ಚನ್ನಕೇಶವಸ್ವಾಮಿ ದೇವಾಲಯ ಹುಂಡಿಯಲ್ಲಿ 12.82 ಲಕ್ಷ ರೂ. ಸಂಗ್ರಹ

ಬೇಲೂರು:  ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಹುಂಡಿಯಲ್ಲಿ 12.82 ಲಕ್ಷ ರೂ. ಸಂಗ್ರಹವಾಗಿದೆ ಎಂದು ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೈ.ಟಿ.ದಾಮೋದರ್ ತಿಳಿಸಿದರು.


ಹುಂಡಿ ಹಣ ಎಣಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಕೇಶವಸ್ವಾಮಿ, ಶ್ರೀಸೌಮ್ಯ ನಾಯಕಿ ಸೇರಿ ವಿವಿಧ ದೇವಾಲಯಗಳ ಹುಂಡಿ ಹಣವನ್ನು ಎಣಿಕೆ ಮಾಡಲಾಗಿದೆ. ದೇವಾಲಯ ವ್ಯವಸ್ಥಾಪನ ಸಮಿತಿ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ , ಶಾಂತಲಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಎಸ್‌ಬಿಐ ಸಿಬ್ಬಂದಿ ಎಣಿಕೆಯಲ್ಲಿ ಭಾಗವಹಿಸಿದ್ದರು ಎಂದರು.

63 ಲಕ್ಷ ರೂ. ನೋಟಿನ ರೂಪದಲ್ಲಿ ಹಾಗೂ 1.19 ಲಕ್ಷ ರೂ.ಚಿಲ್ಲರೆ ರೂಪದಲ್ಲಿ ಎರಡು ತಿಂಗಳಲ್ಲಿ ಸಂಗ್ರಹವಾಗಿದೆ. ಅಲ್ಲದೆ ಅಮಾನ್ಯಗೊಂಡಿರುವ 1 ಸಾವಿರ ಮತ್ತು 500ರ ನೋಟುಗಳು, ವಿದೇಶಿ ಕರೆನ್ಸಿಗಳು ದೊರಕಿವೆ. ಕೆಲವು ಭಕ್ತರು ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ಪತ್ರವನ್ನೂ ಬರೆದಿದ್ದಾರೆ. 2018ರ ಏಪ್ರಿಲ್‌ನಿಂದ ಇಲ್ಲಿಯವರೆಗೆ ನಾಲ್ಕು ಬಾರಿ ಹುಂಡಿ ಹಣವನ್ನು ಎಣಿಸಲಾಗಿದ್ದು, ಒಟ್ಟು 49.83 ಲಕ್ಷ ರೂ. ಸಂಗ್ರಹವಾಗಿದೆ ಎಂದರು.


ದೇವಾಲಯ ವ್ಯವಸ್ಥಾಪನ ಸಮಿತಿ ಸದಸ್ಯರಾದ ಬಿ.ಎಂ.ರವೀಶ್, ವೆಂಕಟೇಗೌಡ, ದಾನಿ, ಕೃಷ್ಣಸ್ವಾಮಿ ಭಟ್ಟರ್, ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿ ವಿದ್ಯುನ್‌ಲತಾ ಇದ್ದರು.