ಪ್ರತ್ಯೇಕತೆಗೆ ಕೇಂದ್ರ ತಡೆ

<< ಲಿಂಗಾಯತ ಸ್ವತಂತ್ರ ಧರ್ಮ ಬೇಡಿಕೆ ತಿರಸ್ಕಾರ >>

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ವೇಳೆ ವಿವಾದದ ಬಿರುಗಾಳಿ ಎಬ್ಬಿಸಿ, ಅಂದಿನ ಸಿದ್ದರಾಮಯ್ಯ ಸರ್ಕಾರದ ಹಿನ್ನಡೆಗೂ ಕಾರಣವಾಗಿದ್ದ ಲಿಂಗಾ ಯತ ಪ್ರತ್ಯೇಕ ಧರ್ಮ ರಚನೆ ಪ್ರಸ್ತಾವನೆಯನ್ನು ಅಧಿಕೃತವಾಗಿ ತಿರಸ್ಕರಿಸುವ ಮೂಲಕ ಕೇಂದ್ರ ಸರ್ಕಾರ ವಿವಾದಕ್ಕೆ ರ್ತಾಕ ಅಂತ್ಯ ಕಾಣಿಸಿದೆ.

ಪ್ರತ್ಯೇಕ ಧರ್ಮ ಪ್ರಸ್ತಾವನೆಯನ್ನು ನ.13ರಂದೇ ಕೇಂದ್ರ ಗೃಹ ಸಚಿವಾಲಯ ತಿರಸ್ಕರಿಸಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ಕೆ. ನಾವಡಗಿ ಹೈಕೋರ್ಟ್​ಗೆ ಮಾಹಿತಿ ನೀಡಿದ್ದಾರೆ.

ಪ್ರತ್ಯೇಕ ಧರ್ಮದ ವಿಚಾರಕ್ಕೆ ನಾಲ್ವರು ಸಚಿವರನ್ನೇ ನಿಯೋಜಿಸುವ ಮೂಲಕ ಸಿದ್ದರಾಮಯ್ಯ ಸರ್ಕಾರವೇ ಧರ್ಮ ಒಡೆಯಲು ಪೌರೋಹಿತ್ಯ ವಹಿಸಿದೆ ಎಂದು ಆರೋಪಿಸಿ ರಾಜ್ಯಾದ್ಯಂತ ನಡೆದ ಹೋರಾಟಗಳಿಗೆ ಕೇಂದ್ರ ಸರ್ಕಾರದ ನಿರ್ಧಾರದಿಂದ ಜಯ ಸಿಕ್ಕಿದೆ ಎಂದು ಪಂಚಪೀಠಾಧೀಶರು, ರಾಜಕಾರಣಿ ಗಳು ಅಭಿಪ್ರಾಯಪಟ್ಟಿದ್ದಾರೆ.

ಪ್ರಮುಖವಾಗಿ ಉತ್ತರ ಕರ್ನಾಟಕದಲ್ಲಿರುವ ವೀರಶೈವ ಲಿಂಗಾಯತ ಮತದಾರರು ಬಿಜೆಪಿ ಪರ ಒಲವು ಹೊಂದಿದ್ದು, ಮತ ವಿಭಜನೆಯಾದರಷ್ಟೇ ಗೆಲುವು ಸಾಧ್ಯ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಸರ್ಕಾರ ವಿಭಜನೆ ರಾಜಕೀಯ ಅನುಸರಿಸುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು.

ಮೇನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲಿಸುವ ಮೂಲಕ ಧರ್ಮ ವಿಭಜನೆಗೆ ಬೆಂಬಲ ನೀಡುವುದಿಲ್ಲ ಎಂಬ ಸಂದೇಶವನ್ನು ಮತದಾರರು ನೀಡಿದ್ದರು. ಧರ್ಮ ವಿಚಾರದಲ್ಲಿ ಕೈಹಾಕಿದ್ದು ತಪ್ಪಾಯಿತು ಎಂದು ಈಗಿನ ಮೈತ್ರಿ ಸರ್ಕಾರದ ಸಚಿವ ಡಿ.ಕೆ. ಶಿವಕುಮಾರ್ ಕ್ಷಮೆಯಾಚಿಸಿದರೆ, ಅದರಿಂದಲೇ ಹಿನ್ನಡೆಯಾಯಿತು ಎಂದು ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡಿದ್ದರು. ಧರ್ಮ ವಿಭಜನೆ ವಿರುದ್ಧವಿರುವ ಬಿಜೆಪಿ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ್ದರೆ, ರಾಜಕೀಯ ಹಿನ್ನಡೆಯ ಭಯವಿರುವ ಕಾಂಗ್ರೆಸ್ ಮೌನ ವಹಿಸಿದೆ. ಜೆಡಿಎಸ್ ಎಂದಿನಂತೆ ತಟಸ್ಥವಾಗಿದೆ.

ಹೈಕೋರ್ಟ್​ಗೆ ವಿವರ ಸಲ್ಲಿಕೆ

ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಕೇಂದ್ರ ಗೃಹ ಸಚಿವಾಲಯ ನ.13ರಂದು ಬರೆದಿರುವ ಪತ್ರವನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ಕೆ. ನಾವದಗಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಸೋಮವಾರ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಧರ್ಮದ ವಿಚಾರವಾಗಿ ಸಲ್ಲಿಕೆಯಾಗಿದ್ದ 4 ಪ್ರತ್ಯೇಕ ಅರ್ಜಿಗಳನ್ನು ವಿಚಾರಣೆ ಮಾಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್. ಸುಜಾತಾ ಅವರಿದ್ದ ವಿಭಾಗೀಯ ನ್ಯಾಯಪೀಠ, ಕೇಂದ್ರ ಸರ್ಕಾರದ ಮೆಮೊ ದಾಖಲಿಸಿಕೊಂಡು ಅರ್ಜಿಗಳನ್ನು ಇತ್ಯರ್ಥಪಡಿಸಿತು.

ಕೇಂದ್ರ ನೀಡಿದ ಕಾರಣ

ವೀರಶೈವ ಲಿಂಗಾಯತರು ಹಿಂದು ಧರ್ಮದ ಶಾಖೆ ಎಂಬುದನ್ನು ಹಿಂದಿನಿಂದಲೂ ಒಪ್ಪಿಕೊಂಡು ಬರಲಾಗಿದೆ. 1871ರಲ್ಲಿ ನಡೆಸಲಾದ ಮೊದಲ ಜನಗಣತಿಯಲ್ಲೇ ಹಿಂದು ಧರ್ಮದ ಅವಿಭಾಜ್ಯ ಅಂಗ ಎಂದು ಪರಿಗಣಿಸಲಾಗಿದೆ. ಒಂದು ವೇಳೆ ರಾಜ್ಯ ಸರ್ಕಾರದ ಶಿಫಾರಸನ್ನು ಮಾನ್ಯ ಮಾಡಿದರೆ ಈಗಾಗಲೇ ವೀರಶೈವ ಲಿಂಗಾಯತ ಪಂಗಡಗಳಲ್ಲಿ ಪರಿಶಿಷ್ಟ ಜಾತಿ ಅನ್ವಯ ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿರುವವರು ಅದರಿಂದ ವಂಚಿತರಾಗುತ್ತಾರೆ ಎಂಬ ಕಾರಣಗಳನ್ನು ಕೊಟ್ಟು ಕೇಂದ್ರ ಸರ್ಕಾರ ರಾಜ್ಯದ ಶಿಫಾರಸನ್ನು ವಾಪಸ್ ಕಳುಹಿಸಿದೆ.


ಕಾಂಗ್ರೆಸ್ ಸರ್ಕಾರ ಕಳಿಸಿದ್ದ ಪ್ರಸ್ತಾವನೆ

ಲಿಂಗಾಯತ ಪ್ರತ್ಯೇಕ ಧರ್ಮ ಕುರಿತು ಪರಿಶೀಲಿಸಲು ಹಿಂದಿನ ಕಾಂಗ್ರೆಸ್ ಸರ್ಕಾರ, ನ್ಯಾ.ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಸಮಿತಿ 5000 ಪುಟಗಳ ದಾಖಲೆ ಸಹಿತ 200 ಪುಟಗಳ ವರದಿಯನ್ನು ಮಾರ್ಚ್​ನಲ್ಲಿ ಸರ್ಕಾರಕ್ಕೆ ಸಲ್ಲಿಸಿತ್ತು.

ಸಚಿವ ಸಂಪುಟದಲ್ಲಿ ವರದಿ ಮಂಡಿಸಿ ಕೇಂದ್ರ ಸರ್ಕಾರಕ್ಕೆ ಕಳಿಸಲಾಗಿತ್ತು. ಲಿಂಗಾಯತ, ಬಸವಣ್ಣನ ತತ್ತ್ವ ಅನುಸರಿಸುವ ವೀರಶೈವ ಲಿಂಗಾಯತರಿಗೆ ಅಲ್ಪಸಂಖ್ಯಾತರ ಆಯೋಗದ ಕಾಯ್ದೆ 2 (ಸಿ) ಪ್ರಕಾರ ಅಲ್ಪಸಂಖ್ಯಾತರ ಸ್ಥಾನಮಾನ ನೀಡುವಂತೆ ಶಿಫಾರಸು ಮಾಡಲಾಗಿತ್ತು.

ಪ್ರಸ್ತಾವ ವಿರೋಧಿಸಿ 4 ಪಿಐಎಲ್: ಪ್ರತ್ಯೇಕ ಧರ್ಮದ ಪ್ರಸ್ತಾವ ವಿರೋಧಿಸಿ ಹೈಕೋರ್ಟ್​ನಲ್ಲಿ 4 ಪ್ರತ್ಯೇಕ ಪಿಐಎಲ್ ಸಲ್ಲಿಕೆಯಾಗಿದ್ದವು. ನ್ಯಾ. ಎಚ್.ಎನ್. ನಾಗಮೋಹನ ದಾಸ್ ನೇತೃತ್ವದ ತಜ್ಞರ ಸಮಿತಿ ಸಂಬಂಧ ರಾಜ್ಯ ಅಲ್ಪಸಂಖ್ಯಾತ ಆಯೋಗ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕು ಎಂದು ಶಿಕಾರಿಪುರ ತಾಲ್ಲೂಕಿನ ತರಳಘಟ್ಟ ಗ್ರಾಮದ ಶಶಿಧರ ಶಾನಭೋಗ, ತಜ್ಞರ ಸಮಿತಿಗೆ ವೀರಶೈವ ಬಣ ನೀಡಿದ್ದ 2 ಸಾವಿರ ಪುಟಗಳ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿಲ್ಲ ಎಂದು ಬೆಂಗಳೂರಿನ ಬಿ.ಎಸ್. ನಟರಾಜ್, ತಜ್ಞರ ಸಮಿತಿ ನೇಮಕ ಸಂವಿಧಾನದ ಬಾಹಿರ ಎಂದು ಎನ್.ಪಿ. ಅಮೃತೇಶ್ ಹಾಗೂ ಎಂ.ಸತೀಶ್, ಹಿಂದು ಧರ್ಮವನ್ನು ವಿಭಜಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಪ್ರತ್ಯೇಕ ಪಿಐಎಲ್​ಗಳು ಸಲ್ಲಿಕೆಯಾಗಿದ್ದವು.

ಪುನರ್ ಪರಿಶೀಲನೆಗೆ ಆಗ್ರಹ: ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಭಾರಿ ಮುಖಭಂಗ ಅನುಭವಿಸಿರುವ ಜಾಗತಿಕ ಲಿಂಗಾಯತ ಮಹಾಸಭಾ, ಕೇಂದ್ರ ಸರ್ಕಾರವು ತನ್ನ ನಿಲುವನ್ನು ಪುನರ್ ಪರಿಶೀಲಿಸದಿದ್ದಲ್ಲಿ ಕಾನೂನು ಹೋರಾಟಕ್ಕೆ ಇಳಿಯುವುದಾಗಿ ಎಚ್ಚರಿಕೆ ನೀಡಿದೆ.

ರಾಜ್ಯ ಸರ್ಕಾರ ಸರಿಯಾದ ರೀತಿಯಲ್ಲಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಪ್ರತ್ಯೇಕ ಮಾನ್ಯತೆ ನೀಡಿದಲ್ಲಿ ಎಸ್​ಸಿ-ಎಸ್​ಟಿ ಸ್ಥಾನಮಾನ ಕಳೆದುಕೊಳ್ಳಬೇಕಾತ್ತದೆ ಎಂಬ ಕೇಂದ್ರದ ಮಾಹಿತಿ ಸರಿಯಿಲ್ಲ. ಹಿಂದಿನ ನಿಲುವಿಗೆ ಈಗಲೂ ಬದ್ಧ ಎಂದು ಲಿಂಗಾಯತ ಮುಖಂಡರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದರು.

ಧರ್ಮ ವಿಭಜನೆಯ ಕೆಲಸಕ್ಕೆ ಕೈಹಾಕಿದ್ದು ತಪ್ಪು ನಿರ್ಧಾರ ಎಂದು ಮೊದಲು ಸಚಿವ ಡಿ.ಕೆ. ಶಿವಕುಮಾರ್ ಒಪ್ಪಿಕೊಂಡರು. ನಂತರ ಮಾಜಿ ಸಿಎಂ ಸಿದ್ದರಾಮಯ್ಯ ಸಹ ಅದನ್ನು ಒಪ್ಪಿಕೊಂಡರು. ಈಗ ಅವರಿಗೆ ತೀವ್ರ ಹಿನ್ನಡೆಯಾಗಿದೆ.

| ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ


ವೀರಶೈವ-ಲಿಂಗಾಯತ ಒಂದೇ ಎಂದ ಕೇಂದ್ರ

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮವೆಂದು ಪರಿಗಣಿಸಿ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕು ಎಂಬ ಈ ಹಿಂದಿನ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವುದಕ್ಕೆ ಸ್ವಾಗತ ವ್ಯಕ್ತವಾಗಿದೆ.

ಪಂಚಪೀಠಾಧೀಶ್ವರರು, ಬಿಜೆಪಿಯವರು ಈ ನಿರ್ಧಾರವನ್ನು ಸ್ವಾಗತಿಸಿದ್ದರೂ, ಕಳೆದ ವಿಧಾನಸಭೆ ಚುನಾವಣೆ ವೇಳೆ ಈ ವಿಚಾರದಲ್ಲಿ ಸಾಕಷ್ಟು ಆಸಕ್ತಿ ವಹಿಸಿದ್ದ ಕಾಂಗ್ರೆಸ್ ಹಾಗೂ ಕಾಂಗ್ರೆಸ್​ನಲ್ಲಿ ಇದ್ದೇ ವಿರೋಧಿಸಿದ್ದವರು ಸ್ಪಷ್ಟ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ವೀರಶೈವ-ಲಿಂಗಾಯತ ಯಾವತ್ತಿಗೂ ಒಂದೇ, ಬೇರೆಬೇರೆ ಆಗಲು ಸಾಧ್ಯವಿಲ್ಲ. ಅವು ಒಂದೇ ನಾಣ್ಯದ ಎರಡು ಮುಖಗಳು. ವೀರಶೈವ ಪಾರಿಭಾಷಿಕ ಶಬ್ದ, ಲಿಂಗಾಯತ ರೂಢವಾಚಕ ಶಬ್ದ ಎಂದು ಉಜ್ಜಯಿನಿ ಸದ್ಧರ್ಮ ಪೀಠದ ಶ್ರೀಮದ್ ಉಜ್ಜಯಿನಿ ಸಿದ್ದಲಿಂಗ ಶಿವಚಾರ್ಯ ರಾಜದೇಶಿ ಕೇಂದ್ರ ಜಗದ್ಗುರುಗಳು ಹೇಳಿದ್ದಾರೆ.

ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವುದು ಉತ್ತಮ ನಿರ್ಣಯ. ಈ ಮೂಲಕ ಪ್ರತ್ಯೇಕ ಧರ್ಮಕ್ಕೆ ಬೇಡಿಕೆ ಇಟ್ಟವರಿಗೆ ಸೂಕ್ತ ಸಂದೇಶ ನೀಡಿದಂತಾಗಿದೆ ಎಂದು ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಮುಂಡರಗಿಯಲ್ಲಿ ಹೇಳಿದ್ದಾರೆ. ಪ್ರತ್ಯೇಕ ಧರ್ಮವನ್ನಾಗಿ ಘೊಷಿಸುವ ಕುರಿತು ಸರ್ಕಾರದ ಮೇಲೆ ಒತ್ತಡ ಹೇರಿದ ಮುಖಂಡರಿಗಾಗಲಿ ಅಥವಾ ಸರ್ಕಾರಕ್ಕಾಗಲಿ ಯಾವುದೇ ಸ್ಪಷ್ಟ ಗುರಿ ಇರಲಿಲ್ಲ ಎಂದಿದ್ದಾರೆ.

ಕೇಂದ್ರದ ನಿರ್ಧಾರವನ್ನು ಮಾಜಿ ಸಿಎಂ ಜಗದೀಶ ಶೆಟ್ಟರ್ ಸಹ ಸ್ವಾಗತಿಸಿದ್ದು, ಧರ್ಮದ ವಿಚಾರದಲ್ಲಿ ಲಾಭ ಮಾಡಿಕೊಳ್ಳಲು ಮುಂದಾಗಿದ್ದಕ್ಕೆ ಜನರೇ ಕಾಂಗ್ರೆಸ್​ಅನ್ನು ತಿರಸ್ಕರಿಸಿದ್ದಾರೆ. ಪ್ರಧಾನಿ ಮೋದಿ ಅವರ ಮೇಲೆ ಭಾರ ಹಾಕಿ ಲಾಭ ಮಾಡಿಕೊಳ್ಳಲು ಮುಂದಾಗಿದ್ದಕ್ಕೆ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಿದ್ದಾರೆ.

ಕೇಂದ್ರದ ನಿರ್ಧಾರ ಸ್ವಾಗತಾರ್ಹ

ಹುಬ್ಬಳ್ಳಿ: ಲಿಂಗಾಯತ ಪ್ರತ್ಯೇಕ ಧರ್ಮ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವುದು ಸ್ವಾಗತಾರ್ಹ ಎಂದು ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ಹೇಳಿದೆ. ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ನಾವದಗಿ ಅವರು ಪ್ರತ್ಯೇಕ ಧರ್ಮದ ಪ್ರಸ್ತಾವನೆ ತಿರಸ್ಕರಿಸಿರುವ ಕುರಿತು ಹೈಕೋರ್ಟ್​ಗೆ ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ವೀರಶೈವ ಲಿಂಗಾಯತ ಒಂದೇ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಲಿಂಗಾಯತ ಧರ್ಮ ಹಿಂದು ಧರ್ಮದ ಭಾಗವೆಂದು ಸ್ಪಷ್ಟನೆ ನೀಡಿದ್ದು, ಸತ್ಯಕ್ಕೆ ಸಿಕ್ಕ ಜಯ ಎಂದು ಸಂಸ್ಥೆ ಅಧ್ಯಕ್ಷ ಪ್ರಕಾಶ ಬೆಂಡಿಗೇರಿ ತಿಳಿಸಿದ್ದಾರೆ. ಕೇಂದ್ರದ ನಿರ್ಧಾರ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಶೀಘ್ರ ವಿಜಯೋತ್ಸವ ಆಚರಿಸಲಾಗುವುದು ಎಂದು ಸಂಸ್ಥೆಯ ಹುಬ್ಬಳ್ಳಿ ಘಟಕ ತಿಳಿಸಿದೆ.

ಪ್ರತ್ಯೇಕ ಧರ್ಮದ ವಿಷಯದಲ್ಲಿ ಕೈಹಾಕಿದ್ದು ತಪ್ಪಾಗಿದೆ ಎಂದು ಸಚಿವ ಡಿ.ಕೆ. ಶಿವಕುಮಾರ್ ಒಪ್ಪಿಕೊಂಡಿದ್ದಾರೆ. ತಾವು ಇದನ್ನು ಮಾಡಬಾರದಿತ್ತು ಎಂದು ಸಿದ್ದರಾಮಯ್ಯ ಕೂಡ ಹೇಳಿದ್ದಾರೆ. ಕೇವಲ ರಾಜಕೀಯ ಲಾಭಕ್ಕಾಗಿ ಲಿಂಗಾಯತ ಪ್ರತ್ಯೇಕ ಧರ್ಮ ಮಾಡಲು ಮುಂದಾಗಿದ್ದರು. ಮುಖಭಂಗ ಆದಮೇಲೆ ಅವರಿಗೆ ಅರ್ಥ ಆಗಿದೆ. ಪ್ರತ್ಯೇಕ ಧರ್ಮ ಅಸಾಧ್ಯವೆಂದು ಕೇಂದ್ರ ಪ್ರಸ್ತಾವನೆಯನ್ನು ತಿರಸ್ಕರಿಸಿದೆ.

| ಬಿ.ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

 

ಪ್ರತ್ಯೇಕತೆಯ ವಿವಾದದ ಹಾದಿ

 • ಮಾರ್ಚ್ 2017: ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣ ಭಾವಚಿತ್ರ ಕಡ್ಡಾಯ ಮಾಡಿದ ಸರ್ಕಾರ
 • ಮೇ 2017- ಅಂದಿನ ಸಿಎಂ ಸಿದ್ದರಾಮಯ್ಯಗೆ ಅರಮನೆ ಮೈದಾನದಲ್ಲಿ ಸನ್ಮಾನ, ಪ್ರತ್ಯೇಕ ಧರ್ಮಕ್ಕೆ ಬೇಡಿಕೆ. ಕೋರಿಕೆ ಸಲ್ಲಿಕೆಗೆ ಸೂಚಿಸಿದ ಸಿಎಂ.
 • ಜುಲೈ 2017- ಪ್ರತ್ಯೇಕ ಧರ್ಮ ಬೇಡಿಕೆ ಬೆಂಬಲಿಸಿ ಸಮಾವೇಶಗಳಿಗೆ ಚಾಲನೆ.
 • ನವೆಂಬರ್ 2017- ನ್ಯಾ. ನಾಗಮೋಹನದಾಸ್ ನೇತೃತ್ವದಲ್ಲಿ ಸಿ.ಎಸ್. ದ್ವಾರಕಾನಾಥ್, ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಮುಜಫರ್ ಅಸಾದಿ, ರಾಮಕೃಷ್ಣ ಮರಾಠೆ, ಪುರುಷೋತ್ತಮ ಬಿಳಿಮಲೆ ಸಮಿತಿ ರಚನೆ.
 • ಜನವರಿ 2018- ಪ್ರತ್ಯೇಕ ಧರ್ಮ ಪರ-ವಿರೋಧವಾಗಿ 16 ಮನವಿ ಸಲ್ಲಿಕೆ.
 • ಜನವರಿ 2018- ನ್ಯಾ. ನಾಗಮೋಹನದಾಸ್ ಸಮಿತಿ ಅವಧಿ ಆರು ತಿಂಗಳು ವಿಸ್ತರಣೆ.
 • ಮಾರ್ಚ್ 2018- ಪ್ರತ್ಯೇಕ ಧರ್ಮ ಮನವಿ ತಿರಸ್ಕರಕ್ಕೆ ವೀರಶೈವ ಮಠಾಧೀಶರ ಪರಿಷತ್ ಆಗ್ರಹ.
 • ಮಾರ್ಚ್ 2018- ಪ್ರತ್ಯೇಕ ಧರ್ಮ ಬೇಡಿಕೆಗೆ ಸ್ಪಂದಿಸಿ ಸಮಿತಿಯಿಂದ ವರದಿ ಸಲ್ಲಿಕೆ.
 • ಮಾರ್ಚ್ 2018- ಸಮಿತಿ ವರದಿಗೆ ಸಂಪುಟ ಅಸ್ತು, ಕೇಂದ್ರಕ್ಕೆ ರವಾನೆ.
 • ನವೆಂಬರ್ 2018- ಪ್ರಸ್ತಾವನೆ ತಿರಸ್ಕರಿಸಿದ ಕೇಂದ್ರ ಸರ್ಕಾರ.
 • ಡಿಸೆಂಬರ್ 2018- ಕೇಂದ್ರದ ನಿರ್ಧಾರದ ಕುರಿತು ಹೈಕೋರ್ಟ್​ಗೆ ಮಾಹಿತಿ ನೀಡಿದ ರಾಜ್ಯ ಸರ್ಕಾರ

ಕೇಂದ್ರದ ನಿಲುವಿಗೆ ವಿರೋಧ

ಗದಗ: ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಕರ್ನಾಟಕ ಸರ್ಕಾರ ಮಾಡಿರುವ ಶಿಫಾರಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವುದು ವಿವೇಚನಾರಹಿತ ಕ್ರಮ. ಇದು ಸಮಸ್ತ ಲಿಂಗಾಯತರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ. ಇದೊಂದು ಸಂವಿಧಾನ ವಿರೋಧಿ ಕ್ರಮ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಖಂಡಿಸಿದ್ದಾರೆ.

ಲಿಂಗಾಯತರು ಸ್ವತಂತ್ರ ಧರ್ಮದ ಮಾನ್ಯತೆ ಕೇಳುತ್ತಿರುವುದು ಭಿಕ್ಷೆಯಲ್ಲ. ಅದು ಲಿಂಗಾಯತರ ಸಂವಿಧಾನಬದ್ಧ ಹಕ್ಕು. ಕೇಂದ್ರ ಸರ್ಕಾರವು ಈ ಧರ್ಮಕ್ಕೆ ಮಾನ್ಯತೆ ನೀಡುವ ಮೂಲಕ ಕೋಟ್ಯಂತರ ಲಿಂಗಾಯತರ ಭಾವನೆಗಳನ್ನು ಗೌರವಿಸಬೇಕಾಗಿತ್ತು. ಲಿಂಗಾಯತ ಧರ್ಮದ ಮಾನ್ಯತೆಗಾಗಿ ನಡೆದಿರುವ ಹೋರಾಟವು ಜೈನ್, ಬೌದ್ಧ, ಸಿಖ್ ಧರ್ವಿುಯರಂತೆ ಲಿಂಗಾಯತರ ಅಸ್ಮಿತೆಯ ಹೋರಾಟ. ಬಸವಣ್ಣನವರ ಕುರಿತು ಸಾಕಷ್ಟು ಅಧ್ಯಯನ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕ ಸರ್ಕಾರದ ಪ್ರಸ್ತಾವನೆ ತಿರಸ್ಕರಿಸಿರುವುದು ಆಶ್ಚರ್ಯ ಮತ್ತು ಆಘಾತ ಉಂಟು ಮಾಡಿದೆ. ಲಿಂಗಾಯತ ಧರ್ಮವು ತಾತ್ವಿಕವಾಗಿ ಸಾಮಾಜಿಕವಾಗಿ ಹಿಂದು ಧರ್ಮಕ್ಕಿಂತ ಸಂಪೂರ್ಣವಾಗಿ ಭಿನ್ನ. ಈ ಧರ್ಮವನ್ನು ಸ್ವತಂತ್ರ ಧರ್ಮವೆಂದು ಮಾನ್ಯ ಮಾಡುವುದರಿಂದ ಈ ಧರ್ಮದ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಅಲ್ಲದೆ ದೇಶದ ಯಾವುದೇ ಸಮುದಾಯವು ಈ ರೀತಿ ಸ್ವತಂತ್ರಧರ್ಮದ ಮಾನ್ಯತೆಯನ್ನೂ ಕೇಳಲು ಸಾಧ್ಯವಿಲ್ಲ. ಏಕೆಂದರೆ ಲಿಂಗಾಯತ ಧರ್ಮದ ತಾತ್ವಿಕ ನೆಲೆಗಟ್ಟು ಯಾವ ಸಮುದಾಯಕ್ಕೂ ಇಲ್ಲ. ಹೀಗಾಗಿ ಪ್ರಸ್ತಾವನೆಯನ್ನು ತಿರಸ್ಕರಿಸಿದ ಕ್ರಮ ಸೂಕ್ತವಲ್ಲ. ಬರುವ ಚುನಾವಣೆಯಲ್ಲಿ ಕೇಂದ್ರ ಸರ್ಕಾರ ಇದರ ಪರಿಣಾಮ ಎದುರಿಸಬೇಕಾಗುತ್ತದೆ. ಈಗಲೂ ಕಾಲಮಿಂಚಿಲ್ಲ ಕೇಂದ್ರ ಸರ್ಕಾರ ತಿರಸ್ಕೃತ ಪ್ರಸ್ತಾವನೆಯನ್ನು ಪುನಃ ಪರಿಶೀಲಿಸಬೇಕೆಂದು ಶ್ರೀಗಳು ಒತ್ತಾಯಿಸಿದ್ದಾರೆ.

ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಒಪ್ಪಲು ಸಾಧ್ಯವಿಲ್ಲ ಎಂದಿರುವ ಕೇಂದ್ರ ಸರ್ಕಾರದ ನಿಲುವು ಅರ್ತಾಕ. ಕೇಂದ್ರ ತಿಳಿಸಿರುವಂತೆ, 1871ರ ಜನಗಣತಿ ವೇಳೆ ಲಿಂಗಾಯತರು ಹಿಂದು ಧರ್ಮದ ಭಾಗವಾಗಿರಲಿಲ್ಲ. ಅಂದು ಲಿಂಗಾಯತ, ಸ್ವತಂತ್ರ ಧರ್ಮದ ಮಾನ್ಯತೆ ಹೊಂದಿತ್ತು ಎಂಬುದು ಗಮನಾರ್ಹ.

| ಎಂ.ಬಿ. ಪಾಟೀಲ್, ಮಾಜಿ ಸಚಿವ


ಪ್ರತಿಕ್ರಿಯಿಸಲು ಹಿಂಜರಿಯುತ್ತಿರುವ ಕಾಂಗ್ರೆಸ್

ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಕೋರಿಕೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸುವ ಕುರಿತಂತೆ ಕಾಂಗ್ರೆಸ್ ಪಕ್ಷದ ಪರ-ವಿರೋಧ ಎರಡೂ ಬಣಗಳು ಗಟ್ಟಿಧ್ವನಿಯಲ್ಲಿ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕುತ್ತಿವೆ.

ರಾಜ್ಯ ಸರ್ಕಾರದ ಪ್ರಸ್ತಾವವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ ಎಂಬ ವಿಷಯವನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ.ಬಿ.ನಾವದಗಿ ಹೈಕೋರ್ಟ್ ಎದುರು ಬಹಿರಂಗಪಡಿಸಿದ ಬೆನ್ನಲ್ಲೇ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಪಾಲ್ಗೊಂಡಿರುವ ಕಾಂಗ್ರೆಸ್ ಪಕ್ಷದ ಪರ-ವಿರೋಧ ಬಣಗಳ ಮುಖಂಡರು ತಕ್ಷಣ ಪ್ರತಿಕ್ರಿಯಿಸಲು ಹಿಂದೇಟು ಹಾಕಿದರು.

ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಡಿ.ಕೆ. ಶಿವಕುಮಾರ್ ಲಿಂಗಾಯತ ಧರ್ಮದ ವಿಚಾರದಲ್ಲಿ ಆಗಿರುವ ಲೋಪವನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ಏನೇ ಪ್ರತಿಕ್ರಿಯೆ ನೀಡಿದರೂ ಕಾಂಗ್ರೆಸ್ ಪಕ್ಷಕ್ಕೆ ಹಿಂದೇಟು ಆಗುತ್ತದೆ ಎಂಬುದು ಮುಖಂಡರ ಲೆಕ್ಕಾಚಾರ. ಹೀಗಾಗಿ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಹಾರಿಕೆ ಉತ್ತರ ನೀಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಈಶ್ವರ್ ಖಂಡ್ರೆ ಮಾತನಾಡಿ, ಮೊದಲಿನಿಂದಲೂ ವೀರಶೈವ ಮತ್ತು ಲಿಂಗಾಯತ ಒಂದೇ ಎಂಬ ಭಾವನೆ ನಮ್ಮದು. ಎಲ್ಲ ಉಪಜಾತಿಗಳೂ ಒಟ್ಟಾಗಿ ಹೋಗಬೇಕು ಎಂಬುದು ನಮ್ಮ ನಿಲುವು. ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ನನಗೆ ಯಾವುದೇ ಅಭಿಪ್ರಾಯ ಇಲ್ಲ ಎನ್ನುವ ಮೂಲಕ ಅಂತರ ಕಾಪಾಡಿಕೊಳ್ಳಲು ಯತ್ನಿಸಿದರು. ಪ್ರತ್ಯೇಕ ಧರ್ಮದ ವಿಚಾರಕ್ಕೆ ಕೈಹಾಕಿದ್ದಕ್ಕೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದ ಸಚಿವ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಸೇರಿ ಅನೇಕರು ಪ್ರತಿಕ್ರಿಯೆ ನೀಡುತ್ತಿಲ್ಲ.

ಶಿಫಾರಸು ತಿರಸ್ಕಾರ ಎಚ್ಚರಿಕೆ ಗಂಟೆ

ಪ್ರತ್ಯೇಕ ಲಿಂಗಾಯತ ಧರ್ಮ ಕುರಿತ ಶಿಫಾರಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವುದು ಎಚ್ಚರಿಕೆಯ ಗಂಟೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಎಂದು ಪ್ರತಿಕ್ರಿಯಿಸಿದ್ದಾರೆ.ವೀರಶೈವ-ಲಿಂಗಾಯತ ಬೇರೆಬೇರೆಯಲ್ಲ ಎಂದು ಮಹಾಸಭಾ ಹಿಂದಿನಿಂದಲೂ ಪ್ರತಿಪಾದಿಸುತ್ತ ಬಂದಿದೆ. ನಾವು ಬೇರೆಬೇರೆ ಎನ್ನುವ ಬದಲು ವೀರಶೈವ-ಲಿಂಗಾಯತ ಧರ್ಮಕ್ಕೆ ಮಾನ್ಯತೆ ಪಡೆಯಲು ಸಂಘಟನಾತ್ಮಕ ಹೋರಾಟ ಮಾಡಬಹುದಿತ್ತು ಎಂದರು.

Leave a Reply

Your email address will not be published. Required fields are marked *