ಮಂಡ್ಯದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ

ಮಂಡ್ಯ: ನಿರೀಕ್ಷೆಯಂತೆ ಹರಿದು ಬಂದ ಜನಸಾಗರ, ಎತ್ತ ನೋಡಿದರೂ ಜೆಡಿಎಸ್ ಬಾವುಟ, ಮೊಳಗಿದ ಜೈಕಾರ, ಕವಿಗಡಚಿಕ್ಕುವ ಪಟಾಕಿಗಳ ಸದ್ದಿನೊಂದಿಗೆ ಸಿಎಂ ಕುಮಾರಸ್ವಾಮಿ, ಅಭ್ಯರ್ಥಿ ನಿಖಿಲ್ ಸೇರಿ ಹಲವು ಗಣ್ಯರು ಮೆರವಣಿಗೆ ನಡೆಸುವ ಮೂಲಕ ಜೆಡಿಎಸ್ ನಾಯಕರು ಶಕ್ತಿ ಪ್ರದರ್ಶನ ಮಾಡಿದರು.

ನಿಗದಿಯಂತೆ 11 ಗಂಟೆಗೆ ಬರಬೇಕಿದ್ದ ನಿಖಿಲ್ ಹಾಗೂ ನಾಯಕರು 12 ಗಂಟೆಗೆ ಕಾಳಿಕಾಂಬ ದೇವಸ್ಥಾನಕ್ಕೆ ಆಗಮಿಸಿ ಬಿ ಫಾರಂ ಅನ್ನು ದೇವಿ ಬಳಿ ಇಟ್ಟು ಪೂಜೆ ಸಲ್ಲಿಸಿದ ನಿಖಿಲ್ ಜನರ ಆಶೀರ್ವಾದ ಪಡೆಯಲು ಹೋಗುತ್ತಿದ್ದೇನೆ, ಆಶೀರ್ವದಿಸಿ ಎಂದು ದೇವಿಯನ್ನು ಕೇಳಿಕೊಂಡರು.

ನಂತರ ಬೃಹತ್ ಮೆರವಣಿಗೆಗೆ ಸಿಎಂ ಕುಮಾರಸ್ವಾಮಿ ಚಾಲನೆ ನೀಡಿದರು. ಇದಕ್ಕೂ ಮುನ್ನ ದೇವಾಲಯದಿಂದ ಹೊರಬಂದ ನಿಖಿಲ್ ಅವರನ್ನು ಕಾರ್ಯಕರ್ತರು ಹೆಗಲ ಮೇಲೆ ಕೂರಿಸಿಕೊಂಡು ತೆರೆದ ವಾಹನಕ್ಕೆ ಹತ್ತಿಸಿ ಜೈಕಾರ ಮೊಳಗಿಸಿದರು. ಈ ವೇಳೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಹೂಮಳೆ ಸುರಿಸಿದರು.
ಕಾಳಿಕಾಂಬ ದೇವಸ್ಥಾನದಿಂದ ಎಸ್.ಡಿ. ಜಯರಾಂ ವೃತ್ತದವರೆಗೆ ಕಿಕ್ಕಿರಿದು ಜನರು ಜಮಾಯಿಸಿದ್ದರು. ಅಭಿಮಾನಿಯೊಬ್ಬ ವಿದ್ಯುತ್ ಕಂಬ ಹತ್ತಿ ಜೆಡಿಎಸ್ ಬಾವುಟ ಹಾರಿಸುತ್ತಿದ್ದದ್ದನ್ನು ಗಮನಿಸಿದ ಸಿಎಂ ಕೈ ಬೀಸಿ ಕೆಳಗಿಳಿಯುವಂತೆ ಸೂಚಿಸಿದರು.

ಅಲ್ಲಿಂದ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಮೆರವಣಿಗೆ ಸಾಗಿತು. ಜಯಚಾಮರಾಜೆಂದ್ರ ವೃತ್ತದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಮೆರವಣಿಗೆಗೆ ಸೇರಿಕೊಂಡರು. ರಸ್ತೆಯ ಇಕ್ಕೆಲಗಳಲ್ಲಿ ಸಹಸ್ರಾರು ಜನತೆ ನಿಂತು ಜೈಕಾರ ಮೊಳಗಿಸಿ ಸ್ವಾಗತಿಸಿದರು.

ಮೈತ್ರಿ ಅಭ್ಯರ್ಥಿ ಎಂದು ಕಾಂಗ್ರೆಸ್ ಸಾರಿ ಸಾರಿ ಹೇಳುತ್ತಿದ್ದರೂ ರ‌್ಯಾಲಿಯಲ್ಲಿ ಕಾಂಗ್ರೆಸ್‌ನ ಬಾವುಟಗಳು ಅಪರೂಪಕ್ಕೆ ಕಂಡವು. ವೇದಿಕೆ ಬಳಿ ಕೂಡ ಒಂದೆರಡು ಬಾವುಟಗಳಷ್ಟೇ ಕಾಣಿಸಿದ್ದು ಗಮರ್ನಾರ್ಹ.

ಗಮನ ಸೆಳೆದ ಚಂಡೆ ವಾದ್ಯ: ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿ ಗಮನ ಸೆಳೆದವು. ಪ್ರಮುಖವಾಗಿ ಕೇರಳದ ಚಂಡೆವಾದ್ಯ ತಂಡ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಚಂಡೆ ನಾದಕ್ಕೆ ಹಲವು ಜನತೆ ಹೆಜ್ಜೆ ಹಾಕಿದರು. ಇದಲ್ಲದೆ ಕೀಲುಗೊಂಬೆಗಳು, ತಮಟೆ, ಡೊಳ್ಳು, ನಗಾರಿಗಳ ಸದ್ದು ಜೋರಾಗಿತ್ತು.

ನಿಷೇಧಾಜ್ಞೆ ಲೆಕ್ಕಕ್ಕಿಲ್ಲ: ನಿಖಿಲ್ ನಾಮಪತ್ರ ಸಲ್ಲಿಕೆ ಹಿನ್ನೆಲೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರದ ಸುತ್ತಲಿನ 100 ಮೀಟರ್ ವ್ಯಾಪ್ತಿಯ ನಿಷೇಧಾಜ್ಞೆ ಲೆಕ್ಕಕ್ಕಿಲ್ಲದಂತಾಯಿತು. ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ(ಕಲ್ಲುಕಟ್ಟಡ) ಪರೀಕ್ಷೆ ನಡೆಯುತ್ತಿದ್ದು, 100 ಮೀ. ನಿಷೇಧಾಜ್ಞೆ ಜಾರಿಯಲ್ಲಿತ್ತು. ಆದರೆ, ಇದಕ್ಕೆ ಕ್ಯಾರೆ ಅನ್ನದ ಪೊಲೀಸರು, ಜೆಡಿಎಸ್ ನಾಯಕರು, ಮಳವಳ್ಳಿ, ಮದ್ದೂರು ತಾಲೂಕುಗಳಿಂದ ಜೆಡಿಎಸ್ ಕಾರ್ಯಕರ್ತರನ್ನು ಕರೆತಂದ ವಾಹನಗಳಿಗೆ ಕಾಲೇಜು ಆವರಣದಲ್ಲಿಯೇ ನಿಲ್ದಾಣ ವ್ಯವಸ್ಥೆ ಕಲ್ಪಿಸಿ, ಪರೀಕ್ಷಾರ್ಥಿಗಳಿಗೆ ಕಿರಿಕಿರಿ ಉಂಟು ಮಾಡಿದರು.

ಟೀ ಶರ್ಟ್, ಮುಖವಾಡಗಳ ಅಬ್ಬರ : ನಾಮಪತ್ರ ಸಲ್ಲಿಕೆಗೆ ಆಗಮಿಸಿದ ಕಾರ್ಯಕರ್ತರಿಗಾಗಿ ನಾನು ನಿಖಿಲ್ ಎಂಬ ಶೀರ್ಷಿಕೆ ಜತೆ ನಿಖಿಲ್ ಇರುವ ಫೋಟೋ ಇದ್ದ ಟೀ ಶರ್ಟ್ ವಿತರಿಸಿದ್ದು, ಬಹುತೇಕ ಜನತೆ ಟೀ ಶರ್ಟ್ ಧರಿಸಿ ಆಗಮಿಸಿದ್ದರು. ಜತೆಗೆ ಅಭ್ಯರ್ಥಿ ನಿಖಿಲ್ ಮುಖವಾಡಗಳನ್ನು ತೊಟ್ಟು ಕಾರ್ಯಕರ್ತರು ಸಂಭ್ರಮಿಸಿದರು. ಅತ್ತ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಪಾಲಿನ ಕಬ್ಬಿಣದ ಕಡಲೆ ಎನಿಸಿರುವ ಗಣಿತ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳು, ಕಿಟಕಿಗಳ ಮೂಲಕ ಕಾರ್ಯಕರ್ತರ ಹುಚ್ಚಾಟಗಳನ್ನು ನೋಡುತ್ತಿದ್ದರು.

ಕಾರ್ಯಕರ್ತರಿಗೆ ಟೋಕನ್: ಶಕ್ತಿ ಪ್ರದರ್ಶನಕ್ಕೆ ಆಗಮಿಸಿದ ಕಾರ್ಯಕರ್ತರು, ಜನತೆಗೆ ಟೋಕನ್‌ಗಳನ್ನು ವಿತರಿಸಲಾಗಿತ್ತು. ಬಸ್‌ಗಳಲ್ಲಿ ಬರುವವರಿಗೆ ಒಂದು ಬಿರಿಯಾನಿ ಪ್ಯಾಕೆಟ್ ನೀಡಲಾಯಿತು.
ಇನ್ನು ಬೈಕ್‌ಗಳಲ್ಲಿ ಬರುವವರಿಗೆ ಪೆಟ್ರೋಲ್‌ಗೆ ನೂರು ರೂ. ಕೊಟ್ಟು, ಒಂದೊಂದು ಟೋಕನ್ ನೀಡಲಾಯಿತು. ಕಾರ್ಯಕ್ರಮಕ್ಕಾಗಿ ಬಂದಿದ್ದವರು ವಾಪಸ್ಸಾಗಲು ಬಸ್ ಸೇರಿ ಇತರೆ ವಾಹನಗಳು ಸಿಗದ ಹಿನ್ನೆಲೆ ಕರೆ ತಂದಿದ್ದವರ ಮೊಬೈಲ್‌ಗೆ ಕರೆ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದ ದೃಶ್ಯಗಳು ಕಂಡುಬಂದವು.