ಸಂತೋಷ ವೈದ್ಯ ವಿಜಯವಾಣಿ
ದೇಶದ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ 1965ರಲ್ಲಿ ನಡೆದ ಘಟನೆ ಇದು. ಅಲ್ಲಿಯ ಶಾಸಕ ನಾರಸಿಂಗ್ ನಾರಾಯಣ ಪಾಂಡೆ ಅವರು ಅವ್ಯವಹಾರವೆಸಗಿದ್ದಾರೆಂದು ಗೋರಖಪುರ ನಿವಾಸಿ ಕೇಶವ್ ಸಿಂಗ್ ಎಂಬುವವರು ಕರಪತ್ರ ಮುದ್ರಿಸಿ ಹಂಚಿದ್ದರು. ನಾರಸಿಂಗ್ ಅವರು ಕೇಶವ್ ಸಿಂಗ್ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ಪ್ರಸ್ತಾವ ಮಂಡಿಸಿದರು. ವಿಧಾನಸಭಾಧ್ಯಕ್ಷರು ನೀಡಿದ ವಾರಂಟ್ ಆಧಾರದ ಮೇಲೆ ಕೇಶವ್ ಸಿಂಗ್ ಅವರನ್ನು ಸದನದ ಮುಂದೆ ಹಾಜರುಪಡಿಸಿದಾಗ ಅವರು ಯಾವುದೇ ಸ್ಪಷ್ಟ ಉತ್ತರ ನೀಡಲಿಲ್ಲ. ಆಗ ಸಭಾಧ್ಯಕ್ಷರು ಕೇಶವ್ ಸಿಂಗ್ ಅವರಿಗೆ 7 ದಿನಗಳ ಜೈಲುವಾಸಕ್ಕೆ ಆದೇಶಿಸಿದರು.
ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ಅಲಹಾಬಾದ್ ಉಚ್ಚ ನ್ಯಾಯಾಲಯ ಕೇಶವ್ ಸಿಂಗ್ ಅವರನ್ನು ಜಾಮೀನು ಮೇಲೆ ಬಿಡುಗಡೆ ಮಾಡಿತು. ಆಗ, ಉತ್ತರ ಪ್ರದೇಶ ವಿಧಾನಸಭೆಯು ನಿರ್ಣಯವೊಂದನ್ನು ಅಂಗೀಕರಿಸಿ ಜಾಮೀನು ಮಂಜೂರು ಮಾಡಿದ ಇಬ್ಬರು ನ್ಯಾಯಾಧೀಶರು ಹಾಗೂ ಅರ್ಜಿದಾರ ಪರ ವಕೀಲರನ್ನು ಬಂಧಿಸಿ ಸದನದ ಮುಂದೆ ಹಾಜರುಪಡಿಸುವಂತೆ ಆದೇಶಿಸಿತು. ಈ ನಿರ್ಣಯವನ್ನು ರದ್ದುಪಡಿಸುವಂತೆ ನ್ಯಾಯಾಧೀಶರು ಉತ್ತರ ಪ್ರದೇಶದ ಉಚ್ಚ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿದರು. ಹೀಗೆ ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡು ಶಾಸಕಾಂಗ ಮತ್ತು ನ್ಯಾಯಾಂಗದ ನಡುವೆ ಸಂಘರ್ಷದ ಹಾದಿ ಹಿಡಿದಿರುವುದನ್ನು ಮನಗಂಡ ಅಂದಿನ ಮುಖ್ಯಮಂತ್ರಿಯವರು ಪ್ರಕರಣವನ್ನು ಪ್ರಧಾನಿಯವರ ಗಮನಕ್ಕೆ ತಂದರು. ಬಳಿಕ ಸವೋಚ್ಚ ನ್ಯಾಯಾಲಯ ರಚಿಸಿದ 7 ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠವು ಸುದೀರ್ಘವಾದ ತೀರ್ಪನ್ನು ನೀಡಿ ಶಾಸಕಾಂಗ-ನ್ಯಾಯಾಂಗದ ಪರಿಮಿತಿಗಳನ್ನು ಸ್ಪಷ್ಟಪಡಿಸಿತು. ನ್ಯಾಯಾಧೀಶರು ಹಾಗೂ ಕಕ್ಷಿದಾರರ ವಕೀಲರು ಸದನದ ಮುಂದೆ ಹಾಜರಾಗಬೇಕಿಲ್ಲ ಹಾಗೂ ಕೇಶವ್ ಸಿಂಗ್ ಅವರು ಸದನದಿಂದ ನೀಡಲಾಗಿರುವ ಶಿಕ್ಷೆಯನ್ನು ಅನುಭವಿ ಸಬೇಕು ಎಂದು ತೀರ್ಪು ನೀಡಿತು.
ಇನ್ನೊಂದು ಪ್ರಕರಣ ಕರ್ನಾಟಕ ವಿಧಾನ ಪರಿಷತ್ಗೆ ಸಂಬಂಧಿಸಿದ್ದು. 1978ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ಎ.ಕೆ. ಸುಬ್ಬಯ್ಯ ಅವರು ಸದನದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಇಬ್ಬರು ಪರಿಷತ್ ಸದಸ್ಯರ ವಿರುದ್ಧ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಅಂದು ಸದನದಲ್ಲಿ ನಡೆದ ಕಲಾಪದ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ವಿಧಾನ ಪರಿಷತ್ ಸಭಾಪತಿಯವರಿಗೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಅವರು ಕೋರಿದ್ದರು. ಆದರೆ, ‘ಸದನದ ನಡವಳಿಕೆಯನ್ನು ಯಾರೂ ಪ್ರಶ್ನಿಸುವಂತಿಲ್ಲ ಹಾಗೂ ನ್ಯಾಯಾಲಯವು ಮಧ್ಯಪ್ರವೇಶಿಸುವಂತಿಲ್ಲ. ಸದನದ ದಾಖಲೆಗಳನ್ನು ತರಿಸಲು ಆದೇಶಿಸಬೇಕೆಂದು ಕೋರಿರುವುದು ನಮ್ಮ ವ್ಯಾಪ್ತಿಗೆ ಮೀರಿದ ವಿಷಯ’ ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿತು.
2018ರ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಇಲ್ಲದಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡಿದವು. 2019ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ನ 17 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಜೀನಾಮೆ ನೀಡಿದ ಎಲ್ಲ ಶಾಸಕರನ್ನು ಅಂದಿನ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶಕುಮಾರ್ ಅಮಾನತು ಮಾಡಿದರು. ರಾಜೀನಾಮೆ ನೀಡಿದ ಶಾಸಕರು ಈ ಅಮಾನತು ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಆದರೆ, ಸವೋಚ್ಚ ನ್ಯಾಯಲಯವು ಸಭಾಧ್ಯಕ್ಷರ ನಿರ್ಣಯವನ್ನು ಎತ್ತಿಹಿಡಿಯಿತು.
ಈ ಪ್ರಕರಣಗಳು, ಸಾಂವಿಧಾನಿಕ ಹುದ್ದೆಯಾಗಿರುವ ವಿಧಾನ ಸಭಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸಭಾಪತಿಗಳು ಸವೋಚ್ಚ ಅಧಿಕಾರ ಹೊಂದಿರುವುದನ್ನು ಎತ್ತಿ ತೋರಿಸುತ್ತವೆ. ಹೀಗೆ ಲೋಕಸಭೆ ಅಧ್ಯಕ್ಷರು, ದೇಶದ ವಿವಿಧ ರಾಜ್ಯಗಳ ವಿಧಾನ ಪರಿಷತ್ಗಳ ಸಭಾಪತಿಗಳು ಅಥವಾ ವಿಧಾನಸಭೆಗಳ ಸಭಾಧ್ಯಕ್ಷರ ತೀರ್ಪಗಳನ್ನು ಕಾಲಕಾಲಕ್ಕೆ ಉಚ್ಚ ಹಾಗೂ ಸವೋಚ್ಚ ನ್ಯಾಯಲಯವು ಮಾನ್ಯ ಮಾಡಿದ 30ಕ್ಕೂ ಹೆಚ್ಚು ಪ್ರಕರಣಗಳಿವೆ. ಸಂವಿಧಾನದ ಪರಿಚ್ಛೇದ 212/1ಪ್ರಕಾರ ಇಂಥ ಸಾಂವಿಧಾನಿಕ ಹುದ್ದೆಯಲ್ಲಿರುವವರ ಆದೇಶವನ್ನು ಪ್ರಶ್ನಿಸುವಂತಿಲ್ಲ ಎಂದು ಹೇಳಲಾಗಿದೆ.
2024ರ ಡಿಸೆಂಬರ್ 19ರಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಘಟಿಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಕರಣವು ಸದನದ ಸಾರ್ವಭೌಮತ್ವ ಹಾಗೂ ಸಭಾಪತಿಗೆ ನಿಹಿತವಾಗಿರುವ ಅಧಿಕಾರವನ್ನು ಚರ್ಚೆಗೆ ತಂದಿದೆ. ಈ ಪ್ರಕರಣ ರಾಷ್ಟ್ರಮಟ್ಟದಲ್ಲೂ ಚರ್ಚೆಗೆ ಕಾರಣವಾಗಿದೆ. ವಿಧಾನಸಭಾಧ್ಯಕ್ಷ ಹಾಗೂ ಸಭಾಪತಿಗಳ ಅಧಿಕಾರದ ಕುರಿತು ಬಿಹಾರದ ಪಟ್ನಾದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಚಾರ ಸಂಕಿರಣಕ್ಕೆ ಕರ್ನಾಟಕದ ಪ್ರಕರಣವೇ ಪ್ರೇರಣೆಯಾಗಿತ್ತು.
ಬೆಳಗಾವಿ ಪ್ರಕರಣದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರು ತೆಗೆದುಕೊಂಡ ನಿರ್ಧಾರಗಳು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸತತ 8 ಬಾರಿ ವಿಧಾನ ಪರಿಷತ್ ಸದಸ್ಯರಾಗಿರುವ ಹೊರಟ್ಟಿಯವರು ಈ ಪ್ರಕರಣದಲ್ಲಿ ತಮ್ಮ ಆಗಾಧ ಅನುಭವವನ್ನು ಓರೆಗೆ ಹಚ್ಚಿದ್ದಾರೆ. ಸದನದಲ್ಲಿನ ಆಗು-ಹೋಗುಗಳಿಗೆ ಸಭಾಪತಿಯೇ ಸವೋಚ್ಚ ಎಂಬುದನ್ನು ತೋರಿಸಿದ್ದಾರೆ. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿಲ್ಲ. ಆದರೆ, ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ. ಹೀಗೆ ಮಾಡುವ ಮೂಲಕ ರಾಜ್ಯ ಸರ್ಕಾರ ಶಾಸಕಾಂಗಕ್ಕೆ ಮತ್ತು ಸಭಾಪತಿಯವರಿಗೆ ಪ್ರದತ್ತವಾಗಿರುವ ವಿಶೇಷ ಅಧಿಕಾರಕ್ಕೆ ಚ್ಯುತಿ ಬರುವಂತೆ ನಡೆದುಕೊಂಡಿದೆ ಹಾಗೂ ಸಾಂವಿಧಾನಿಕ ಘರ್ಷಣೆಗೆ ಅವಕಾಶ ಮಾಡಿಕೊಡುತ್ತಿದೆ ಎಂದು ಈಗಾಗಲೇ ಸಭಾಪತಿಯವರು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ‘ಡಿ.19ರಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ’ ಎಂದು ಗೃಹ ಸಚಿವರು ಉಲ್ಲೇಖಿಸಿರುವುದೇ ತಪ್ಪು ಎಂದು ಹೇಳಲಾಗುತ್ತಿದೆ. ಸದನದ ಪ್ರತಿಯೊಂದು ನಡವಳಿಕೆಯು ಸಭಾಪತಿ, ಸಭಾಧ್ಯಕ್ಷರ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿರುತ್ತದೆ.
ಸದನದಲ್ಲಿ ಸದಸ್ಯರ ದುರ್ನಡತೆಗಾಗಿ ಅವರನ್ನು ಶಿಕ್ಷಿಸುವ ಅಧಿಕಾರ ಸದನಕ್ಕಿದೆ. ಸದಸ್ಯ ಅನುಚಿತವಾಗಿ ವರ್ತಿಸಿದ್ದಾರೆಯೇ ಅಥವಾ ಸದಸ್ಯರಿಗೆ ತಕ್ಕದಲ್ಲದ ರೀತಿಯಲ್ಲಿ ವರ್ತಿಸಿದ್ದಾರೆಯೇ ಎಂಬುದನ್ನು ನಿರ್ಧರಿಸುವ ಪ್ರತಿಯೊಂದು ಪ್ರಕರಣವು ಸದನದ ಅಧಿಕಾರದ ವ್ಯಾಪ್ತಿಯೊಳಗೆ ಬರುತ್ತದೆ. ಇದೀಗ ಎಂಎಲ್ಸಿ ಸಿ.ಟಿ. ರವಿ-ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣವನ್ನು ಸಿಐಡಿಗೆ ವಹಿಸುವ ಮೂಲಕ ಶಾಸಕಾಂಗ-ಕಾರ್ಯಾಂಗ ನಡುವಿನ ಸಂಘರ್ಷ ಸೃಷ್ಟಿಯಾಗಿದೆ.
ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಸಭಾಪತಿ ಹೊರಟ್ಟಿಯವರು ಸದನವನ್ನು ಮುಂದೂಡಿದ ಬಳಿಕ ಸಿ.ಟಿ.ರವಿ-ಲಕ್ಷ್ಮಿ ಹೆಬ್ಬಾಳ್ಕರ್ ಪ್ರಕರಣ ನಡೆದಿರುವುದು. ಸದನ ಮುಂದೂಡಿದ ತಕ್ಷಣವೇ ಸಿಸಿ ಟಿವಿ, ಕ್ಯಾಮರಾ, ಕಲಾಪ ವರದಿಗಾರಿಕೆ ಎಲ್ಲವೂ ಸ್ಥಗಿತಗೊಳ್ಳುತ್ತದೆ. ಇದರಿಂದ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಅಪಮಾನಿಸಿದ್ದಾರೆ ಎನ್ನಲಾದ ಸಿ.ಟಿ. ರವಿ ಹೇಳಿಕೆಗೆ ಯಾವುದೇ ಸಾಕ್ಷ್ಯಾಧಾರಗಳು, ದಾಖಲೆಗಳು ಸಿಕ್ಕಿಲ್ಲ. ಸದನ ನಡೆದಾಗ ಸದಸ್ಯರಿಂದ ಆಕ್ಷೇಪಾರ್ಹ ಹೇಳಿಕೆಗಳು ಬಂದಲ್ಲಿ ಕಡತದಿಂದ ತೆಗೆಯಲು ಹೇಳಿ ಪ್ರಕರಣವನ್ನು ಇತ್ಯರ್ಥ ಪಡಿಸಬಹುದಾಗಿತ್ತು. ಇಲ್ಲವೆ ಕೆಲ ದಿನಗಳ ಕಾಲದ ಅವಧಿಗೆ ಸಂಬಂಧಪಟ್ಟವರಿಗೆ ಸದನದ ಕಾರ್ಯಕಲಾಪದಿಂದ ಅಮಾನತು ಮಾಡಬಹುದಿತ್ತು. ಆದರೆ, ಘಟನೆ ನಡೆದಿರುವುದು ಅಧಿವೇಶನದ ಕೊನೆಯ ದಿನ. ಇದೀಗ ಖಾಸಗಿಯಾಗಿ ಲಭ್ಯವಿರುವ ರೆಕಾರ್ಡಿಂಗ್ ಆಧಾರವಾಗಿದೆ. ಅದೀಗ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ಪರೀಕೆ್ಷಗೆ ಒಳಪಡಬೇಕು.
ಪ್ರಕರಣವನ್ನು ಸಿಒಡಿಗೆ ವಹಿಸಿದ ಬಳಿಕ ಸ್ಥಳ ಪಂಚನಾಮೆ ನಡೆಸಲು ಸಭಾಪತಿಯವರು ಅವಕಾಶ ನೀಡಿಲ್ಲ. ’ಯಾವ ರೀತಿ ಪಂಚನಾಮೆ ನಡೆಸುತ್ತೀರಿ?’ ಎಂದು ಅವರು ರಾಜ್ಯ ಸರ್ಕಾರಕ್ಕೆ ವಿವರ ಕೇಳಿದ್ದಾರೆ. ಸಿ.ಟಿ. ರವಿ ಬಂಧನವು ಪ್ರಶ್ನಾರ್ಹವಾಗಿದೆ. ಸಭಾಪತಿಯವರ ಅನುಮತಿ ಪಡೆಯದೆ ಸದನದೊಳಗೆ ಸಿವಿಲ್ ಅಥವಾ ಕ್ರಿಮಿನಲ್ ಸ್ವರೂಪದ ಕಾನೂನು ಕ್ರಮ ಜರುಗಿಸಲು ಬರುವುದಿಲ್ಲ. ಈ ಪ್ರಕರಣದಲ್ಲಿ ಸಿ.ಟಿ. ರವಿ ಅವರ ಬಂಧನದ ನಂತರವಷ್ಟೇ ಪೊಲೀಸರು ಸಭಾಪತಿಯವರ ಗಮನಕ್ಕೆ ತಂದಿದ್ದಾರೆ. ಒಟ್ಟಾರೆ ಈ ಪ್ರಕರಣವು ಸಭಾಪತಿಯವರ ಸವೋಚ್ಚ ಅಧಿಕಾರ ವ್ಯಾಪ್ತಿಗೆ ಸವಾಲೊಡ್ಡುತ್ತಿದೆ. ರಾಜ್ಯ ಸರ್ಕಾರಕ್ಕೂ ನುಂಗಲಾಗದ ಬಿಸಿತುಪ್ಪವಾಗಿದೆ. ಸಭಾಪತಿಯವರ ಅಧಿಕಾರವೇ ಸವೋಚ್ಚ ಎಂಬುದನ್ನು ನಿರೂಪಿಸಲು ಹೊರಟ್ಟಿಯವರ ವಿಶಾಲ ಅನುಭವ ಸಾಕಾಗಬಹುದೇ? ಕಾದು ನೋಡಬೇಕು.