ಮೈಸೂರು ಅರಮನೆಗೆ ಆದಾಯ ತೆರಿಗೆ ವಿನಾಯಿತಿ

ಮೈಸೂರು: ವಿಶ್ವಪ್ರಸಿದ್ಧ ಮೈಸೂರು ಅರಮನೆಗೆ ಆದಾಯ ತೆರಿಗೆ ವಿನಾಯಿತಿ ಭಾಗ್ಯ ದೊರೆತಿದ್ದು, ಆ ಮೂಲಕ ತೆರಿಗೆ ಭಾರದಿಂದ ಮುಕ್ತವಾಗಿದೆ.

ತೆರಿಗೆ ಪಾವತಿ ಮಾಡುವಂತೆ ಆದಾಯ ತೆರಿಗೆ ಇಲಾಖೆಗೆ ಅರಮನೆ ಆಡಳಿತ ಮಂಡಳಿಗೆ ನೋಟಿಸ್ ನೀಡಿತ್ತು. ಇದರಿಂದ ಅದು ಕಂಗಾಲಾಗಿತ್ತು. ಮಂಡಳಿಯ ಅಧ್ಯಕ್ಷರೂ ಆಗಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಕಳೆದ ಸೆಪ್ಟಂಬರ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ಈ ಸಂಬಂಧ ಪತ್ರ ಬರೆದಿದ್ದರು.

ಅರಮನೆ ಐತಿಹಾಸಿಕ ಕುರುಹು. ಇಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿಲ್ಲ. ನಾಡಹಬ್ಬ ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಆಗ ಅರಮನೆ ಆವರಣಕ್ಕೆ ಮುಕ್ತ ಪ್ರವೇಶ ನೀಡಲಾಗುತ್ತದೆ. ಅರಮನೆಯ ದೀಪಾಲಂಕಾರ ವೀಕ್ಷಿಸಲು ಯಾವುದೇ ಶುಲ್ಕ ವಿಧಿಸುತ್ತಿಲ್ಲ. ಆದ್ದರಿಂದ ಆದಾಯ ತೆರಿಗೆಯಿಂದ ಮೈಸೂರು ಅರಮನೆ ಮಂಡಳಿಗೆ ವಿನಾಯಿತಿ ನೀಡಬೇಕು ಎಂದು ಕೋರಿದ್ದರು.
ಇದಕ್ಕೆ ಸ್ಪಂದಿಸಿರುವ ಕೇಂದ್ರ ಸರ್ಕಾರ 2019-20ರಿಂದ 4 ವರ್ಷದವರೆಗೆ ತೆರಿಗೆ ವಿನಾಯಿತಿ ನೀಡಿದೆ. ಆದಾಯ ತೆರಿಗೆ ಇಲಾಖೆಯ ಕಾಯ್ದೆ 1961ರ ಪ್ರಕಾರ 10(46)ರ ಅನ್ವಯ ಈ ತೆರಿಗೆಯಲ್ಲಿ ರಿಯಾಯಿತಿ ಸಿಕ್ಕಿದೆ.

ಯಾವ ಕಾರಣಕ್ಕೆ ನೋಟಿಸ್?: ಅರಮನೆ ವೀಕ್ಷಣೆಗೆ ಪ್ರತಿ ವರ್ಷ ಅಂದಾಜು 35 ಲಕ್ಷ ಜನರು ಭೇಟಿ ನೀಡುತ್ತಾರೆ. ಇದರಿಂದ ಪ್ರವೇಶ ಶುಲ್ಕವಾಗಿ ಅರಮನೆಗೆ ವಾರ್ಷಿಕ 15 ಕೋಟಿ ರೂ. ಆದಾಯ ಬರುತ್ತಿದೆ. ಅರಮನೆ ಆವರಣದಲ್ಲಿ ವಾಣಿಜ್ಯ ಮಳಿಗೆಗಳನ್ನು ಬಾಡಿಗೆಗೆ ನೀಡಲಾಗಿದೆ. ಮಂಡಳಿಯು ಹಣವನ್ನು ಬ್ಯಾಂಕ್‌ಗಳಲ್ಲಿ ಠೇವಣಿಯಾಗಿ ಇಟ್ಟಿದ್ದು, ಅದಕ್ಕೆ ಲಕ್ಷಾಂತರ ರೂ. ಬಡ್ಡಿಯೂ ಬರುತ್ತಿದೆ. ಹೀಗೆ ಒಟ್ಟು ವಾರ್ಷಿಕ ಸುಮಾರು 22 ಕೋಟಿ ರೂ. ಆದಾಯ ಮಂಡಳಿಗೆ ಇದೆ. ಆದ್ದರಿಂದ ಈ ಆದಾಯಕ್ಕೆ ತೆರಿಗೆ ಪಾವತಿಸಲು ಆದಾಯ ತೆರಿಗೆ ಇಲಾಖೆಯು ನೋಟಿಸ್ ನೀಡಿತ್ತು.

Leave a Reply

Your email address will not be published. Required fields are marked *