ತೀರ್ಥಹಳ್ಳಿ: ರಾಜ್ಯದ ಜನತೆ ಭೀಕರ ಬರಗಾಲವನ್ನು ಎದುರಿಸುತ್ತಿರುವ ಸಂಕಷ್ಟದ ಕಾಲಘಟ್ಟದಲ್ಲಿ, ನಾಡಿನ ಜನತೆಯ ಭಾವನೆಯನ್ನು ಧಿಕ್ಕರಿಸಿ ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದು ಖಂಡನೀಯ. ಈ ಕೂಡಲೇ ತಮಿಳುನಾಡಿಗೆ ನೀರು ಬಿಡುವುದನ್ನು ಸ್ಥಗಿತಗೊಳಿಸಬೇಕು ಎಂದು ಕರವೇ ತಾಲೂಕು ಅಧ್ಯಕ್ಷ ಯಡೂರು ಸುರೇಂದ್ರ ಗೌಡ ಆಗ್ರಹಿಸಿದರು.
ಸೋಮವಾರ ತಾಲೂಕು ಕಚೇರಿ ಎದುರು ನಡೆಸಿದ ಪ್ರತಿಭಟನಾ ಸಭೆಯ ನೇತೃತ್ವ ವಹಿಸಿ ಮಾತನಾಡಿ, ಕಾವೇರಿ ನೀರು ಪ್ರಾಧಿಕಾರದ ಆದೇಶ ಅವೈಜ್ಞಾನಿಕವಾಗಿದೆ. ಕಾವೇರಿ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಜ್ಯದ ಜನತೆಯ ಹಿತಕ್ಕೆ ವಿರುದ್ಧವಾಗಿ ರಾಜಕೀಯ ನಿಲುವು ತಾಳಿವೆ. ರಾಜ್ಯದ ಮುಕ್ಕಾಲು ಭಾಗದ ಜನರು ತೀವ್ರ ಬರದಿಂದ ತತ್ತರಿಸಿದ್ದಾರೆ. ಕಾವೇರಿ ಪ್ರಾಧಿಕಾರದ ಆದೇಶವನ್ನು ಪಾಲಿಸುವಂತೆ ಸುಪ್ರೀಂಕೋರ್ಟ್ ಆದೇಶವನ್ನು ಸರ್ಕಾರ ತಿರಸ್ಕರಿಸಬೇಕು. ಕಾವೇರಿ ನದಿ ನೀರಿನ ಹಂಚಿಕೆಗೆ ಸಂಬಂಧಿಸಿ ವಿಶೇಷ ಅಧಿಕಾರವುಳ್ಳ ಸ್ವತಂತ್ರ ಸಮಿತಿಯನ್ನು ರಚಿಸುವಂತೆ ಒತ್ತಾಯಿಸುವ ಅಗತ್ಯವಿದೆ ಎಂದು ಒತ್ತಾಯಿಸಿದರು.
ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಪಟೇಲ್ ವೆಂಕಟೇಶ ಹೆಗ್ಡೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಅಧಿಕಾರವಧಿಯಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ಧಿಕ್ಕರಿಸಿ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ನಿಲ್ಲಿಸಿದ್ದರು. ಮಳೆ ಕೊರತೆಯಿಂದಾಗಿ ಕಾವೇರಿ ನದಿಯಲ್ಲಿ ನೀರಿನ ಕೊರತೆ ಇರುವ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯದ ಜನತೆಯ ಹಿತ ಕಾಪಾಡುವ ಅಗತ್ಯವಿದೆ ಎಂದರು.
ಪ್ರಮುಖರಾದ ಪಡುವಳ್ಳಿ ಹರ್ಷೇಂದ್ರಕುಮಾರ್, ಜ್ಯೋತಿ ದಿಲೀಪ್, ಮಲ್ಲಕ್ಕಿ ರಾಘವೇಂದ್ರ, ಶ್ರೀಕಾಂತ್, ಸುರೇಶ್, ಮಹಮ್ಮದ್, ಅರ್ಜುನ್, ಚಂದ್ರಶೇಖರ್, ಆದರ್ಶ, ಲಕ್ಷ್ಮೀದೇವಿ, ನಾಗವೇಣಿ ಇತರರಿದ್ದರು.