಗಿತ್ತು. 71 ದಲಾಲರ ಅಂಗಡಿಯಲ್ಲಿ ಟೆಂಡರ್ಗೆ ಹಾಕಿದ್ದ 384 ಲಾಟ್ಗಳಲ್ಲಿ 44 ನೋ ಬಿಡ್ ಆಗಿವೆ. 91 ಜನ ಖರೀದಿದಾರರು ಪಾಲ್ಗೊಂಡಿದ್ದರು. ಮಳೆ ಶುರುವಾಗಿದ್ದರೂ ವ್ಯಾಪಾರ ನಡೆಯುತ್ತಿದೆ. ಡಬ್ಬಿ ತಳಿ ಕ್ವಿಂಟಾಲ್ಗೆ 2159 ರೂ.ನಿಂದ 23,500 ರೂಪಾಯಿವರೆಗೆ, ಕಡ್ಡಿ ತಳಿ 1889 ರೂ.ನಿಂದ 18509 ರೂ.ವರೆಗೆ ಹಾಗೂ ಗುಂಟೂರು ಕಾಯಿ 729 ರೂ.ನಿಂದ 12809 ರೂ.ವರೆಗೆ ಮಾರಾಟವಾಯಿತು.
ಶೀತಲೀಕರಣ ಘಟಕಗಳಿಂದ ಅನುಕೂಲ
ಬ್ಯಾಡಗಿಯ ಸುತ್ತಮುತ್ತ ಸುಮಾರು 34 ಶೀತಲೀಕರಣ ಘಟಕ (ಕೋಲ್ಡ್ ಸ್ಟೋರೇಜ್) ಕಾರ್ಯನಿರ್ವಹಿಸುತ್ತಿವೆ. ಮಸಾಲಾ ಕಂಪನಿ, ಆಹಾರ ಘಟಕದಾರರು, ವರ್ಷಪೂರ್ತಿ ವಹಿವಾಟು ನಡೆಸುವ ದೊಡ್ಡ ಖರೀದಿದಾರರು ಅಗತ್ಯಕ್ಕೆ ತಕ್ಕಂತೆ ಲಕ್ಷಾಂತರ ಚೀಲಗಳನ್ನು ಘಟಕಗಳಲ್ಲಿ ಸಂಗ್ರಹಿಸಿಡುತ್ತಾರೆ. ಸಣ್ಣ ಖರೀದಿದಾರರು ಸಾವಿರಾರು ಚೀಲಗಳನ್ನು ವಿವಿಧ ಘಟಕಗಳಲ್ಲಿ ಸಂಗ್ರಹ ಮಾಡಿಕೊಂಡು ನಿರಂತರ ವ್ಯಾಪಾರಕ್ಕೆ ಮುಂದಾಗುತ್ತಾರೆ. ರೈತರು ಬೆಲೆ ಕುಸಿತವಾದಾಗ ಮತ್ತೆ ಬೆಲೆ ಏರಿಕೆಯಾದ ನಂತರ ಮಾರಾಟ ಮಾಡಲು ಶಿತಲೀಕರಣ ಘಟಕಗಳಲ್ಲಿ ಬಾಡಿಗೆ ಆಧಾರದಲ್ಲಿ ರಕ್ಷಿಸಿಡುತ್ತಾರೆ. ರೈತರು ದಲ್ಲಾಳಿ ಅಂಗಡಿಯವರಿಂದ ಬೆಲೆ ಏರಿಕೆ ಮಾಹಿತಿ ಪಡೆದು ಮಳೆಗಾಲದಲ್ಲಿಯೂ ಮೆಣಸಿನಕಾಯಿ ಟೆಂಡರ್ಗೆ ಇಡುತ್ತಾರೆ. ಇಲ್ಲಿನ ಶೀತಲೀಕರಣ ಘಟಕಗಳು ವರ್ಷಪೂರ್ತಿ ಮೆಣಸಿನಕಾಯಿ ವ್ಯಾಪಾರ ನಡೆಸಲು ಅನುಕೂಲಕರವಾಗಿವೆ. ಅಲ್ಲದೆ, ಹಮಾಲರು, ಮೆಣಸಿನಕಾಯಿ ತುಂಬು ಬಿಡಿಸುವ ಮಹಿಳಾ ಕಾರ್ವಿುಕರಿಗೆ ದುಡಿಮೆ ನೀಡುತ್ತಿವೆ.